ಜಿಲ್ಲಾ ಮಟ್ಟದ ಅಂಡರ್ 7-15 ಆಯ್ಕೆ ಕ್ರೀಡೆಯಲ್ಲಿ ಎಚ್.ಎಸ್. ಚಂದ್ರಶೇಖರ್ ಸಲಹೆ
ಚೆಸ್ ಎಂಬುದು ಮಕ್ಕಳಲ್ಲಿ ಕ್ರೀಡಾ ಮನೋಭಾವ ಮತ್ತು ಬುದ್ಧಿವಿಕಾಸಕ್ಕೆ ಹೊಸ ಉತ್ತೇಜನ ನೀಡಲಿದ್ದು, ಜೊತೆಗೆ ಮಾನಸಿಕ ಶಕ್ತಿ ಬಲಪಡಿಸುತ್ತದೆ ಎಂದು ಎವಿಕೆ ಪಿಯು ಕಾಲೇಜು ಪ್ರಾಂಶುಪಾಲ ಹೆಚ್.ಎಸ್. ಚಂದ್ರಶೇಖರ್ ಸಲಹೆ ನೀಡಿದರು.
ನಗರದ ಎವಿಕೆ ಪಿಯು ಕಾಲೇಜು ಸಭಾಂಗಣದಲ್ಲಿ ಹಾಸನ ಜಿಲ್ಲಾ ಚೆಸ್ ಅಸೋಸಿಯೇಷನ್ ಇವರ ಸಂಯುಕ್ತಾಶ್ರಯದಲ್ಲಿ ಕದಂಬ ಚೆಸ್ ಅಕಾಡೆಮಿ, ಜನಮಿತ್ರ ಡೈಲಿ ನ್ಯೂಸ್, ಎವಿಕೆ ಪಿಯು ಕಾಲೇಜು ಹಾಗೂ ಕ್ವಾರ್ಕ್ ಅಕಾಡೆಮಿ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೭ರಿಂದ ೧೫ ವರ್ಷ ಒಳಗಿನ ಜಿಲ್ಲಾ ಮಟ್ಟದ ಆಯ್ಕೆ ಚೆಸ್ ಪಂದ್ಯಾವಳಿಯನ್ನು ಚೆಸ್ ಆಟ ಆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಚೆಸ್ ಕ್ರೀಡೆ ಕೇವಲ ಮನರಂಜನೆಗೆ ಸೀಮಿತವಲ್ಲ; ಅದು ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ, ನಿರ್ಣಯ ಸಾಮರ್ಥ್ಯ ಹಾಗೂ ವಿಶ್ಲೇಷಣಾ ಶಕ್ತಿಯನ್ನು ವೃದ್ಧಿಸುತ್ತದೆ ಎಂದರು. ಬಾಲ್ಯದಿಂದಲೇ ಚೆಸ್ ಅಭ್ಯಾಸ ಮಾಡುವುದರಿಂದ ಮಕ್ಕಳ ಮೆದುಳು ಚುರುಕುಗೊಳ್ಳುತ್ತದೆ. ಪ್ರತಿಯೊಂದು ಹೆಜ್ಜೆಯನ್ನೂ ಯೋಚಿಸಿ ಇಡುವ ಈ ಆಟ ಜೀವನದ ಪ್ರತಿಯೊಂದು ಹಂತದಲ್ಲೂ ಯುಕ್ತಿಚಾತುರ್ಯವನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಗಳಿಗೂ ಸಮಾನ ಮಹತ್ವ ನೀಡಬೇಕು. ಕ್ರೀಡೆಗಳಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಅವರು ಹೇಳಿದರು.ಇದೇ ಸಂದರ್ಭದಲ್ಲಿ ಮಿಲೇನಿಯಂ ವರ್ಲ್ಡ್ ಶಾಲೆ ನಿರ್ದೇಶಕ ಕೀರ್ತಿ ಪ್ರಸಾದ್ ಮಾತನಾಡಿ, ಗುರಿ ಹೊಂದಿದ ವಿದ್ಯಾರ್ಥಿಯೇ ಸಾಧನೆ ಮಾಡಬಲ್ಲನು. ಯಾವುದೇ ಕ್ರೀಡೆಗೆ ಶ್ರದ್ಧೆ, ನಿಯಮಿತ ಅಭ್ಯಾಸ ಹಾಗೂ ಶಿಸ್ತಿನ ಅವಶ್ಯಕತೆ ಇದೆ. ವಿಶೇಷವಾಗಿ ಚೆಸ್ ಕ್ರೀಡೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದರ ಜೊತೆಗೆ ಸಮಸ್ಯೆ ಪರಿಹಾರ ಕೌಶಲ್ಯವನ್ನು ಹೆಚ್ಚಿಸುತ್ತದೆ ಎಂದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಆಟಗಾರನೂ ಗೆದ್ದವನಷ್ಟೇ ಮಹತ್ವ ಹೊಂದಿದ್ದಾನೆ ಎಂದು ತಿಳಿಸಿದರು.ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ರಶ್ಮಿ ಕಿರಣ್ ಮಾತನಾಡಿ, ಕ್ರೀಡೆಯಲ್ಲಿ ಗೆಲುವು-ಸೋಲು ಸಹಜ. ಸೋತಾಗ ನಿರಾಶೆಯಾಗದೆ ಅದನ್ನು ಪಾಠವಾಗಿ ಸ್ವೀಕರಿಸಬೇಕು. ಗೆಲುವು ಬಂದಾಗ ಅಹಂಕಾರಪಡದೆ ಸಮತೋಲನದಿಂದ ಇರಬೇಕು. ಈ ಗುಣಗಳು ಜೀವನದ ಯಶಸ್ಸಿಗೆ ಪೂರಕವಾಗುತ್ತವೆ. ಪಾಠದ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸುವ ಮಕ್ಕಳು ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಹೊಂದುತ್ತಾರೆ ಎಂದು ಕಿವಿಮಾತು ಹೇಳಿದರು.ಚೆಸ್ ಆಟೋಟದಲ್ಲಿ ವಿವಿಧ ಭಾಗಗಗಳಿಂದ ಆಗಮಿಸಿದ್ದ ನೂರಾರು ಮಕ್ಕಳು ಸ್ಪರ್ಧೆಯಲ್ಲಿ ಅತ್ಯಂತ ಉತ್ಸಹದಿಂದ ಪಾಲ್ಗೊಂಡು ಯಶಸ್ವಿಗೊಳಿಸಿದರು. ಇದೇ ವೇಳೆ ಕದಂಬ ಚೆಸ್ ಅಕಾಡೆಮಿ ಸ್ಥಾಪಕರಾದ ಎಂ.ಟಿ. ತ್ಯಾಗರಾಜು, ಜಿಲ್ಲಾ ಚೆಸ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ರಾಧಾ ಜಗದೀಶ್, ಚನ್ನಪಟ್ಟಣ ಶಾಖೆಯ ತರಬೇತುದಾರರಾದ ಕಾವ್ಯ ಚಂದನ್, ನಯನ, ಸತೀಶ್, ಯೋಗೇಶ್ವರಿ, ಜಗದೀಶ್, ಎಮ್. ಎಚ್. ಆಕಾಶ್ ಇತರರು ಪಾಲ್ಗೊಂಡಿದ್ದರು.