ಚದುರಂಗ ಬುದ್ಧಿವಂತಿಕೆಯಿಂದ ಆಡುವ ಆಟ: ಶಾಸಕ ಭೀಮಣ್ಣ ನಾಯ್ಕ

KannadaprabhaNewsNetwork | Published : Nov 6, 2024 12:31 AM

ಸಾರಾಂಶ

ರಾಜಮಹಾರಾಜರ ಕಾಲದಿಂದ ಚದುರಂಗ ಕ್ರೀಡೆ ಬಂದಿದೆ. ಇಂದು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತಿರುವ ಕ್ರೀಡೆಯಾಗಿದೆ.

ಶಿರಸಿ: ಚದುರಂಗ ಕ್ರೀಡೆಯು ದೇಹಕ್ಕೆ ದಂಡನೆಯಿಲ್ಲದೇ ತಾಳ್ಮೆ ಹಾಗೂ ಬುದ್ಧಿವಂತಿಕೆಯಿಂದ ಆಡುವ ಆಟವಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ಮಂಗಳವಾರ ನಗರದ ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಪಪೂ ಶಾಲಾ ಉಪನಿರ್ದೇಶಕರ ಕಚೇರಿ, ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಚೆಸ್ ಪಂದ್ಯಾವಳಿ ೨೦೨೪ ಉದ್ಘಾಟಿಸಿ, ಮಾತನಾಡಿದರು.ಶಿರಸಿ ಶೈಕ್ಷಣಿಕ ಜಿಲ್ಲೆಯು ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸುತ್ತಿದೆ. ಕ್ರೀಡಾಪಟುಗಳು ನಿರ್ಣಾಯಕರ ನಿರ್ಣಯಕ್ಕೆ ಬದ್ಧವಾಗಿ, ತಮ್ಮ ಪ್ರತಿಭೆಯನ್ನು ಪ್ರಚುರಪಡಿಸಬೇಕು ಎಂದ ಅವರು, ರಾಜಮಹಾರಾಜರ ಕಾಲದಿಂದ ಚದುರಂಗ ಕ್ರೀಡೆ ಬಂದಿದೆ. ಇಂದು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತಿರುವ ಕ್ರೀಡೆಯಾಗಿದೆ ಎಂದರು.ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಮಾತನಾಡಿ, ಚದುರಂಗ ಬುದ್ಧಿವಂತಿಕೆ ಆಟವಾಗಿದ್ದು, ಆರೋಗ್ಯಕರ ಸ್ಪರ್ಧೆ ನಡೆದು, ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಕೀರ್ತಿ ಹೆಚ್ಚಿಸಬೇಕು ಎಂದರು.ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಕಾಲೇಜು ಸಮಿತಿ ಉಪಾಧ್ಯಕ್ಷ ಬಿ.ಕೆ. ಕೆಂಪರಾಜು, ಪಪೂ ಕಾಲೇಜುಗಳ ಉಪನಿರ್ದೇಶಕ ರಾಜಪ್ಪ ಕೆ.ಎಚ್., ವೀಕ್ಷಕರಾದ ಸುಖೇಶ್ ಶೆಟ್ಟಿ, ತಿಪ್ಪೇಸ್ವಾಮಿ, ಗ್ರ್ಯಾಂಡ್ ಮಾಸ್ಟರ್‌ಗಳಾದ ಡಾ. ಶ್ರೀಪಾದ, ನವೀನ ಹೆಗಡೆ, ಕಾಲೇಜು ಸಮಿತಿ ಸದಸ್ಯರಾದ ಪರಮೇಶ್ವರ ಶೇಟ್, ನಿಕ್ಸನ್ ಗ್ರೇಗರಿ ಡಿಕೋಸ್ಟಾ ಮತ್ತಿತರರು ಉಪಸ್ಥಿತರಿದ್ದರು.

ಮಾರಿಕಾಂಬಾ ಕಾಲೇಜಿನ ಪ್ರಾಚಾರ್ಯ ಬಾಲಚಂದ್ರ ಭಟ್ಟ ಸ್ವಾಗತಿಸಿದರು. ಉಪನ್ಯಾಸಕಿ ಕಾಂತಿ ಹೆಗಡೆ ಪ್ರಾರ್ಥಿಸಿದರು. ವೇದಾ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಕ್ರೀಡಾ ಸಂಯೋಜಕ ಕಿರಣಕುಮಾರ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕಿ ರಾಜಶ್ರೀ ನಾಯಕ ನಿರೂಪಿಸಿದರು. ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಸತೀಶ ನಾಯ್ಕ ವಂದಿಸಿದರು. ರಾಜ್ಯದ ೩೨ ಜಿಲ್ಲೆಗಳಿಂದ ೩೨೦ ವಿದ್ಯಾರ್ಥಿಗಳು ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

Share this article