ತುಂಗಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿ ಬಾಗಿನ ಅರ್ಪಣೆ

KannadaprabhaNewsNetwork | Published : Sep 23, 2024 1:27 AM

ಸಾರಾಂಶ

ತುಂಗಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಬಾಗಿನ ಅರ್ಪಿಸಿದರು.

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಬಾಗಿನ ಅರ್ಪಿಸಿದರು. ಜಲ ಸಂಪನ್ಮೂಲ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಾಥ್‌ ನೀಡಿದರು. ಜಲಾಶಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಬಾಗಿನ ಅರ್ಪಿಸಿ ಇತಿಹಾಸ ನಿರ್ಮಿಸಿದರು.

ಜಲಾಶಯದಲ್ಲಿ ಗಂಗಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ವಿಘ್ನ ನಿವಾರಕನ ಮಂತ್ರ ಜಪ ಮಾಡಲಾಯಿತು. ಮಂತ್ರಘೋಷದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬಾಗಿನ ಅರ್ಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌, ಸಚಿವರಾದ ಶಿವರಾಜ್ ತಂಗಡಗಿ, ಎನ್‌.ಎಸ್‌. ಬೋಸರಾಜು, ಶರಣಪ್ರಕಾಶ್ ಪಾಟೀಲ್, ಸಂಸದರಾದ ರಾಜಶೇಖರ್ ಹಿಟ್ನಾಳ್, ಈ. ತುಕಾರಾಂ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಡಾ. ಎನ್.ಟಿ. ಶ್ರೀನಿವಾಸ್‌, ಕೃಷ್ಣ ನಾಯ್ಕ, ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ ಮತ್ತಿತರರಿದ್ದರು.

ಕನ್ನಯ್ಯಗೆ ಶಹಬ್ಬಾಸ್‌ಗಿರಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಹೈದರಾಬಾದ್‌ ಪರಿಣಿತ ಕನ್ನಯ್ಯ ನಾಯ್ಡು ಅವರಿಗೆ ಶಹಬ್ಬಾಸ್‌ಗಿರಿ ನೀಡಿದರು. ಆ.13ಕ್ಕೆ ಜಲಾಶಯದ ವೀಕ್ಷಣೆಗೆ ಆಗಮಿಸಿದ್ದ ಸಿದ್ದರಾಮಯ್ಯ ಶೀಘ್ರವೇ ಜಲಾಶಯಕ್ಕೆ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಸಿ ನೀರು ಪೋಲು ತಡೆಯಬೇಕು. ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕನ್ನಯ್ಯ ನಾಯ್ಡು ಅವರಿಗೆ ತಿಳಿಸಿದ್ದರು. ಈ ವೇಳೆ ಖಂಡಿತ ಮಾಡುವೆ ಎಂದಿದ್ದರು. ಆ.17ರಂದು 19ನೇ ಕ್ರಸ್ಟ್‌ಗೇಟ್‌ಗೆ ಸ್ಟಾಪ್‌ ಲಾಗ್ ಅಳವಡಿಸಿ 70 ಟಿಎಂಸಿ ನೀರನ್ನು ಕನ್ನಯ್ಯ ನಾಯ್ಡು ಉಳಿಸಿದ್ದರು.

ಹೊಸಪೇಟೆ ಗೇಟ್‌ನಿಂದ ಪ್ರವೇಶ:

ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಹೊಸಪೇಟೆ ಗೇಟ್‌ನಿಂದ ಪ್ರವೇಶ ಮಾಡಿದರು. ಜನರತ್ತ ಕೈಬೀಸಿದ ಅವರು, ಕೂಡ್ಲಿಗಿಯ ಭಾಗದ ಕೆಲವು ಫಲಾನುಭವಿಗಳಿಗೆ ಚೆಕ್‌ ವಿತರಿಸಿದರು. ಡಿಸಿಎಂ ಡಿ.ಕೆ. ಶಿವಕುಮಾರ ಕೂಡ ಆಗಮಿಸುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಜೈಕಾರ ಮೊಳಗಿಸಿದರು. ಬಾಗಿನ ಅರ್ಪಣೆ ಬಳಿಕ ಮುನಿರಾಬಾದ್‌ ದ್ವಾರದ ಮೂಲಕ ಸಿಎಂ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ಡಿಸಿಎಂ ಡಿ.ಕೆ. ಶಿವಕುಮಾರ, ಸಚಿವರು, ಶಾಸಕರು ಕೂಡ ತೆರಳಿದರು.

Share this article