ಕ್ರಷರ್‌ಗಳಿಗೆ ಅನುಮತಿ ನೀಡುವಾಗ ಕಟ್ಟುನಿಟ್ಟಿನ ನಿಯಮ ಪಾಲಿಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚನೆ

KannadaprabhaNewsNetwork |  
Published : Jan 26, 2025, 01:31 AM IST
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅಧಿಕಾರಿಗಳ ಸಭೆ ನಡೆಸಿದರು. | Kannada Prabha

ಸಾರಾಂಶ

ಕ್ರಷರ್‌ಗಳಿಂದ ಸಾರ್ವಜನಿಕರು ಮತ್ತು ಪರಿಸರಕ್ಕೆ ಯಾವುದೇ ತೊಂದರೆಯಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಅನುಮತಿಗಳನ್ನು ನೀಡಬೇಕು.

ಕಾರವಾರ: ಜಿಲ್ಲೆಯಲ್ಲಿ ಕಲ್ಲು ಕ್ರಷರ್‌ಗಳಿಗೆ ಅನುಮತಿ ನೀಡುವ ಮುನ್ನ ಕ್ರಷರ್ ಅಧಿನಿಯಮದಲ್ಲಿನ ಸಂರಕ್ಷಿತ ವಲಯ ಕುರಿತಂತೆ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಪರವಾನಗಿ ನೀಡುವಿಕೆ ಹಾಗೂ ನಿಯಂತ್ರಣ ಪ್ರಾಧಿಕಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲ್ಲು ಕ್ರಷರ್‌ಗಳು ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯಿಂದ, ಜಿಲ್ಲಾ ರಸ್ತೆಯಿಂದ ಮತ್ತು ಇತರೆ ರಸ್ತೆಯಿಂದ, ಕಂದಾಯ ಗ್ರಾಮ, ದೇವಸ್ಥಾನ, ಶಾಲೆಯಿಂದ ನಿಗದಿತ ದೂರದಲ್ಲಿರುವುದರ ಬಗ್ಗೆ ಸ್ಥಳ ಪರಿಶೀಲಿಸಿ, ಲಿಖಿತ ಆಭಿಪ್ರಾಯ ದಾಖಲಿಸಬೇಕು. ಕ್ರಷರ್‌ಗಳಿಂದ ಸಾರ್ವಜನಿಕರು ಮತ್ತು ಪರಿಸರಕ್ಕೆ ಯಾವುದೇ ತೊಂದರೆಯಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಅನುಮತಿಗಳನ್ನು ನೀಡಬೇಕು.

ಜಿಲ್ಲೆಯಲ್ಲಿ ಪ್ರಸ್ತುತ ಈಗಾಗಲೇ ಕ್ರಷರ್‌ಗಳಿಗೆ ಅನುಮತಿ ಪಡೆದು ಲೈಸೆನ್ಸ್ ನವೀಕರಣ ಕೋರುವ ಅರ್ಜಿಗಳ ಕುರಿತಂತೆ ಸಂಬಂಧಪಟ್ಟ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಕಡ್ಡಾಯವಾಗಿ ಸ್ಥಳ ಪರಿಶೀಲನೆ ನಡೆಸಬೇಕು ಎಂದರು.

ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಆಶಾ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಉಪ ಖನಿಜ ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನು ಸಂಬಂಧಿಸಿದಂತೆ ಒಟ್ಟು 205 ಪ್ರಕರಣಗಳನ್ನು ಪತ್ತೆ ಹಚ್ಚಿ ₹63.53 ಲಕ್ಷ ದಂಡ ವಿಧಿಸಲಾಗಿದೆ. ಅಕ್ರಮವಾಗಿ ಮರಳು ದಾಸ್ತಾನು ಮಾಡಿರುವ 9 ಪ್ರಕರಣಗಳನ್ನು ಪತ್ತೆ ಹಚ್ಚಿ ಅಂದಾಜು 529 ಮೆ. ಟನ್ ಮರಳನ್ನು ಜಪ್ತಿ ಮಾಡಿ ಸರ್ಕಾರಿ ಕಾಮಗಾರಿಗಳಿಗೆ ಹಸ್ತಾಂತರಿಸಲಾಗಿದೆ.

ಜಿಲ್ಲಾದ್ಯಂತ ನಡೆಯುವ ಅನಧಿಕೃತ ಉಪ ಖನಿಜ ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನು ಚಟುವಟಿಕೆ ತಡೆಗಟ್ಟಲು ಚಾಲಿತ ದಳಗಳನ್ನು ರಚಿಸಲಾಗಿದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ. ರವಿಶಂಕರ್, ಉಪ ವಿಭಾಗಾಧಿಕಾರಿ ಕನಿಷ್ಕ, ಡಿಎಸ್‌ಪಿ ಗಿರೀಶ್ ಮತ್ತಿತರರು ಇದ್ದರು.ಸ್ವನಿಯಂತ್ರಣ ಅತಿ ಮುಖ್ಯ

ಕುಮಟಾ: ಪ್ರತಿಯೊಬ್ಬರೂ ತಮ್ಮ ಖಾಸಗಿ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳಬಾರದು. ಸಾರ್ವಜನಿಕ ವೈ ಫೈ ಬಳಸುವಾಗ ಜಾಗರೂಕರಾಗಿರಬೇಕು. ಯುವಜನತೆ ಮನಸ್ಸನ್ನು ಪರಿಶುದ್ಧವಾಗಿಟ್ಟುಕೊಳ್ಳಬೇಕು ಮತ್ತು ಸ್ವನಿಯಂತ್ರಣ ಅತಿ ಮುಖ್ಯ ಎಂದು ಕರಾವಳಿ ಕಾವಲು ಪಡೆ ಸಿಪಿಐ ಸಂಪತ್‌ಕುಮಾರ ಇ.ಸಿ. ತಿಳಿಸಿದರು.

ಗೋರೆಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ಶುಕ್ರವಾರ ಸೈಬರ್ ಅಪರಾಧಗಳು ಹಾಗೂ ಜಾಗೃತಿ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸೈಬರ್ ಅಪರಾಧ, ಸೈಬರ್ ಅಪರಾಧದ ವಿಧಗಳು, ಸೈಬರ್ ಟೆರರಿಸಂ, ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನು, ಸೈಬರ್ ಅಪರಾಧವನ್ನು ತಡೆಯುವ ಉಪಾಯಗಳು, ಸೈಬರ್ ವಂಚನೆ, ಸಿಮ್ ಸ್ವೇಪ್‌ ಮುಂತಾದವುಗಳ ಕುರಿತು ಸಂವಾದ ಮೂಲಕ ಸಂದೇಹ ಪರಿಹರಿಸಿದರು.

ಸಾಮಾಜಿಕ ಮಾಧ್ಯಮಗಳ ಮೂಲಕ ನಡೆಯುತ್ತಿರುವ ಅಪರಾಧಗಳನ್ನು ತಡೆಯಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದರು.ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ಪ್ರಾಚಾರ್ಯ ರಾಮ ಭಟ್ಟ ಪಿ., ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?