ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯ ಗಾಲ್ಫ್ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆಯಲ್ಲಿ ಬಡ ಕುಟುಂಬಗಳಿಗೆ ಕಡಿಮೆ ಬೆಲೆಗೆ ಗ್ಯಾಸ್, ಯುವಶಕ್ತಿ, ನಾರಿಶಕ್ತಿ, ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.ಈ ಮೊದಲೇ ಬಿಜೆಪಿ ಮಾಡಿರುವ ಘೋಷಣೆಗಳ ಬಗ್ಗೆ ಚರ್ಚೆಯಾಗಬೇಕು. ವಿದೇಶಗಳಿಂದ ಕಪ್ಪುಹಣ ತಂದು 15 ಲಕ್ಷ ರುಪಾಯಿ ತಂದುಕೊಟ್ಟರೇ, 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದುಪ್ಪಟ್ಟು ಮಾಡಿದರೇ, ಮೆಕ್ ಇನ್ ಇಂಡಿಯಾ, ಅಚ್ಚೇ ದಿನ್ ಆಯೇಗಾ ಎಂದು ಹೇಳಿದ್ದರು. ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಯಿತೇ? ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ 10 ವರ್ಷಗಳಲ್ಲಿ ಪ್ರಧಾನಮಂತ್ರಿಯಾಗಿ ಏನು ಮಾಡಿದ್ದಾರೆ ಎಂದು ಮೊದಲು ಹೇಳಬೇಕು. ಅದರ ಅವಲೋಕನ ಆದ ನಂತರ ಮುಂದಿನದ್ದು ಹೇಳಬೇಕು ಎಂದು ಸಿದ್ದರಾಮಯ್ಯ ನುಡಿದರು.ಬಿಜೆಪಿ ಸರ್ಕಾರ 25 ಕೋಟಿ ಉದ್ಯೋಗ ಸೃಷ್ಟಿಸಿದ್ದಾರೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. 25 ಕೋಟಿ ಉದ್ಯೋಗ ಯಾರಿಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಹಿರಿಯ ಮುಖಂಡ ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಸೋಲುವ ಭಯದಿಂದ ಮುಖ್ಯಮಂತ್ರಿ ಭೇಟಿ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿರುವ ಬಗ್ಗೆ ಮಾತನಾಡಿ, ನಾನು ಮತ್ತು ಶ್ರೀನಿವಾಸ ಪ್ರಸಾದ್ ರಾಜಕೀಯದಲ್ಲಿ ಸಮಕಾಲೀನರು. ಅವರು 1974ರಲ್ಲಿಯೇ ವಿಧಾನಸಭೆಗೆ ಸ್ಪರ್ಧಿಸಿದ್ದರು, ಒಟ್ಟಿಗೆ ರಾಜಕಾರಣದಲ್ಲಿದ್ದೆವು. ದೀರ್ಘ ಕಾಲದ ಸ್ನೇಹಿತ. ಅವರು ರಾಜಕೀಯದಿಂದ ನಿವೃತ್ತರಾಗಿ ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇಂಥ ಸಂದರ್ಭದಲ್ಲಿ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದ್ದೇನೆ ಎಂದರು.
ಎಚ್‌ಡಿಕೆ ಮನಃಸ್ಥಿತಿ ಅರ್ಥವಾಗುತ್ತದೆ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿದ್ಯುತ್, ಮದ್ಯ, ಬಸ್, ಸ್ಟಾಂಪ್ ಪೇಪರ್ ಬೆಲೆ ಹೆಚ್ಚು ಮಾಡಿ ಗ್ಯಾರಂಟಿ ಕೊಡುತ್ತಿದ್ದಾರೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅದಕ್ಕೆಲ್ಲ ಎಷ್ಟು ದುಡ್ಡು ಬರುತ್ತದೆ ಎಂದು ವಿಜಯೇಂದ್ರ ಅವರಿಗೆ ತಿಳಿದಿದೆಯೇ? ಗ್ಯಾರಂಟಿ ಯೋಜನೆಗಳಿಗಾಗಿ ಒಂದು ವರ್ಷಕ್ಕೆ 56,000 ಕೋಟಿ ರು.ಗಳ ಅಗತ್ಯವಿದೆ. ಅವುಗಳಿಂದ ಅಷ್ಟು ಹಣ ಬರುತ್ತದೆಯೇ ಎಂದು ಪ್ರಶ್ನಿಸಿದರು.