ಧಾರವಾಡ:
ಡಾ. ಎಂ. ಚಿದಾನಂದ ಮೂರ್ತಿ ಅವರು ಕನ್ನಡ, ಕನ್ನಡಿಗ, ಕರ್ನಾಟಕದ ಅಭ್ಯುದಯಕ್ಕಾಗಿ ಕರ್ನಾಟಕದಲ್ಲಿ ಹುಟ್ಟು ಹಾಕಿದ ಚಳವಳಿ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರಾಂಶುಪಾಲ ಪ್ರೊ. ಶಶಿಧರ ತೋಡಕರ, ಕನ್ನಡ ಭಾಷೆ, ಸಂಸ್ಕೃತಿಗಳ ಅಭ್ಯುದಯಕ್ಕಾಗಿ ಅವರು ಮಾಡಿದ ತ್ಯಾಗ ಅಪಾರವಾದದ್ದು. ಆದರೆ ಅವರ ತ್ಯಾಗ ಸ್ಮರಿಸದೆ ಇರುವುದು ಅವರ ಸೇವೆಗೆ ಮಾಡುತ್ತಿರುವ ಅಪಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶುದ್ಧ ಹೃದಯದ, ಪ್ರಾಮಾಣಿಕ ಮನಸ್ಸಿನ ಅವರು ಮಗುವಿನ ಮುಗ್ಧತೆ ಹೊಂದಿದ್ದರು. ಅವರೊಬ್ಬ ಸರ್ವಶ್ರೇಷ್ಠ ಸಂಶೋಧಕರಾಗಿದ್ದು ಪ್ರೊ. ತಿ.ನಂ.ಶ್ರೀ. ಮಾರ್ಗದರ್ಶನದಲ್ಲಿ ರಚಿಸಿದ “ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ” ಸಂಶೋಧನಾ ಪ್ರಬಂಧ ಕನ್ನಡ ಸಾಹಿತ್ಯ ಲೋಕದ ಮಹತ್ವದ ಗ್ರಂಥವಾಗಿ ಇಂದಿಗೂ ತನ್ನ ಪ್ರಸ್ತುತತೆ ಉಳಿಸಿಕೊಂಡಿದೆ. ಸಾಹಿತ್ಯ, ಸಂಶೋಧನೆ, ಜಾನಪದ, ವ್ಯಾಕರಣ, ಛಂದಸ್ಸು, ಭಾಷಾಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ೪೦ಕ್ಕೂ ಹೆಚ್ಚು ಪ್ರಬಂಧ ನೀಡಿದ ಚಿದಾನಂದ ಮೂರ್ತಿ ಬೆಂಗಳೂರಿನಲ್ಲಿ ನಶಿಸುತ್ತಿರುವ ಕನ್ನಡ ಭಾಷೆ ಮತ್ತು ಕನ್ನಡಿಗರ ಪ್ರಾತಿನಿಧ್ಯದ ಕೊರತೆ ಕಂಡು ಕನ್ನಡ ಶಕ್ತಿ ಕೇಂದ್ರವನ್ನು ಹುಟ್ಟು ಹಾಕಿದರು. ಆ ಮೂಲಕ ಅನೇಕ ಚಳವಳಿ ಹಮ್ಮಿಕೊಂಡು ಯಶಸ್ವಿಯಾದರು ಎಂದು ಸ್ಮರಿಸಿಕೊಂಡರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಪ್ರೊ. ಶ್ರೀರಾಮ ಭಟ್ಟರು, ಕನ್ನಡದ ಅಸ್ಮಿತೆಗೋಸ್ಕರ ಚಿಂದಾನಂದ ಮೂರ್ತಿ ಅವರಂತೆ ಪರಿಶ್ರಮಿಸಿದವರು ಕನ್ನಡದಲ್ಲಿ ತೀರ ವಿರಳ. ಮಕ್ಕಳಂಥ ಮನಸ್ಸಿನ ಅವರು ಕನ್ನಡ ನಾಡು-ನುಡಿಗಾಗಿ ಸಲ್ಲಿಸಿದ ನೂರಾರು ನಿಸ್ವಾರ್ಥ ಸೇವೆಗಳು ಈ ನಾಡಿಗೆ ಕೊಟ್ಟ ಅತ್ಯಪೂರ್ವ ಕೊಡುಗೆಗಳಾಗಿವೆ ಎಂದು ಹೇಳಿದರು.