ಸರ್ದಾರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚೆಸ್‌ ಪಾರ್ಕ್

KannadaprabhaNewsNetwork |  
Published : Dec 30, 2025, 03:15 AM IST
ಬೆಳಗಾವಿ ಸರ್ದಾರ ಪ್ರೌಢಶಾಲೆಯ ಮುಖ್ಯಧ್ವಾರದ ಎಡಭಾಗದಲ್ಲಿರುವ ಹಳೆಯ ಶಿಥಿಲಾವಸ್ಥೆಯ ಕೊಠಡಿಯ ಜಾಗವನ್ನು ಶಾಸಕ ಆಸೀಫ್‌ ಸೇಠ್‌ ಪರಿಶೀಲಿಸಿದರು | Kannada Prabha

ಸಾರಾಂಶ

ವಿದ್ಯಾರ್ಥಿಗಳು ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ನಗರದ ಸರ್ದಾರ ಪ್ರೌಢಶಾಲೆಯ ಆವರಣದಲ್ಲಿ ಸುಸಜ್ಜಿತ ಚೆಸ್ ಪಾರ್ಕ್ ನಿರ್ಮಾಣ ಮಾಡಲು ಯೋಜಿಸಲಾಗಿದೆ ಎಂದು ಶಾಸಕ ಆಸೀಫ್‌ (ರಾಜು) ಸೇಠ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿದ್ಯಾರ್ಥಿಗಳು ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ನಗರದ ಸರ್ದಾರ ಪ್ರೌಢಶಾಲೆಯ ಆವರಣದಲ್ಲಿ ಸುಸಜ್ಜಿತ ಚೆಸ್ ಪಾರ್ಕ್ ನಿರ್ಮಾಣ ಮಾಡಲು ಯೋಜಿಸಲಾಗಿದೆ ಎಂದು ಶಾಸಕ ಆಸೀಫ್‌ (ರಾಜು) ಸೇಠ್‌ ತಿಳಿಸಿದರು.ಇಲ್ಲಿನ ಸರ್ದಾರ ಪ್ರೌಢಶಾಲೆಯ ಮುಖ್ಯದ್ವಾರದ ಎಡಭಾಗದಲ್ಲಿರುವ ಹಳೆಯ ಶಿಥಿಲಾವಸ್ಥೆಯ ಕೊಠಡಿಯ ಜಾಗವನ್ನು ಸೋಮವಾರ ಪರಿಶೀಲಿಸಿ, ನಂತರ ಶಾಲೆಯ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ನಗರದ ಎಲ್ಲ ಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸ ಹಾಗೂ ಚೆಸ್, ಕೇರಮ್ ಒಳಾಂಗಣ ಆಟಗಳನ್ನು ಆಡುವ ಮೂಲಕ ಬಿಡುವಿನ ವೇಳೆಯನ್ನು ಸದುಪಯೋಗ ಮಾಡಿಕೊಳ್ಳುವ ನಿಟ್ಟಿನಲ್ಲಿ ಚೆಸ್ ಪಾರ್ಕ್ ನಿರ್ಮಿಸುವ ಯೋಚನೆ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಯೋಜನೆ ರೂಪಿಸಬೇಕು ಎಂದು ಸೂಚನೆ ನೀಡಿದರು.

₹5 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ:

ಸರ್ದಾರ ಪ್ರೌಢಶಾಲೆಯ ಆವರಣದಲ್ಲಿ ಶಾಲಾ ಕೊಠಡಿಗಳ ನೂತನ ಕಟ್ಟಡವನ್ನು ನಿರ್ಮಿಸಲು ಶಾಸಕರ ಅನುದಾನದಲ್ಲಿ ₹5 ಕೋಟಿ ಮಂಜೂರಾಗಿದೆ. ಪ್ರಸ್ತುತ ಪ್ರೌಢಶಾಲೆಯ ಆವರಣದಲ್ಲೇ ಇರುವ, ಶಿಥಿಲಗೊಂಡಿರುವ ಶಾಲಾ ಶಿಕ್ಷಣ ಇಲಾಖೆಯ ಸಹ ನಿರ್ದೇಶಕರ ಕಚೇರಿಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಹೊಸ ಕಟ್ಟಡ ನಿರ್ಮಾಣ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಶಾಲೆಯಲ್ಲಿ 450ಕ್ಕಿಂತ ಹೆಚ್ಚು ಮಕ್ಕಳು ಓದುತ್ತಿದ್ದು, ಭೋಜನಾಲಯದ ಅವಶ್ಯಕತೆ ಇದೆ. ಹೀಗಾಗಿ, 2025-26 ನೇ ಸಾಲಿನಲ್ಲಿ ಮಂಜೂರಾಗಿರುವ ಹೊಸ ಶಾಲಾ ಕೊಠಡಿಗಳ ನಿರ್ಮಾಣದ ಅನುದಾನ ₹34.3 ಲಕ್ಷಗಳಲ್ಲಿ ಸುಸಜ್ಜಿತ ಭೋಜನಾಲಯ ನಿರ್ಮಿಸಲು ಕೂಡ ಕ್ರಮವಹಿಸಬೇಕು ಎಂದು ಸೂಚಿಸಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮವಹಿಸಿ:

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ವಿದ್ಯಾರ್ಥಿಗಳು ಬಸ್ ಗಾಗಿ ಬಸ್ ನಿಲ್ದಾಣಗಳಲ್ಲಿ ಕಾಯುವುದು ಹಾಗೂ ವ್ಯರ್ಥವಾಗಿ ಸಮಯ ಕಳೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಚೆಸ್ ಪಾರ್ಕ್ ಅನುಕೂಲವಾಗಲಿದೆ. ಹೀಗಾಗಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸಬೇಕು ಎಂದು ಸೂಚನೆ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಎಸ್ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷವಾಗಿ ಪ್ರಾತಿನಿಧ್ಯ ನೀಡಿ ಎಲ್ಲ ಮಕ್ಕಳು ಉತ್ತೀರ್ಣರಾಗುವಂತೆ ಸೂಕ್ತ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಬೇಕು. ಬಾಲಕಿಯರಿಗೆ ಸಂಜೆ 6.30 ರವರೆಗೆ ಹಾಗೂ ಬಾಲಕರಿಗೆ ರಾತ್ರಿ 8 ಗಂಟೆವರೆಗೆ ಹೆಚ್ಚುವರಿ ತರಗತಿಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಉತ್ತಮ ಫಲಿತಾಂಶಕ್ಕಾಗಿ ಎಲ್ಲ ಶಿಕ್ಷಕರು ಶ್ರಮಿಸಬೇಕು ಎಂದು ನಿರ್ದೇಶನ ನೀಡಿದರು.

ಮಹಾಂತೇಶ ನಗರ, ಶಿವಬಸವ ನಗರ, ಹನುಮಾನ ನಗರ ಸೇರಿ ನಗರದ ವಿವಿಧ ಭಾಗಗಳಲ್ಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಂಜೆ ಓದಲು ಅನುಕೂಲವಾಗುವ ನಿಟ್ಟಿನಲ್ಲಿ ಓದುವ ಸಂಕೀರ್ಣ (ಸ್ಟಡಿ ರೂಮ್) ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾನ್ಯರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಸೇರಿ ಶಿಕ್ಷಣ ಇಲಾಖೆ ಹಾಗೂ ಜಿಪಂ ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಜತೆ ಅನುಚಿತ ವರ್ತನೆ - ವಾರದ ಬಳಿಕವೂ ಬೀಳುತ್ತೆ ಕೇಸ್
ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡಲ್ಲ: ಡಿಸಿಎಂ