ಬುದ್ಧಿಶಕ್ತಿ ಹೆಚ್ಚಳಕ್ಕೆ ಈ ಕ್ರೀಡೆ ಸಹಕಾರಿ: ಮಧುಕರ್

KannadaprabhaNewsNetwork | Updated : Apr 08 2024, 02:23 PM IST

ಸಾರಾಂಶ

ಈಗಾಗಲೇ ತುಮಕೂರು ಹಾಗೂ ಮಂಡ್ಯದಲ್ಲಿ ಚೆಸ್ ಅಕಾಡೆಮಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷ ಹತ್ತಾರು ರಾಜ್ಯ, ಜಿಲ್ಲಾಮಟ್ಟದ ಟೂರ್ನಿಗಳನ್ನು ಅಲ್ಲಿ ನಡೆಸಲಾಗುತ್ತಿದೆ. ಇದೀಗ ರಾಮನಗರ ಜಿಲ್ಲೆಯನ್ನು ಗುರಿಯಾಗಿಸಿಕೊಂಡು ಚನ್ನಪಟ್ಟಣದಲ್ಲಿ ಎಂ.ಎಂ. ಚೆಸ್ ಅಕಾಡೆಮಿ ಆರಂಭಗೊಂಡಿದೆ.

 ಚನ್ನಪಟ್ಟಣ : ಬುದ್ಧಿಶಕ್ತಿ ಹೆಚ್ಚಳಕ್ಕೆ ಚೆಸ್‌ನಂಥ ಆಟಗಳು ಬಹಳ ಸಹಕಾರಿಯಾಗಿವೆ. ಚೆಸ್ ಆಟದಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ಯೋಚನಾ ಸಾಮರ್ಥ್ಯ ಹೆಚ್ಚಳಗೊಳ್ಳುತ್ತದೆ ಎಂದು ಕರ್ನಾಟಕ ಚೆಸ್ ಅಸೋಷಿಯೇಷನ್ ಉಪಾಧ್ಯಕ್ಷ ಮಧುಕರ್ ಟಿ.ಎನ್. ತಿಳಿಸಿದರು.

ನಗರದ ಕೆಂಪೇಗೌಡ ಬಡಾವಣೆಯಲ್ಲಿ ನೂತನವಾಗಿ ಆರಂಭಗೊಂಡ ಎಂ.ಎಂ. ಚೆಸ್ ಅಕಾಡೆಮಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚೆಸ್ ಆಟಕ್ಕೂ ನಮ್ಮ ಜೀವನಕ್ಕೂ ಸಾಕಷ್ಟು ಸಾಮ್ಯತೆಯಿದೆ. ಚೆಸ್ ಆಟದಲ್ಲಿ ಎದುರಾಗುವ ಸವಾಲುಗಳನ್ನು ನಮ್ಮ ಬುದ್ಧಿಶಕ್ತಿಯಿಂದ ಮೆಟ್ಟಿ ನಿಂತು ಮುನ್ನಡೆಯುವಂತೆಯೇ ನಮ್ಮ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿನಿಲ್ಲಬೇಕಾಗಿದ್ದು, ಈ ನಿಟ್ಟಿನಲ್ಲಿ ಸವಾಲುಗಳನ್ನು ಎದುರಿಸುವ ಚಾಕಚಕ್ಯತೆಯನ್ನು ಚೆಸ್ ನಮಗೆ ಕಲಿಸಿಕೊಡುತ್ತದೆ ಎಂದು ತಿಳಿಸಿದರು.

ಚೆಸ್ ಹಬ್ ನಿರ್ಮಾಣ: ಈಗಾಗಲೇ ತುಮಕೂರು ಹಾಗೂ ಮಂಡ್ಯದಲ್ಲಿ ಚೆಸ್ ಅಕಾಡೆಮಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷ ಹತ್ತಾರು ರಾಜ್ಯ, ಜಿಲ್ಲಾಮಟ್ಟದ ಟೂರ್ನಿಗಳನ್ನು ಅಲ್ಲಿ ನಡೆಸಲಾಗುತ್ತಿದೆ. ಇದೀಗ ರಾಮನಗರ ಜಿಲ್ಲೆಯನ್ನು ಗುರಿಯಾಗಿಸಿಕೊಂಡು ಚನ್ನಪಟ್ಟಣದಲ್ಲಿ ಎಂ.ಎಂ. ಚೆಸ್ ಅಕಾಡೆಮಿ ಆರಂಭಗೊಂಡಿದೆ. ಈ ಮೂರು ಜಿಲ್ಲೆಗಳು ಸೇರಿಸಿ ಒಂದು ಚೆಸ್ ಹಬ್ ನಿರ್ಮಾಣ ಮಾಡುವ ಉದ್ದೇಶವಿದೆ ಎಂದರು.

ಅಂತಾರಾಷ್ಟ್ರೀಯ ಚೆಸ್ ತರಬೇತುದಾರೆ ಮಾಧುರಿ ಜೈನ್ ಮಾತನಾಡಿ, ಚೆಸ್ ಕಲಿಯಲು ಆಸಕ್ತಿ ಮುಖ್ಯವೇ ಹೊರತು ವಯಸ್ಸಲ್ಲ. ನಾನು ಚೆಸ್ ಆಡಲು ಶುರುಮಾಡಿದಾಗ ೨೧ ವರ್ಷ, ಮದುವೆಯಾಗುವ ವಯಸ್ಸಿನಲ್ಲಿ ಚೆಸ್ ಆಡುವುದು ಕಲಿಯಬೇಕಾ ಎಂದರು. ಆದರೆ, ನಾನು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ಚೆಸ್‌ನಲ್ಲಿ ಇಂದು ಸಾಕಷ್ಟು ಅವಕಾಶಗಳು ಇವೆ. ಚೆಸ್‌ನಲ್ಲಿ ಪದಕ ಪಡೆದರೆ, ಮೆಡಿಕಲ್, ಇಂಜಿಯರಿಂಗ್ ಸೀಟ್‌ನಲ್ಲಿ ಅವಕಾಶಗಳು ಲಭಿಸುತ್ತವೆ. ಪದವಿ ಪಡೆದು ಚೆಸ್‌ನಲ್ಲಿ ಸಾಧನೆ ಮಾಡುವವರಿಗೆ ಉದ್ಯೋಗದಲ್ಲೂ ಅವಕಾಶ ಸಿಗುತ್ತಿವೆ ಎಂದು ಮಾಹಿತಿ ನೀಡಿದರು.

ಚೆಸ್‌ಪಟ್ಟಣವಾಗಲಿ: ರಾಮನಗರ ಜಿಲ್ಲಾ ಚೆಸ್ ಅಸೋಷಿಯೇಷನ್ ಅಧ್ಯಕ್ಷ ಬಾಲಸುಬ್ರಮಣ್ಯಂ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದುಕೊಂಡು ಹೋಗುವ ಉದ್ದೇಶದೊಂದಿಗೆ ಮಾಧುರಿ ಜೈನ್ ಚನ್ನಪಟ್ಟಣದಲ್ಲಿ ಚೆಸ್ ಅಕಾಡೆಮಿ ಆರಂಭಿಸಿದ್ದಾರೆ. ೫ವರ್ಷಕ್ಕಿಂತ ಮೇಲ್ಪಟ್ಟ ಯಾರು ಬೇಕಾದರೂ ಚೆಸ್ ಕೋಚಿಂಗ್‌ಗೆ ಸೇರಬಹುದಾಗಿದೆ. ಮೊದಲು ಅವರ ಸಾಮರ್ಥ್ಯ ಪರೀಕ್ಷಿಸಿ ಅದಕ್ಕೆ ತಕ್ಕಂತೆ ತರಬೇತಿ ನೀಡಲಾಗುವುದು. ವಾರಕ್ಕೆ ಮೂರು ತರಗತಿಗಳು ಇರುತ್ತವೆ. ಚನ್ನಪಟ್ಟಣ ಮುಂದೆ ಚೆಸ್‌ಪಟ್ಟಣವಾಗಿ ಹೆಸರು ಮಾಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಚೆಸ್ ಅಸೋಷಿಯೇಷನ್ ಖಜಾಂಚಿ ಮಂಜುನಾಥ್ ಜೈನ್, ಬಾಲು ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ವೆಂಕಟಸುಬ್ಬಯ್ಯ ಚೆಟ್ಟಿ, ಕೆಂಪರಾಜು, ಭಾರತಿ ಬಬಲೇಶ್ವರ, ಡಾ. ಕೆ.ಪಿ.ಶೈಲಜಾ ಇತರರು ಇದ್ದರು.

Share this article