ರಾಣೀಕೆರೆ ಒತ್ತುವರಿ ಸರ್ವೆ ಕಾರ್ಯಕ್ಕೆ ಗ್ರಹಣ

KannadaprabhaNewsNetwork |  
Published : Sep 27, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

Encroachment survey of Ranikere hits a roadblock

-ಭರಮಸಾಗರ ಸರ್ವೆ ನಂಬರಿನ ಒತ್ತುವರಿ ಮಾತ್ರ ಪೂರ್ಣ । ಸರ್ವೆ ಕಾರ್ಯಕ್ಕೆ ಆಮೆ ನಡಿಗೆ । ಸರ್ವೆಯರ್ ಗಳ ನಿರಾಸಕ್ತಿ

--

ಜಡೇಕುಂಟೆ ಮಂಜುನಾಥ್

ಕನ್ನಡಪ್ರಭವಾರ್ತೆ ಚಳ್ಳಕೆರೆ

ಚಳ್ಳಕೆರೆ ತಾಲೂಕಿನ ಪ್ರಸಿದ್ಧ ಕೆರೆ ಎಂದೇ ಹೆಸರಾಗಿರುವ ಮೀರಾಸಾಬಿಹಳ್ಳಿ ರಾಣೀಕೆರೆಯ ಒತ್ತುವರಿ ಸರ್ವೆ ಕಾರ್ಯಕ್ಕೆ ಯಾಕೋ ಗ್ರಹಣ ಹಿಡಿದಂತಾಗಿದೆ.

ದೊಡ್ಡೇರಿ, ಮೀರಾಸಾಬಿಹಳ್ಳಿ, ಬೊಮ್ಮಸಂದ್ರ ಹಾಗೂ ಭರಮಸಾಗರ ಗ್ರಾಮಗಳ ಸರ್ವೆ ನಂಬರ್ ಗಳಲ್ಲಿ ಹಂಚಿಹೋಗಿರುವ ರಾಣೀಕೆರೆ ಒತ್ತುವರಿ ಭರಮಸಾಗರ ಕಡೆಯ ಸರ್ವೆ ಮುಗಿದು ತೆರವೂ ಮಾಡಲಾಗಿದೆ.

ಆದರೆ, ದೊಡ್ಡೇರಿ, ಬೊಮ್ಮಸಮುದ್ರ, ಮೀರಾಸಾಬಿಹಳ್ಳಿ ಸರ್ವೆ ನಂಬರ್ ಗಳಲ್ಲಿ ಒತ್ತುವರಿ ಸರ್ವೆ ಅರೆಬರೆಯಾಗಿದೆ.

ಸಣ್ಣ ನೀರಾವರಿ ಇಲಾಖೆ ಕಡೆಯಿಂದ ಸರ್ವೆ ಇಲಾಖೆಗೆ ಪತ್ರವನ್ನೂ ಬರೆಯಲಾಗಿದೆ. ಕೆರೆ ಸಂರಕ್ಷಣಾ ಪ್ರಾಧಿಕಾರದಿಂದಲೂ ಪತ್ರ ಹೋಗಿದೆ. ಆದರೆ, ಸರ್ವೆ ಇಲಾಖೆಯ ಅಧಿಕಾರಿಗಳು ಮಾತ್ರ ಯಾಕೋ ಸರ್ವೆ ಕಾರ್ಯಕ್ಕೆ ಆಮೆ ನಡಿಗೆ ಅಳವಡಿಸಿದ್ದಾರೆ ಎನ್ನುತ್ತಾರೆ ಸಣ್ಣ ನೀರಾವರಿ ಅಧಿಕಾರಿಗಳು.

ಭರಮಸಾಗರ ಸರ್ವೆ ನಂಬರ್ ಒಂದರಲ್ಲೇ 9 ಕಡೆಗಳಲ್ಲಿ ಒತ್ತುವರಿ ಜಾಗ ಗುರುತಿಸಲಾಗಿತ್ತು. ಇದರಲ್ಲಿ 8 ಕಡೆ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನುಳಿದ ಮೂರು ಗ್ರಾಮಗಳ ಸರ್ವೆ ನಂಬರ್ ಗಳಲ್ಲಿ ಹಂಚಿ ಹೋಗಿರುವ ಕೆರೆಯ ಜಾಗದ ಸರ್ವೆ ಮಾಡಿ ಸ್ಕೆಚ್ ತಯಾರಿ ಮಾಡಿಕೊಡಲು ಹಿಂದೇಟು ಹಾಕುತ್ತಿರುವ ಸರ್ವೆ ಇಲಾಖೆಯವರು ಕಾರ್ಯ ಒತ್ತಡದ ಕಾರಣ ಮುಂದಿಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ನಾಲ್ಕೈದು ತಿಂಗಳ ಹಿಂದೆ ಕೆರೆಯ ಭರಮಸಾಗರ ಸರ್ವೆ ನಂಬರಿನ ತೆರವು ಕಾರ್ಯ ಮುಗಿದ ಮೇಲೆ ಉಳಿದ ಸರ್ವೆ ಕಾರ್ಯ ನೆನಗುದಿಗೆ ಬಿದ್ದಿದೆ. ಇದಕ್ಕೆ ಉತ್ತರಿಸುವವರು ಕಾಣದಂತಾಗಿದೆ.

ಮೈಸೂರಿನ ಅರಸ ಜಯಚಾಮರಾಜ ಒಡೆಯರ್ ತಮ್ಮ ರಾಣಿಯ ನೆನಪಿಗಾಗಿ 1907ರಲ್ಲಿ ನಿರ್ಮಾಣ ಮಾಡಿರುವ ತಾಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ರಾಣೀಕೆರೆಗೆ ಬಹಳ ದಿನಗಳಿಂದಲೂ ಒತ್ತುವರಿಯ ಪೆಡಂಭೂತ ಹೆಗಲೇರಿದೆ. ಸುಮಾರು 2,500 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ರಾಣೀಕೆರೆಗೆ ಕಾಲಕ್ಕೆ ಸರಿಯಾಗಿ ಮಳೆ ಬಂದು ತುಂಬಿದರೆ ಸುತ್ತಲ ಸುಮಾರು 60 ಹಳ್ಳಿಗಳ ರೈತರಿಗೆ ಅನುಕೂಲವಾಗಲಿದೆ. ಅಂತರ್ಜಲ ಮಟ್ಟವೂ ಏರಿಕೆಯಾಗಿ ಪಂಪ್ ಸೆಟ್ ಗಳಲ್ಲಿ ನೀರಿನ ಒರತೆಗೆ ಕೊರತೆಯೇ ಆಗುವುದಿಲ್ಲ.

24 ಅಡಿಗಳಷ್ಟು ಸುಮಾರು 0.5036 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಈ ರಾಣೀಕೆರೆಗೆ 60 ರ ದಶಕದಲ್ಲಿ ಹಿರಿಯೂರಿನ ಶಿಡ್ಲಯ್ಯನಕೋಟೆ ಹತ್ತಿರವಿರುವ ವೇದಾವತಿ ನದಿಯ ಡ್ಯಾಂ ನಿಂದ ಫೀಡರ್ ಚಾನೆಲ್ ಮೂಲಕ ನೀರು ಹರಿಸುವ ಇರಾದೆ ಇತ್ತು. ಇದು ಆಯಾಯ ಕಾಲಕ್ಕೆ ಆಡಳಿತಕ್ಕೆ ಬಂದ ಸರ್ಕಾರ ಕೂಡ ಹಣ ಕೊಟ್ಟು ಕಾಮಗಾರಿ ಪೂರ್ಣಗೊಳಿಸಿ ಜವಾಬ್ದಾರಿ ಮೆರೆದಿವೆ. ರಾಣೀಕೆರೆಯಲ್ಲಿ ಮಳೆ ಬಂದು ಕೆರೆ ಕೋಡಿ ಬಿದ್ದಾಗ ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮಿನುಗುತ್ತದೆ. ಮೀನು ಸಾಕಾಣಿಕೆಗೆ ಹೇಳಿ ಮಾಡಿಸಿದ ಕೆರೆ ಇದು.

ಭದ್ರಾ ಮೇಲ್ದಂಡೆಯಲಿ ಎಲ್ಲ ಕೆರೆಗಳಿಗೆ ನೀರು ಬರುತ್ತಿವೆ. ಸರ್ವೆಕಾರ್ಯ ಮುಗಿಸಿ ಕೆರೆಗಳ ಹದ್ದು ಬಸ್ತು ನಿಗಧಿಯಾದಲ್ಲಿ ಭವಿಷ್ಯದಲ್ಲಿ ನೀರು ಸಂಗ್ರಹಣೆಗೆ ಅನುಕೂಲವಾಗುತ್ತವೆ. ಅಧಿಕಾರಿ ವರ್ಗದವರ ಕಿವಿಯೊಳಗೆ ಇಂತಹ ಕಾಳಜಿಗಳು ಮಾರ್ದನಿಸುವುದು ಯಾವಾಗ ಎಂಬ ಪ್ರಶ್ನೆಗಳು ಎದುರಾಗಿವೆ.

---------

ಪೋಟೋ ಕ್ಯಾಪ್ಸನ್

ಚಳ್ಳಕೆರೆ ತಾಲೂಕಿನ ಇತಿಹಾಸ ಪ್ರಸಿದ್ಧ ರಾಣೀಕೆರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಲೈಮಾಕ್ಸ್ ತಲುಪಿದ ಸಿಟಿ ಇನ್‌ಸ್ಟಿಟ್ಯೂಟ್ ಸಭೆ
ಹಿಂದೂ ಮಹಾಗಣಪತಿ ಅದ್ಧೂರಿ ವಿಸರ್ಜನಾ ಮೆರವಣಿಗೆ