- ತಿಪ್ಪಗೊಂಡನಹಳ್ಳಿ ಅನುಷಾ ಸಾವು । ವೈದ್ಯ-ಸಿಬ್ಬಂದಿ ಎಡವಟ್ಟು: ಆರೋಪ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಗೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೇ ನಿರ್ಲಕ್ಷಿಸಿದ್ದರಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಆಸ್ಪತ್ರೆ ಮುಂಭಾಗದಲ್ಲಿ ಶವ ಇಟ್ಟು ಪ್ರತಿಭಟಿಸಿದ ಘಟನೆ ಭಾನುವಾರ ನಡೆಯಿತು.ಈ ವೇಳೆ ಸಂಬಂಧಿ ಉಷಾ ಮಾತನಾಡಿ, ತಾಲೂಕಿನ ತಿಪ್ಪಗೊಂಡನಹಳ್ಳಿಯ ಅನುಷಾ (34) ಅನಾರೋಗ್ಯದಿಂದಾಗಿ ಭಾನುವಾರ ಬೆಳಗ್ಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ಈ ವೇಳೆ ಆಕೆಗೆ ಏನಾಗಿದೆ ಎಂಬುದನ್ನೂ ವಿಚಾರಿಸದ ವೈದ್ಯರು ಆಸ್ಪತ್ರೆಯಲ್ಲಿದ್ದ ಸಿಬ್ಬಂದಿಗೆ ತಪಾಸಣೆ ಮಾಡುವಂತೆ ತಿಳಿಸಿ ಕಳಿಸಿದ್ದಾರೆ. ಕರ್ತವ್ಯದಲ್ಲಿದ್ದ ಸಿಬ್ಬಂದಿ ಪರೀಕ್ಷೆ ಮಾಡಿ, ಇನ್ಸುಲಿನ್ ಇಂಜಕ್ಷನ್ ನೀಡಿದ 5 ನಿಮಿಷಗಳಲ್ಲೇ ಅನುಷಾ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾಳೆ ಎಂದು ದೂರಿದರು.
ಈ ಬಗ್ಗೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರಪ್ಪ ಅವರನ್ನು ವಿಚಾರಿಸಿದಾಗ ಮೃತಳ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಯಾರ ತಪ್ಪಿನಿಂದ ಮಹಿಳೆ ಸಾವಾಗಿದೆ ಎಂಬುದು ತಿಳಿಯಲಿದೆ ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಮೃತ ಮಹಿಳೆ ಸಂಬಂಧಿಕರಾದ ದೊಡ್ಡಮ್ಮ, ಚೇತನ್, ಶಿಲಾ, ಮಹಾದೇವಯ್ಯ, ಸುಮ, ರತ್ನಮ್ಮ, ಸೌಭಾಗ್ಯ, ಚಂದ್ರಕಲಾ, ಶೀಲಾ, ದಿಗ್ಗೇನಹಳ್ಳಿ ನಾಗರಾಜ್, ಪಟ್ಲಿ ನಾಗರಾಜ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
-22ಕೆಸಿಎನ್ಜಿ3: