ರಾಜ್ಯಮಟ್ಟದ ಚೆಸ್ ಪಂದ್ಯಾವಳಿ ಉದ್ಘಾಟನೆ
ಚೆಸ್ ಕ್ರೀಡೆಯು ಬುದ್ಧಿಶಕ್ತಿ ಹೆಚ್ಚಿಸುವ ಜೊತೆಯಲ್ಲಿ ಜೀವನದಲ್ಲಿ ಬರುವ ಸವಾಲು ಎದುರಿಸಲು ಬೇಕಾಗುವ ನೈಪುಣ್ಯ, ಚಾಕಚಕ್ಯತೆಯನ್ನು ಒದಗಿಸುತ್ತದೆ. ಚೆಸ್ ಬುದ್ಧಿಶಕ್ತಿ ಪ್ರಖರಗೊಳಿಸುವ ಉನ್ನತಮಟ್ಟದ ಕ್ರೀಡೆಯಾಗಿದೆ ಎಂದು ಬಿಸಿಎನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಲೋಹಿತ ನೆಲವಿಗಿ ಹೇಳಿದರು.
ಭಾನುವಾರ ಪಟ್ಟಣದ ಶಂಕರಭಾರತಿ ಕಲ್ಯಾಣ ಮಂಟಪದಲ್ಲಿ ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ಬಾಲಕ, ಬಾಲಕಿ ಹಾಗೂ ಹಿರಿಯರಿಗಾಗಿ ನಡೆದ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.ಈ ಕ್ರೀಡೆಯಲ್ಲಿ ಆಸಕ್ತಿ ಹುಟ್ಟಿಸಲು ಪಾಲಕರು ಮುಂದಾಗಬೇಕು. ಲಕ್ಷ್ಮೇಶ್ವರ ತಾಲೂಕಿನಲ್ಲಿ ಇಂಥ ಕ್ರೀಡೆಗಳಿಗೆ ತರಬೇತಿ ಮತ್ತು ಅವಕಾಶ ನೀಡುತ್ತಿರುವ ಕಾರ್ಯವನ್ನು ಗದಗ ಜಿಲ್ಲಾ ಚೆಸ್ ಅಸೋಸಿಯೇಷನ್‌ದಿಂದ ಮಾಡಲಾಗುತ್ತಿರುವುದು ಉತ್ತಮ ಸಂಗತಿಯಾಗಿದೆ. ಅದಕ್ಕೆ ಸದಾ ಸಹಕಾರ ನೀಡುವುದಾಗಿ ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಗಿರೀಶ ಅಗಡಿ ಮತ್ತು ಗದಗ ಜಿಲ್ಲಾ ಚೆಸ್ ಅಸೋಷಿಯೇಷನ್ ಸಂಘದ ಗೌರವಾಧ್ಯಕ್ಷ ರಾಮರಾವ್ ವೇರ್ಣೆಕರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಮೇರಿಕದಲ್ಲಿ ವಿಶ್ವ ಚೆಸ್ ಪ್ರಶಸ್ತಿ ವಿಜೇತ, ಅಂತಾರಾಷ್ಟ್ರೀಯ ಚೆಸ್‌ಪಟು ಹೊನ್ನಾವರದ ಸಮರ್ಥ ಜಗದೀಶರಾವ್ ಭಾಗವಹಿಸಿ ವಿಜೇತರಾಗಿದ್ದು ಎಲ್ಲರ ಗಮನ ಸೆಳೆಯಿತು. ಗದಗ, ಹಾವೇರಿ, ಧಾರವಾಡ ಸೇರಿ ವಿವಿಧ ಜಿಲ್ಲೆಗಳಿಂದ ನೂರಾರು ಚೆಸ್‌ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.