ಹಾ.ರಾ. ನಾಗರಾಜ್ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರ

KannadaprabhaNewsNetwork |  
Published : Feb 23, 2026, 01:45 AM IST
22ಎಚ್ಎಸ್ಎನ್5 :  | Kannada Prabha

ಸಾರಾಂಶ

ನಗರದ ಶಿವಾಜ್ಯೋತಿ ಕಲ್ಯಾಣ ಮಂಟಪದಲ್ಲಿ ಹಾ.ರಾ. ನಾಗರಾಜ್ ಅವರ ಹುಟ್ಟುಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಭಾನುವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅರ್ಥಪೂರ್ಣ ಕಾರ್ಯಕ್ರಮಕ್ಕೆ ಶಾಸಕ ಎಚ್.ಪಿ. ಸ್ವರೂಪ್ ಚಾಲನೆಕನ್ನಡಪ್ರಭ ವಾರ್ತೆ ಹಾಸನ

ನಗರದ ಶಿವಾಜ್ಯೋತಿ ಕಲ್ಯಾಣ ಮಂಟಪದಲ್ಲಿ ಹಾ.ರಾ. ನಾಗರಾಜ್ ಅವರ ಹುಟ್ಟುಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಭಾನುವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಾ.ರಾ. ನಾಗರಾಜ್ ಅವರು ತಮ್ಮ ಜೀವನಕಾಲದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ ಜನಮನ್ನಣೆ ಗಳಿಸಿದ್ದನ್ನು ಉಲ್ಲೇಖಿಸಿದರು. ಆರ್ಥಿಕವಾಗಿ ಹಿಂದುಳಿದವರು, ಸಂಕಷ್ಟದಲ್ಲಿದ್ದ ಕುಟುಂಬಗಳು ಹಾಗೂ ಸಾಮಾನ್ಯ ಜನರ ನೆರವಿಗೆ ಸದಾ ಮುಂಚೂಣಿಯಲ್ಲಿ ನಿಂತು ಸಹಾಯಹಸ್ತ ಚಾಚಿದವರು ಎಂದು ಕೊಂಡಾಡಿದರು. “ಹಾ.ರಾ. ನಾಗರಾಜ್ ಅವರು ಬದುಕಿದ್ದಾಗಲೇ ಜನರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದರು. ಸಹಾಯ ಮಾಡುವುದು ಅವರ ಸ್ವಭಾವವಾಗಿತ್ತು. ಸಮಾಜದ ಒಳಿತು ಅವರ ಧ್ಯೇಯವಾಗಿತ್ತು,” ಎಂದು ಸ್ಮರಿಸಿದರು.ಅವರ ಪುತ್ರ ಪ್ರಶಾಂತ್ ನಾಗರಾಜ್ ಅವರು ಕೂಡ ತಂದೆಯ ಹೆಜ್ಜೆಹಾದಿಯಲ್ಲಿ ಸಾಗುತ್ತಾ ನಗರಸಭೆ ಸದಸ್ಯರಾಗಿ ಜನಪರ ಕೆಲಸಗಳನ್ನು ಮಾಡಿದ್ದಾರೆ. ಸ್ಥಳೀಯ ಅಭಿವೃದ್ಧಿ, ಮೂಲಭೂತ ಸೌಲಭ್ಯಗಳ ಕಲ್ಪನೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರದಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಪಕ್ಷದ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡು ಜನಸೇವೆಗೆ ಆದ್ಯತೆ ನೀಡಿದ್ದರು ಎಂದು ಹೇಳಿದರು.

ಇಂದು ಹಾ.ರಾ. ನಾಗರಾಜ್ ಹಾಗೂ ಪ್ರಶಾಂತ್ ನಾಗರಾಜ್ ಇಬ್ಬರೂ ನಮ್ಮೊಂದಿಗಿಲ್ಲ ಎಂಬುದು ತುಂಬಾ ಬೇಸರದ ಸಂಗತಿ. ಸಮಾಜಕ್ಕೆ ಸೇವೆ ಸಲ್ಲಿಸಿದ ಇಂತಹ ವ್ಯಕ್ತಿತ್ವಗಳನ್ನು ಕಳೆದುಕೊಂಡಿರುವುದು ಹಾಸನಕ್ಕೆ ನಷ್ಟವಾಗಿದೆ. ಅವರಿಬ್ಬರ ಆತ್ಮಕ್ಕೂ ಶಾಂತಿ ಸಿಗಲಿ ಎಂದು ಭಾವನಾತ್ಮಕವಾಗಿ ನಮನ ಸಲ್ಲಿಸಿದರು. ಅವರ ಹೆಸರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಅಭಿಪ್ರಾಯಪಟ್ಟರು. ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ನೇರವಾಗಿ ಉಪಕಾರಿಯಾಗುತ್ತವೆ. ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯವೇ ಭಾಗ್ಯ. ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಸಮಯಕ್ಕೆ ಚಿಕಿತ್ಸೆ ಪಡೆಯುವುದು ಅತ್ಯಗತ್ಯ ಎಂದು ಅವರು ಕರೆ ನೀಡಿದರು.

ಶಿಬಿರದಲ್ಲಿ ವಿವಿಧ ವೈದ್ಯಕೀಯ ಪರೀಕ್ಷೆಗಳು ಉಚಿತವಾಗಿ ನಡೆಸಲಾಗಿದ್ದು, ಅನೇಕ ನಾಗರಿಕರು ಇದರ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ಅನೂಪ್, ನಗರಸಭೆ ಸದಸ್ಯ ನವೀನ್, ಕನ್ನಡಪರ ಹೋರಾಟಗಾರ ಬಾಳ್ಳುಗೋಪಾಲ್, ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್, ನಗರಸಭೆ ಮಾಜಿ ಸದಸ್ಯ ಮಹೇಶ್, ಕಸಾಪ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿವಿಲ್‌ ನ್ಯಾಯಾಧೀಶರಾಗಿ ಮಾಳೇನಳ್ಳಿಯ ಮಣಿಕಂಠ ಆಯ್ಕೆ
ಚೆಸ್‌ಕ್ರೀಡೆ ಮಕ್ಕಳ ಬುದ್ದಿ ವಿಕಸನಕ್ಕೆ ಸಹಕಾರಿ