ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಪಡಿಸಿ । ಬಿಜೆಪಿ, ಚುನಾವಣಾ ಆಯೋಗವು ಎಸ್‌ಐಆರ್ ಅನ್ನು ಬೇಕಂತಲೇ ಮಾಡಿವೆ: ನಟ ಪ್ರಕಾಶ್ ರಾಜ್
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆಗ್ರಹಿಸಿದರು.
ನಗರದ ಜಿಲ್ಲಾಕಾರ್ಯನಿರತ ಪತ್ರಕರ್ತರ ಭವನದಲ್ಲಿ ಎಸ್‌ಐಆರ್ ಪರಿಶೋಧನಾ ಪ್ರವಾಸ ಕಾರ್ಯಕ್ರಮದ ಅಂಗವಾಗಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಮತ್ತು ಚುನಾವಣಾ ಆಯೋಗವು ಎಸ್‌ಐಆರ್ ಅನ್ನು ಬೇಕಂತಲೇ ಮಾಡಿದ್ದು ಎಸ್‌ಐಆರ್ ಪ್ರಕ್ರಿಯೆ ಕುರಿತು ಹಲವು ಸತ್ಯಗಳು ಹೊರಬರುತ್ತಿವೆ. ಈಗ ಸಮಯ ಕೊಡಿ ಎಂದು ಕೇಳುವ ಬದಲು ಎಸ್‌ಐಆರ್ ರದ್ದುಪಡಿಸುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಹೋರಾಟ ನಡೆಸಬೇಕು ಎಂದು ಹೇಳಿದರು.ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡುವುದಷ್ಟೇ ಅಲ್ಲ, ಅವರ ಮೇಲೆ ಪ್ರಕರಣ ದಾಖಲಿಸಿ ಅವರನ್ನು ಜೈಲಿಗಟ್ಟಬೇಕು. ಇದಾದ ನಂತರ ಜ್ಞಾನೇಶ್ ಕುಮಾರ್ ಹಿಂದೆ ಇರುವ ಮಹಾ ಪ್ರಭುಗಳನ್ನು ಜೈಲಿಗಟ್ಟುವ ಕೆಲಸ ಮಾಡಬೇಕು. ಮತದಾನದಿಂದ ವಂಚಿತರಾದವರು ನ್ಯಾಯಾಲಯಕ್ಕೆ ಹೋದಾಗ ಶೇ.90ರಷ್ಟು ಪ್ರಕರಣಗಳಲ್ಲಿ ಮತದಾರರ ಹೆಸರುಗಳನ್ನು ಮರು ಸೇರ್ಪಡೆ ಮಾಡಲು ಅವರು ಅರ್ಹರು ಎಂಬುದು ಗೊತ್ತಾಗಿದೆ. ಇದು ಚುನಾವಣಾ ಆಯೋಗದ ಕಾರ್ಯವೈಖರಿಯಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸುತ್ತದೆ ಎಂದು ಅವರು ಆರೋಪಿಸಿದರು.ಕರ್ನಾಟಕದಲ್ಲಿಯೂ ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸಿದರೂ ಚುನಾವಣಾ ಆಯೋಗ ಸ್ಪಂದಿಸಲಿಲ್ಲ. ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷಗಳಿರುವಾಗಲೇ ತರಾತುರಿಯಲ್ಲಿ ಈ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಸಾಕಷ್ಟು ಬಿಎಲ್‌ಒಗಳಿಲ್ಲ, ಅವರಿಗೆ ಸಮರ್ಪಕ ತರಬೇತಿ ನೀಡಿಲ್ಲ, ಸರ್ಕಾರಿ ಶಾಲಾ ಶಿಕ್ಷಕರನ್ನೇ ಈ ಕಾರ್ಯಕ್ಕೆ ನಿಯೋಜಿಸಿರುವುದರಿಂದ ಮಕ್ಕಳ ಶಿಕ್ಷಣಕ್ಕೂ ಅಡ್ಡಿಯಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಒಬ್ಬರೂ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ. ಸಾರ್ವಜನಿಕರಿಗೆ ಅನ್ಯಾಯ ಕಂಡುಬಂದರೆ ಅದರ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ, ನಾವು ಅದನ್ನು ಗಮನಿಸಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದು ಮನವಿ ಮಾಡಿದರು.
ಬಿಎಲ್‌ಒ ನಿರಾಕರಿಸಿದ ಬಳಿಕ ಸ್ಥಳೀಯ ಬಿಜೆಪಿ ನಾಯಕರು ದೂರವಾಣಿ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ ಅವರು, ನಂತರ ವಿಚಾರಿಸಿದಾಗ ನಾವು ಕಾರ್ಪೊರೇಷನ್‌ನಿಂದ ಬಂದಿಲ್ಲ, ನಾಯಕರು ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ ಸಾರ್ವಜನಿಕರ ಮುಂದೆ ತರುತ್ತೇವೆ ಎಂದು ಹೇಳಿದರು. ಈ ಪ್ರತಿರೋಧ ಪ್ರವಾಸ ಸೆ. 22ರಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಿಂದ ಪ್ರಾರಂಭವಾಗಿ ಹುಬ್ಬಳ್ಳಿ, ವಿಜಯಪುರ, ಕಲ್ಲುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ತುಮಕೂರು. ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿನ ಅನೇಕ ಸ್ಥಳಗಳಿಗೆ ಭೇಟಿ ನೀಡಲಿದೆ. ಈ ಪ್ರವಾಸದಲ್ಲಿ ಗಮನಿಸಿದ ಮತ್ತು ನೂರು ಮತಗಟ್ಟೆಗಳಲ್ಲಿ ನಡೆಸಿದ ಪರಿಶೋಧನೆಯನ್ನು ಆಧರಿಸಿ 30 ರಂದು ಸಮಾಜದ ಮುಂದೆ "ನಾಗರೀಕ ವರದಿಯನ್ನುಮುಂದಿಡಲಾಗುತ್ತದೆ. ಜೊತೆಗೂಡಲು ಬಯಸುವವರು 9606087560 ನಂಬರಿಗೆ ಕರೆಮಾಡಲು ಕೋರುತ್ತೇವೆ ಎಂದು ತಿಳಿಸಿದರು.
ಸಿಕೆಬಿ-1 ಸುದ್ದಿಗೋಷ್ಠಿಯಲ್ಲಿ ನಟ ಪ್ರಕಾಶ್ ರಾಜ್ ಮಾತನಾಡಿದರು.