ಪರಪ್ಪನ ಜೈಲು ಸೇರಿದ ಶಾಸಕ ಚಂದ್ರು ಲಮಾಣಿ

KannadaprabhaNewsNetwork |  
Published : Feb 23, 2026, 01:45 AM IST
ಆಳ್ವಾಸ್‌ | Kannada Prabha

ಸಾರಾಂಶ

ಗುತ್ತಿಗೆದಾರನಿಂದ 5 ಲಕ್ಷ ರು. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಸೇರಿ ಮೂವರು ಆರೋಪಿಗಳು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಪಾಲಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗುತ್ತಿಗೆದಾರನಿಂದ 5 ಲಕ್ಷ ರು. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಸೇರಿ ಮೂವರು ಆರೋಪಿಗಳು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಪಾಲಾಗಿದ್ದಾರೆ.

ಗದಗ ಲೋಕಾಯುಕ್ತ ಪೊಲೀಸರು ಮೂವರು ಆರೋಪಿಗಳನ್ನು ಭಾನುವಾರ ಬೆಳಗ್ಗೆ ಬೆಂಗಳೂರಿಗೆ ಕರೆತಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಶಾಸಕ ಚಂದ್ರು ಲಮಾಣಿ, ಅವರ ಆಪ್ತ ಸಹಾಯಕ ಮಂಜುನಾಥ್‌ ವಾಲ್ಮೀಕಿ, ಖಾಸಗಿ ಆಪ್ತ ಸಹಾಯಕ ಗುರುನಾಯ್ಕ್‌ ಅವರನ್ನು ಮಾ.2ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು.

ಪ್ರಕರಣ ಹಿನ್ನೆಲೆ:

ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಸಂಕದಾಳ ಗ್ರಾಮ ವ್ಯಾಪ್ತಿಯಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ಚೆಕ್‌ ಡ್ಯಾಂ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಪ್ರಥಮ ದರ್ಜೆ ಗುತ್ತಿಗೆದಾರ ವಿಜಯ್ ಪೂಜಾರ್‌ ಈ ಗುತ್ತಿಗೆ ಪಡೆದುಕೊಂಡಿದ್ದರು. ಈ ಬಾಕಿ ಕಾಮಗಾರಿ ಮುಂದುವರೆಸಲು ಶಾಸಕ ಚಂದ್ರು ಲಮಾಣಿ ಅವರು ಗುತ್ತಿಗೆದಾರ ವಿಜಯ್‌ ಪೂಜಾರ್‌ಗೆ 11 ಲಕ್ಷ ರು. ಲಂಚಕ್ಕೆ ಬೇಡಿಕೆ ಇರಿಸಿದ್ದರು ಎನ್ನಲಾಗಿದೆ.

ಈ ಸಂಬಂಧ ಗುತ್ತಿಗೆದಾರ ವಿಜಯ್‌ ಪೂಜಾರ್‌ ಗದಗ ಲೋಕಾಯುಕ್ತ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದರಂತೆ ಫೆ.21ರಂದು ಲಕ್ಮೇಶ್ವರದ ಬಾಲಾಜಿ ಆಸ್ಪತ್ರೆಯಲ್ಲಿ ಗುತ್ತಿಗೆದಾರ ವಿಜಯ್‌ರಿಂದ 5 ಲಕ್ಷ ರು. ಲಂಚ ಸ್ವೀಕರಿಸುವಾಗ ಮೂವರು ಆರೋಪಿಗಳು ಲೋಕಾಯುಕ್ತ ಪೊಲೀಸರಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು. ಬಳಿಕ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ಆಡಿಯೋ ‘ಲೋಕಾ’ ವಶಕ್ಕೆ:

ಗುತ್ತಿಗೆದಾರ ಮತ್ತು ಶಾಸಕ ಚಂದ್ರು ಲಮಾಣಿ ನಡುವೆ ನಡೆದ ಸಂಭಾಷಣೆ ಆಡಿಯೋವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಶಾಸಕರು ಕಮಿಷನ್‌ ಬಗ್ಗೆ ಮಾತನಾಡಿರುವುದು ಹಾಗೂ ಗುತ್ತಿಗೆದಾರನಿಗೆ ಬೆದರಿಕೆ ಹಾಕಿರುವುದು ಆಡಿಯೋದಲ್ಲಿದೆ ಎನ್ನಲಾಗಿದೆ. ಈ ಸಂಬಂಧ ಗದಗ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.ಗುತ್ತಿಗೆದಾರನಿಗೆ ಲಮಾಣಿ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್‌:ರಸ್ತೆ ಕಾಮಗಾರಿಗಾಗಿ ಗುತ್ತಿಗೆದಾರರಿಂದ ₹5 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿ ಬಿದ್ದಿರುವ ಶಾಸಕ ಡಾ. ಚಂದ್ರು ಲಮಾಣಿ ಅವರದ್ದು ಎನ್ನಲಾದ ಆಡಿಯೋಗಳು ಭಾನುವಾರ ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

ಆಡಿಯೋದಲ್ಲೇನಿದೆ?:

​ಶಾಸಕ: ಪ್ರೀತಿ ವಿಶ್ವಾಸಕ್ಕೆ ಹೇಳಿದ್ರೆ ಹೀಗೆಲ್ಲ ನಾಟಕ ಮಾಡ್ತೀಯಾ? ಯಲ್ಲಮ್ಮಗೆ ಹೋಗಿದ್ದೆ, ಮಲ್ಲಮ್ಮಗೆ ಹೋಗಿದ್ದೆ ಅಂತ ಕಥೆ ಹೇಳ್ತೀಯಾ? ನಿಮ್ಮ ತಾಲೂಕಿನಲ್ಲಿ ಮಾಡಿದ ಹಾಗೆ ಇಲ್ಲಿ ಮಾಡಿದ್ರೆ ನಡ ಮುರೀತಿನಿ ಎಚ್ಚರಿಕೆ!​ಗುತ್ತಿಗೆದಾರ: ಸ್ವಲ್ಪ ಅಮೌಂಟ್ ಪ್ರಾಬ್ಲಂ ಇತ್ತು ಸರ್. ಇದೊಂದು ಸಾರಿ ತಪ್ಪಾಗಿದೆ.. ಎರಡು (ಶೇ. 2) ಅಂತ ಅಂದಿದ್ರಿ.

​ಶಾಸಕ: ಹೇ ಬಿಡೋ. ನನಗೇನು ಗೊತ್ತಿಲ್ವಾ? ಕನ್ಪೂಷನ್ ಮಾಡ್ತಿಯಾ? ಹೇ ಅದು (ಹಣ) ಕೊಡದಿದ್ರೆ ವರ್ಕ್ ಆರ್ಡರ್ ಕ್ಯಾನ್ಸಲ್ ಮಾಡು, ರೀ- ಟೆಂಡರ್ ಮಾಡು ಅಂತ ಮಂಜುನಾಥ್‌ಗೆ (ಪಿಎ) ಈಗಲೇ ಹೇಳ್ತೀನಿ.

ಹೀಗೆ ಗುತ್ತಿಗೆದಾರನಿಗೆ ಶಾಸಕರು ಅವಾಜ್ ಹಾಕಿದ ಆಡಿಯೋ ಸಂಭಾಷಣೆ ಸಾಗುತ್ತಲೇ ಹೋಗುತ್ತದೆ. ಇದು ಜಿಲ್ಲೆಯ ರಾಜಕೀಯ ವಲಯದಲ್ಲಿ ಮಾತ್ರವಲ್ಲ, ರಾಜ್ಯ ರಾಜಕಾರಣದಲ್ಲಿಯೇ ಸಂಚಲನಕ್ಕೆ ಕಾರಣವಾಗಿದೆ.​ಬಿಕೋ ಎನ್ನುತ್ತಿದೆ ಶಾಸಕರ ಮನೆ :

​ಶಾಸಕರ ಬಂಧನವಾಗುತ್ತಿದ್ದಂತೆ ಅವರ ಲಕ್ಷ್ಮೇಶ್ವರದ ಬಾಡಿಗೆ ಮನೆಯಲ್ಲಿ ಮೌನ ಆವರಿಸಿದೆ. ಯಾವಾಗಲೂ ನೂರಾರು ಕಾರ್ಯಕರ್ತರಿಂದ ತುಂಬಿರುತ್ತಿದ್ದ ಮಂಜುನಾಥ ಬಡಾವಣೆಯ ನಿವಾಸದಲ್ಲಿ ಈಗ ಕೇವಲ ಕೆಲಸಗಾರರು ಉಳಿದಿದ್ದಾರೆ. ಲೋಕಾಯುಕ್ತ ದಾಳಿಯ ಸುಳಿವು ಸಿಗುತ್ತಿದ್ದಂತೆ ಶಾಸಕರ ಪತ್ನಿ ಸರೋಜಾ ಅವರು ಆಸ್ಪತ್ರೆಯ ನೆಪ ಹೇಳಿ ಮಗುವಿನೊಂದಿಗೆ ಕಾರಿನಲ್ಲಿ ಬೇರೆಡೆ ತೆರಳಿದ್ದಾರೆ. ಮನೆಯ ಮುಂದೆ ಶಾಸಕರ ಪ್ರೀತಿಯ ಫಾರ್ಚುನರ್ ವಾಹನ ಅನಾಥವಾಗಿ ನಿಂತಿದೆ.​ಸ್ವಾಮೀಜಿ ಎಂಟ್ರಿ:

ಶನಿವಾರ ಸ್ವಾಮೀಜಿಯೊಬ್ಬರು ನಮ್ಮ ಶಾಸಕರ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿ ಬಿಡುಗಡೆ ಮಾಡಿದ ಆಡಿಯೋದಲ್ಲಿ ಮಾತನಾಡಿದ್ದ ಸ್ವಾಮೀಜಿ ಭಾನುವಾರ ಆಡಿಯೋ ಮೂಲಕವೇ ಸ್ಪಷ್ಟನೆ ನೀಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ‘ಆಡಿಯೋದಲ್ಲಿ ಶಾಸಕರ ವಿರುದ್ಧ ಮಾತನಾಡಿದ್ದು ಸತ್ಯ. ಆದರೆ, ಈ ಲೋಕಾಯುಕ್ತ ಟ್ರ್ಯಾಪ್‌ಗೂ, ನನಗೂ ಸಂಬಂಧವಿಲ್ಲ’ ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ. ಶಾಸಕರು ನನಗೆ ತೊಂದರೆ ಮಾಡಿದ ವೇಳೆ ಸಿಟ್ಟಿನ ಭರದಲ್ಲಿ ಮಾತನಾಡಿದ್ದೇನೆ. ಆದರೆ, ಇದಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ. ಅವಶ್ಯವಿದ್ದರೆ ತನಿಖೆಗಾಗಿ ನನ್ನ ಎರಡು ಮೊಬೈಲ್ ಫೋನ್‌ಗಳನ್ನು ನೀಡಲು ಸಿದ್ಧ ಎಂದು ಹೇಳೀದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿವಿಲ್‌ ನ್ಯಾಯಾಧೀಶರಾಗಿ ಮಾಳೇನಳ್ಳಿಯ ಮಣಿಕಂಠ ಆಯ್ಕೆ
ಚೆಸ್‌ಕ್ರೀಡೆ ಮಕ್ಕಳ ಬುದ್ದಿ ವಿಕಸನಕ್ಕೆ ಸಹಕಾರಿ