ಗದಗ: ಛತ್ರಪತಿ ಶಿವಾಜಿ ಮಹಾರಾಜರು ಎಂದರೆ ಶಕ್ತಿಯ ಸಂಕೇತ ಹಾಗೂ ಸ್ವಾಭಿಮಾನದ ಪ್ರತೀಕ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ವಕೀಲ ಸುಧೀರಸಿಂಹ ಘೋರ್ಪಡೆ ಮಾತನಾಡಿ, ಶಿವಾಜಿಯವರ ತತ್ವಗಳು ಒಂದೇ ಸಮುದಾಯಕ್ಕೆ ಅಲ್ಲದೇ ಎಲ್ಲ ಸಮುದಾಯಕ್ಕೆ ಸೀಮಿತವಾಗಿವೆ. ಶಿವಾಜಿ ಮಹಾರಾಜರು ತಮ್ಮ 13ನೇ ವರ್ಷದಲ್ಲಿ ಸ್ವರಾಜ್ಯ ಸ್ಥಾಪನೆಯ ಕನಸು ಕಂಡು ಮಾವಳಿಯರ, ರೈತರು, ಗುಡ್ಡಗಾಡು ಜನರ ಸಂಘಟನೆಯೊಂದಿಗೆ ಮೊಘಲರ ವಶದಲ್ಲಿರುವ ಕೋಟೆಗಳನ್ನು ವಶಪಡಿಸಿಕೊಂಡರು.
ಇವರು ಸಮರ್ಥ ಆಡಳಿತಗಾರರಾಗಿದ್ದರು. ಗೆರಿಲ್ಲಾ ಯುದ್ಧ ನೀತಿ ಅನುಸರಿಸುತ್ತಿದ್ದರು. 1674ರಲ್ಲಿ ರಾಯಗಡದಲ್ಲಿ ಶಿವಾಜಿಯವರಿಗೆ ಪಟ್ಟಾಭಿಷೇಕವಾಯಿತು. ಛತ್ರಪತಿ ಎಂದು ಘೋಷಿಸಿಕೊಂಡರು. ಇದು ಕೇವಲ ಒಬ್ಬ ವ್ಯಕ್ತಿಯ ಪಟ್ಟಾಭಿಷೇಕವಾಗಿರಲಿಲ್ಲ, ಶತಮಾನಗಳ ಪರಕೀಯರ ಆಳ್ವಿಕೆಯ ನಂತರ ಹಿಂದೂ ಸಾಮ್ರಾಜ್ಯವೊಂದು ತಲೆ ಎತ್ತಿ ನಿಂತ ಐತಿಹಾಸಿಕ ಕ್ಷಣವಾಗಿತ್ತು ಎಂದು ಶಿವಾಜಿ ಮಹಾರಾಜರ ಶೌರ್ಯ ಪರಾಕ್ರಮ ಸೇರಿದಂತೆ ಜೀವನ ಸಾಧನೆ ಕುರಿತು ವಿವರಿಸಿದರು. ಈ ವೇಳೆ ಎಸ್ಎಸ್ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ ಬಬರ್ಚಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್., ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಬಸವರಾಜ ಜಕ್ಕಲಿ, ಸುರೇಶ ಬೇಂದ್ರೆ, ಕೃಷ್ಣಾಜಿ ತುಕ್ಕಪ್ಪನವರ, ಮುರಿಗೆಪ್ಪ ಶೆಟ್ಟರ್, ಅಜಿತ ಘೋರ್ಪಡೆ, ಯಲ್ಲಪ್ಪ ಬೇಂದ್ರೆ ಇತರರು ಇದ್ದರು. ವೀರಣ್ಣ ಅಂಗಡಿ ಹಾಗೂ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಬಾಹುಬಲಿ ಜೈನರ ನಿರೂಪಿಸಿದರು.