ಛಾಯಾ ಭಗವತಿ ಯಾತ್ರಾ ಮಹೋತ್ಸವ

KannadaprabhaNewsNetwork | Published : May 12, 2024 1:15 AM

ಸಾರಾಂಶ

ಭರತ ಖಂಡದಲ್ಲಿರುವ ಹಲವು ಪುಣ್ಯಕ್ಷೇತ್ರಗಳುಂಟು ಅಂತಹ ಅನೇಕ ಪವಿತ್ರ ಪುಣ್ಯಕ್ಷೇತ್ರ‍್ರಗಳ ಸಾಲಿನಲ್ಲಿ ಛಾಯಾ ಭಗವತಿ ಕ್ಷೇತ್ರವು ಒಂದಾಗಿದ್ದು, ಶಕ್ತಿ ಸ್ಥಳವಾಗಿದೆ ಎಂದು ಕೂಡ್ಲಿ ಆರ್ಯ ಅಕ್ಷೋಭ್ಯತೀರ್ಥ ಮಠದ ಶ್ರೀರಘುವಿಜಯ ತೀರ್ಥರು ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ಭರತ ಖಂಡದಲ್ಲಿರುವ ಹಲವು ಪುಣ್ಯಕ್ಷೇತ್ರಗಳುಂಟು ಅಂತಹ ಅನೇಕ ಪವಿತ್ರ ಪುಣ್ಯಕ್ಷೇತ್ರ‍್ರಗಳ ಸಾಲಿನಲ್ಲಿ ಛಾಯಾ ಭಗವತಿ ಕ್ಷೇತ್ರವು ಒಂದಾಗಿದ್ದು, ಶಕ್ತಿ ಸ್ಥಳವಾಗಿದೆ ಎಂದು ಕೂಡ್ಲಿ ಆರ್ಯ ಅಕ್ಷೋಭ್ಯತೀರ್ಥ ಮಠದ ಶ್ರೀರಘುವಿಜಯ ತೀರ್ಥರು ಹೇಳಿದರು.

ಸಮೀಪದ ನಾರಾಯಣಪೂರದ ಹತ್ತಿರದ ಶ್ರೀಕ್ಷೇತ್ರ ಛಾಯಾ ಭಗವತಿ ಯಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ದಂಡೋದಕ ಸ್ನಾನ ನೆರವೇರಿಸಿದರು.

ಬಳಿಕ ಶ್ರೀಗಳು ಅನುಗ್ರಹ ಸಂದೇಶ ನೀಡಿ, ನಮ್ಮ ಭಾರತ ದೇಶದಲ್ಲಿ ಹಲವು ಪುಣ್ಯಕ್ಷೇತ್ರಗಳ ಮಹಿಮೆ ಅಪಾರವಾಗಿದ್ದು, ಸಾಕ್ಷಾತ್ ಸೂರ್ಯನಾರಾಯಣನ ಪತ್ನಿಯ ದೇವಸ್ಥಾನವಿರುವ ಛಾಯಾ ಭಗವತಿ ಕ್ಷೇತ್ರವು ಅಷ್ಟೆ ಪವಿತ್ರ ಮತ್ತು ಶಕ್ತಿ ಸ್ಥಳವಾಗಿದೆ ಎಂದರು.

ಐದು ದಿನಗಳ ಯಾತ್ರಾ ಮಹೋತ್ಸವವನ್ನು ಮಾಡುತ್ತಾ ಬರುತ್ತಿರುವ ಇಲ್ಲಿನ ಭಕ್ತರ ಕಾರ್ಯ ಶ್ಲಾಘನೀಯ. ಧರ್ಮ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಎಲ್ಲರೂ ನಿತ್ಯವು ಸಂಧ್ಯಾವಂದನೆ ಮಾಡಬೇಕು ಎಂದರು.

ಇದಕ್ಕೂ ಮೋದಲು ಕ್ಷೇತ್ರಕ್ಕೆ ಆಗಮಿಸಿದ ಶ್ರೀಗಳಿಗೆ ಪೂರ್ಣಕುಂಭದ ಸ್ವಾಗತ ನೀಡಲಾಯಿತು. ನಂತರ ಶ್ರೀಗಳು ವೈಕುಂಠ ರಾಮಚಂದ್ರ ತೊಟ್ಟಿಲು ಪೂಜೆಯನ್ನು ನೆರವೇರಿಸಿ, ನಂತರ ದೇವಸ್ಥಾನದಲ್ಲಿರುವ ಛಾಯಾ ಭಗವತಿಯ ದರ್ಶನ ಪಡೆದು ಲಿಂಗಸೂಗುರ ತಾಲೂಕಿನ ಚಿತ್ತಾಪೂರಕ್ಕೆ ಪ್ರಯಾಣ ಬೆಳೆಸಿದರು.

ಭಕ್ತಿಯ ಯಾತ್ರಾ ಮಹೋತ್ಸವ: ದೇವಸ್ಥಾನದಲ್ಲಿ ಬೆಳಿಗ್ಗೆ ಸುಪ್ರಭಾತ, ಅಷ್ಟೋತ್ತರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗರ್ಭಗುಡಿಯಲ್ಲಿರುವ ಶ್ರೀ ಛಾಯಾದೇವಿಯ ಪಾದುಕೆಗಳು ಮತ್ತು ಉತ್ಸವ ಮೂರ್ತಿಗೆ ವಿಶೇಷವಾದ ಅಭಿಷೇಕಾದಿಗಳು ನಡೆದು ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿ, ದೇವಿಗೆ ಮರದ ಬಾಗಿಣವನ್ನು ಸಮರ್ಪಿಸಲಾಯಿತು.

ಕ್ಷೇತ್ರ ಪುರೋಹಿತರು ಸೇರಿದಂತೆ ಯಾದಗಿರಿ, ವಿಜಯಪೂರ, ರಾಯಚೂರ, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳ ವಿವಿಧ ಪಟ್ಟಣಗಳಿಂದ ಭಕ್ತರು ಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ನಿರಾಸೆ ಅನುಭವಿಸಿದ ಭಕ್ತಗಣ: ಛಾಯಾ ಭಗವತಿ ಯಾತ್ರೋತ್ಸವ ಎಂದರೆ ಮುಖ್ಯವಾದದು ಕ್ಷೇತ್ರದಲ್ಲಿರುವ 18 ಪವಿತ್ರ ತೀರ್ಥ ಕುಂಡಗಳ ಪುಣ್ಯ ಸ್ನಾನ ಮಾಡುವುದು. ಆದರೆ, ಈ ವರ್ಷ ಅಧಿಕವಾದ ಬಿಸಿಲಿನ ಪ್ರಭಾವ ಹಾಗೂ ನದಿಯಲ್ಲಿ ನೀರಿನ ಕೊರತೆ ಇರುವ ಕಾರಣದಿಂದಾಗಿ ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ 18 ಕುಂಡಗಳ ತೀರ್ಥ ಸ್ನಾನ ನಡೆಯದ ಕಾರಣ ವಿವಿಧ ಜಿಲ್ಲೆಗಳಿಂದ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು ನಿರಾಸೆ ಅನುಭವಿಸುವಂತಾಯಿತು.

Share this article