ಕಡಲೆ ಕಾಳು ಬೆಲೆ ಕುಸಿತ- ಸಂಕಷ್ಟಕ್ಕೆ ಸಿಲುಕಿದ ರೈತ

KannadaprabhaNewsNetwork |  
Published : Jan 26, 2025, 01:31 AM IST
ಪೋಟೊ-೨೫ ಎಸ್.ಎಚ್.ಟಿ. ೧ಕೆ- ಕಟಾವು ಮಾಡಿರುವ ಕಡಲೆ ಫಸಲು ಒಕ್ಕಣೆ (ರಾಶಿ) ಯಂತ್ರಗಳಿಗೆ ಬಿಡುವಿಲ್ಲದಾಗಿದ್ದು, ರೈತರು ಹೊಲದಲ್ಲಿ ಬಣವೆ ಹಾಕಿರುವುದು. | Kannada Prabha

ಸಾರಾಂಶ

ಉತ್ತರ ಕರ್ನಾಟಕದ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾಗಿರುವ ಕಡಲೆ ಬೆಲೆ ಕುಸಿತ ಕಂಡಿದ್ದು. ಉತ್ಪಾದನಾ ವೆಚ್ಚ ಹೆಚ್ಚಾಗಿದ್ದರೂ ಅದಕ್ಕೆ ತಕ್ಕಂತೆ ಬೆಲೆ ಸಿಗದೆ ರೈತರು ಹತಾಶರಾಗಿದ್ದಾರೆ

ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ

ಹಿಂಗಾರು ಹಂಗಾಮಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಬಿಳಿ ಜೋಳ, ಕಡಲೆ, ಗೋಧಿ ಗುರಿ ಮೀರಿದ ಬಿತ್ತನೆಯಾಗಿದ್ದು, ಉತ್ತಮ ಇಳುವರಿಯಿಂದ ಲಾಭದ ನಿರೀಕ್ಷೆಯಲ್ಲಿದ್ದ ತಾಲೂಕಿನ ರೈತರು ಹಲವು ಕಾರಣಗಳಿಂದ ಸದ್ಯ ಕಡಲೆ ಬೆಲೆ ಕುಸಿತದ ಆತಂಕ ಎದುರಿಸುವಂತಾಗಿದೆ.

ಬೀಜ, ಗೊಬ್ಬರ, ಆಳು, ಔಷಧಿ ಸಿಂಪರಣೆಗೆ ಮಾಡಿದ ಒಟ್ಟಾರೆ ಖರ್ಚು ವೆಚ್ಚ ಮರಳಿ ಬಾರದಂತಾಗಿದ್ದರಿಂದ ರೈತರು ಚಿಂತೆಗೀಡಾಗಿದ್ದಾರೆ.

ಉತ್ತರ ಕರ್ನಾಟಕದ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾಗಿರುವ ಕಡಲೆ ಬೆಲೆ ಕುಸಿತ ಕಂಡಿದ್ದು. ಉತ್ಪಾದನಾ ವೆಚ್ಚ ಹೆಚ್ಚಾಗಿದ್ದರೂ ಅದಕ್ಕೆ ತಕ್ಕಂತೆ ಬೆಲೆ ಸಿಗದೆ ರೈತರು ಹತಾಶರಾಗಿದ್ದಾರೆ. ಮುಂಗಾರು ಮಳೆ ಹೆಚ್ಚಾಗಿ ಅತಿವೃಷ್ಟಿಯ ವೈಫಲ್ಯದ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಮತ್ತು ತೇವಾಂಶಕ್ಕೆ ಅನುಗುಣವಾಗಿ ಆಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಕಡಲೆ, ಜೋಳ, ಗೋಧಿ ಮತ್ತಿತರ ಬೆಳೆ ಬಿತ್ತಿದ್ದು, ತಾಲೂಕಿನಲ್ಲಿ ಹಿಂಗಾರು ಬಿತ್ತನೆಗೆ ಕಾಲಾವಕಾಶ ಸಿಕ್ಕಿದ್ದು, ಗುರಿ ಮೀರಿ ಬಿತ್ತನೆ ಮಾಡಲಾಗಿದೆ.

ಒಟ್ಟಾರೆ ರೈತರ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಾಗಿದ್ದು, ರೈತರ ಗೋಳಾಟ ತಪ್ಪುತ್ತಿಲ್ಲ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಹಬ್ಬು ಶೇಂಗಾ ಕೂಡ ಒಕ್ಕಣೆಯಾಗಿದ್ದು, ಬೆಲೆಯಿಲ್ಲದೆ ಹಾಗೆ ಇಡಲಾಗಿದೆ. ಕೆಲವು ರೈತರು ಸಾಲಗಾರರ ಕಾಟಕ್ಕೆ ಕೈಗೆ ಬಂದ ಹಾಗೇ ಮಾರಾಟ ಮಾಡುತ್ತಿದ್ದು, ಬಂಡವಾಳಶಾಹಿಗಳಿಗೆ ಲಾಭವಾಗುತ್ತಿದೆ. ಸರ್ಕಾರ ರೈತರ ಸಮಸ್ಯೆ, ವಾಸ್ತವ ಸ್ಥಿತಿಗತಿ ಬಗ್ಗೆ ಗಮನ ಹರಿಸಬೇಕಿದೆ ಎಂದು ರೈತರು ಆಗ್ರಹಿಸಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ₹ ೫೦೦೦ ದಿಂದ ₹ ೫.೫೦೦ ಧಾರಣೆ ಇದೆ. ಕಳೆದ ವಾರಕ್ಕಿಂತ ₹ ೫೦ ಕಡಿಮೆಯಾಗಿದೆ. ಮಾರುಕಟ್ಟೆಗೆ ಕಡಲೆ ಉತ್ಪನ್ನ ಆವಕವಾಗುತ್ತಿದ್ದಂತೆ ಬೆಲೆ ಕ್ರಮೇಣ ಕಡಿಮೆಯಾಗುತ್ತಿದ್ದು, ಕೂಡಲೆ ಕಡಲೆಗೂ ಬೆಂಬಲ ಬೆಲೆಯನ್ನು ಪ್ರಕಟಿಸುವುದಲ್ಲದೇ ಈಗಲೇ ಕಡಲೆ ಆನ್‌ಲೈನ್ ನೋಂದಣಿ ತ್ವರಿತಗತಿಯಲ್ಲಿ ಆರಂಭಿಸಬೇಕೆನ್ನುವುದು ತಾಲೂಕಿನ ರೈತರ ಆಗ್ರಹವಾಗಿದೆ.

ರೈತರು ಬೆಳೆ ಬೆಳೆಯದಿದ್ದಾಗ ಮಾರುಕಟ್ಟೆಯಲ್ಲಿ ದರ ಏರಿಕೆಯಾಗುವುದು. ಹೆಚ್ಚು ಬೆಳೆ ಬೆಳೆದಾಗ ಬೆಲೆ ಕುಸಿತವಾಗುವುದು ವಿಪರ್ಯಾಸ. ಬಿತ್ತನೆಯ ಆರಂಭದಲ್ಲಿ ಉತ್ತಮ ತೇವಾಂಶದಿಂದ ಉತ್ತಮ ಇಳುವರಿ ನಿರೀಕ್ಷಿಸಲಾಗಿತ್ತು. ಆದರೆ ಮೋಡ ಕವಿದ ವಾತಾವರಣದಿಂದ ಕಡಲೆ ಬೆಳೆಗೆ ಕೀಟಬಾಧೆ (ಸಿಡಿ) ರೋಗ ಬಂದಿದ್ದರಿಂದ ನಿರೀಕ್ಷಿತ ಇಳುವರಿ ಬಂದಿಲ್ಲ.

ತಾಲೂಕಿನಲ್ಲಿ ಈ ಬಾರಿ ಸಮೃದ್ಧ ಮಳೆಯಾಗಿದ್ದರಿಂದ ಹಿಂಗಾರು ಹಂಗಾಮಿನ ಬೆಳೆಗಳಿಗೆ ಹೇಳಿ ಮಾಡಿಸಿದ ಹವಾಗುಣವಿದ್ದು, ರೈತರು ಖುಷಿಯಿಂದಲೇ ಹಿಂಗಾರು ಬಿತ್ತನೆ ಮಾಡಿದ್ದಾರೆ. ಪ್ರಸಕ್ತ ಹಿಂಗಾರಿನಲ್ಲಿ ಕಡಲೆ ೫.೪೭೫ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿಳಿಜೋಳ ೪.೩೦೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಹಾಗೂ ಕುಸುಬೆ ೪೫೫ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ಹೇಳಿದರು.

ಈ ಬಾರಿ ಕಡಲೆ ಉತ್ಪನ್ನ ರೈತರ ನೀರಿಕ್ಷೆಯಷ್ಟು ಬಂದಿಲ್ಲ. ಬಿತ್ತನೆಯ ನಂತರ ಮಧ್ಯದಲ್ಲಿ ಮಳೆ ಬಂದಿದ್ದರಿಂದ ಬೆಳೆಗೆ ಸಿಡಿ ರೋಗ ಬಂದು ಹಾಳಾಗಿದೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕೂಲಿಕಾರರ ವೆಚ್ಚಕ್ಕಾಗಿ ರೈತ ಹೆಚ್ಚು ಹಣ ಖರ್ಚು ಮಾಡಿ ಬೆಳೆ ಬೆಳೆದಿದ್ದು, ಅದಕ್ಕೆ ತಕ್ಕಂತೆ ಬೆಲೆ ಸಿಗುತ್ತಿಲ್ಲ. ಸದ್ಯ ಕೂಲಿಯಾಳುಗಳ ಅಭಾವದ ನಡುವೆಯೂ ಕಡಲೆ ಕಟಾವು ಭರದಿಂದ ಸಾಗಿದೆ. ಈಗಾಗಲೇ ಬಹುತೇಕ ಕಡಲೆ ರಾಶಿಯ ಉತ್ಪನ್ನ ಮನೆ ಸೇರಿದ್ದು, ತೊಗರಿಯಂತೆ ಕಡಲೆಗೂ ಬೆಂಬಲ ಬೆಲೆ ನೀಡಬೇಕು ಎಂದು ರೈತ ಬಸವರಾಜ ತಿರಕಪ್ಪ ಬಂಕಾಪೂರ ಹೇಳಿದ್ದಾರೆ.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?