ಹಳಿಯಾಳ: ಶಿವಾಜಿ ಮಹಾರಾಜರ ಬದುಕು, ನೆನಪು ಇಂದಿಗೂ ಉತ್ಸಾಹ, ಚೈತನ್ಯ ಹುಟ್ಟಿಸುತ್ತದೆ ಎಂದು ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಹೇಳಿದರು.
ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನಲ್ಲಿಯೇ ಅಪಾರ ಧೈರ್ಯ, ಸಾಮರ್ಥ್ಯ, ಶಕ್ತಿಯಿದ್ದು, ಅವರು ತೋರಿದ ರಾಷ್ಟ್ರಭಕ್ತಿ, ಸ್ವಾಭಿಮಾನ, ಶೌರ್ಯಗಳು ಭಾರತೀಯರಿಗೆ ಸದಾ ಸ್ಫೂರ್ತಿ ನೀಡುತ್ತಿವೆ. ಮೂರು ಶತಮಾನಗಳ ನಂತರವೂ ಶಿವಾಜಿ ಮಹಾರಾಜರ ಜೀವನ ನಮಗೆ ಪ್ರೇರಣೆದಾಯಕವಾಗಿದೆ ಎಂದರು.
ರಾಜ್ಯ ಕ್ಷತ್ರಿಯ ಮರಾಠ ಪರಿಷತ್ ರಾಜ್ಯ ಪ್ರಮುಖರಾದ ಸಂದೀಪಕುಮಾರ ಬೊಬಾಟೆ ಮಾತನಾಡಿ, ಗುರುಭಕ್ತಿ ಮತ್ತು ದೈವಭಕ್ತಿಯ ಆರಾಧಕರಾಗಿದ್ದ ಶ್ರೀ ಶಿವಾಜಿ ಮಹಾರಾಜರು ಜಗತ್ತು ಕಂಡ ಶ್ರೇಷ್ಠ ರಾಜ, ಅತ್ಯುತ್ತಮ ಆಡಳಿತಗಾರರಾಗಿದ್ದರು. ಇಂತಹ ಮಹಾನ ಪುರುಷರನ್ನು ಒಂದೇ ಜಾತಿ, ಧರ್ಮಕ್ಕೆ ಸೀಮಿತರನ್ನಾಗಿಸಬಾರದು ಎಂದರು.ಕೆಕೆಎಂಪಿ ಜಿಲ್ಲಾಧ್ಯಕ್ಷ ಪ್ರಕಾಶ ಪಾಕ್ರೆ, ಜಿಲ್ಲಾ ಕಾರ್ಯಾಧ್ಯಕ್ಷ ನಾಗೇಂದ್ರ ಜಿವೋಜಿ ಅವರು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಮಾತನಾಡಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮರಾಠ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕಿರಣ ಧೂಮಾಳಿ ಅವರು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜೀವನದ ಬಗ್ಗೆ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮಿ ವಡ್ಡರ, ಸ್ಥಾಯಿ ಸಮಿತಿ ಚೇರ್‌ಮನ್ ಅನಿಲ್ ಚವ್ಹಾಣ, ಸಿಪಿಐ ಜಯಪಾಲ ಪಾಟೀಲ, ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಕೆಕೆಎಂಪಿ ತಾಲೂಕು ಅಧ್ಯಕ್ಷ ಚೂಡಪ್ಪ ಬೊಬಾಟೆ ಉಪಸ್ಥಿತರಿದ್ದರು. ತಾಲೂಕ ಆಡಳಿತ ಸೌಧದ ಸಿಬ್ಬಂದಿ ಕಿರಣಕುಮಾರ ಜಕ್ಕಲಿ ಹಾಗೂ ಪರಶುರಾಮ ಶಿಂದೆ ಕಾರ್ಯಕ್ರಮ ನಿರ್ವಹಿಸಿದರು. ಮರಾಠ ಸಮಾಜದ ಪ್ರಮುಖರು, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಎಲ್ಲೆಡೆ ಆಚರಣೆ: ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು. ಕಾಂಗ್ರೆಸ್ ಮತ್ತು ಬಿಜೆಪಿ ವತಿಯಿಂದ ಶಿವಾಜಿ ಮಹಾರಾಜರ ಜಯಂತಿ ಆಚರಿಸಿದರೆ, ಮರಾಠ ಭವನದಲ್ಲಿ ಮರಾಠ ಸಮಾಜದ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ನಡೆಯಿತು.