ಎಲ್ರಿಗೂ ನಾವು ಬೇಕು, ಆದ್ರೆ ಯಾರಿಗೂ ನಾವು ಬೇಡ

KannadaprabhaNewsNetwork |  
Published : Sep 23, 2024, 01:26 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಹಳೇ ಮೈಸೂರಲ್ಲಿ ಒಕ್ಕಲಿಗರಿಗೆ ನಾವು ಬೇಕು. ಉತ್ತರ ಕರ್ನಾಟಕದಲ್ಲಿ ಲಿಂಗಾಯಿತರಿಗೆ ನಾವು ಬೇಕು. ಮಧ್ಯ ಕರ್ನಾಟಕದಲ್ಲಿ ಎಲ್ಲರೂ ಅಧಿಕಾರಕ್ಕೆ ಬರಲು ನಾವು ಏಣಿ ಆಗ್ಬೇಕು. ಆದ್ರೆ ನಾವು ಅಧಿಕಾರಕ್ಕೆ ಬರ್ತೀವಿ ಅಂದ್ರೆ ಎಲ್ಲರೂ ಬೇಡ ಅಂತಾರೆ ಎಂದು ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ವಿಷಾದ ವ್ಯಕ್ತಪಡಿಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಹಳೇ ಮೈಸೂರಲ್ಲಿ ಒಕ್ಕಲಿಗರಿಗೆ ನಾವು ಬೇಕು. ಉತ್ತರ ಕರ್ನಾಟಕದಲ್ಲಿ ಲಿಂಗಾಯಿತರಿಗೆ ನಾವು ಬೇಕು. ಮಧ್ಯ ಕರ್ನಾಟಕದಲ್ಲಿ ಎಲ್ಲರೂ ಅಧಿಕಾರಕ್ಕೆ ಬರಲು ನಾವು ಏಣಿ ಆಗ್ಬೇಕು. ಆದ್ರೆ ನಾವು ಅಧಿಕಾರಕ್ಕೆ ಬರ್ತೀವಿ ಅಂದ್ರೆ ಎಲ್ಲರೂ ಬೇಡ ಅಂತಾರೆ ಎಂದು ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ವಿಷಾದ ವ್ಯಕ್ತಪಡಿಸಿದರು.

ತರಾಸು ರಂಗಮಂದಿರಲ್ಲಿ ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಐದು ನೂರು ಕೊಟ್ರೆ ಎಲೆಕ್ಷನ್ ಟೈಂ ನಲ್ಲಿ ಸಿಕ್ಕ ಸಿಕ್ಕವರ ಹಿಂದೆ ಓಡಿ ಹೋಗ್ತೀರ. ಐದು ನೂರು ರುಪಾಯಿ ಐದು ವರ್ಷಗಳ ಕಾಲ ನಿಮ್ಮನ್ನು ಸಾಕುತ್ತಾ ಎಂದು ಪ್ರಶ್ನೆ ಮಾಡಿಕೊಳ್ಳಿ ಎಂದರು.

ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮಾದಿಗರು ಈ ಹೀನಾಯ ಪರಿಸ್ಥಿತಿಯಿಂದ ಹೊರ ಬರಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಮಾದಿಗರ ಸಂಘಟನೆ ಕ್ಷೀಣಿಸುತ್ತಿದೆ. ಮಾದಿಗರ ಹೆಸರಿನಲ್ಲಿ ಹುಟ್ಟಿಕೊಂಡಿರುವ ಸಾವಿರಾರು ಸಂಘಟನೆಗಳು ಅಧಿಕಾರಿಗಳನ್ನು ಹೆದರಿಸಿ ಬ್ಲಾಕ್‍ಮೇಲ್ ಮಾಡುತ್ತಿವೆ ಎಂದು ದೂರಿದರು.

ಬದುಕು ಕಟ್ಟಿಕೊಳ್ಳುವ ಕೆಲಸವಾಗುತ್ತಿಲ್ಲ. ಮಾದಿಗ ಜನಾಂಗದ ರಾಜಕಾರಣಿಗಳ ಶಕ್ತಿ ಮಾದಿಗರ ಉದ್ದಾರಕ್ಕೆ ಬಳಕೆಯಾಗಬೇಕಿದೆ. ಇಂದಲ್ಲ ನಾಳೆ ಒಳ ಮೀಸಲಾತಿ ಸಿಕ್ಕೇ ಸಿಗುತ್ತದೆ. ಮೊದಲು ಅಸೂಯೆ ಬಿಟ್ಟು ಮಾದಿಗರು ಒಂದಾಗಿ ಎಂದು ಕರೆ ನೀಡಿದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಚುನಾವಣೆ ಬಂದಾಗ ನೀವು ಯಾವ್ಯಾವ ಪಕ್ಷದಲ್ಲಿ ಬೇಕಾದರೂ ಇದ್ದುಕೊಂಡು ರಾಜಕೀಯ ಮಾಡಿಕೊಳ್ಳಿ. ಆದರೆ ಸಮಾಜದ ಪ್ರಶ್ನೆ ಬಂದಾಗ ಅಪಸ್ವರ ಬೇಡ. ಎಲ್ಲರೂ ಒಂದಾಗಿ ನಿಲ್ಲಬೇಕು ಎಂದರು.ಸುಪ್ರೀಂಕೋರ್ಟ್‍ನ ಏಳು ನ್ಯಾಯಾಧೀಶರ ಪೀಠ ಒಳ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯಗಳಿಗಿದೆಯೆಂದು ತೀರ್ಪು ನೀಡಿರುವುದನ್ನು ಸರ್ಕಾರ ಪಾಲಿಸಬೇಕು. ಮೂರು ದಶಕಗಳ ಕಾಲ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬಂದವರು ಈಗ ಸುಪ್ರೀಂಕೋರ್ಟ್ ತೀರ್ಪು ಸರಿಯಿಲ್ಲ ಎಂದು ಗೊಂದಲ ಸೃಷ್ಟಿಸುತ್ತಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.ಒಳ ಮೀಸಲಾತಿ ಜಾರಿ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ ಎಸ್ಎಸ್ ಪ್ರಮುಖ ಮೋಹನ ಭಾಗವತ್ ಸ್ವಾಗತಿಸಿದ್ದಾರೆ. ಆಂದ್ರ ಪ್ರದೇಶದಲ್ಲಿ ನಡೆದ ಮಾದಿಗ ದಂಡೋರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಂದೇ ಒಳ ಮೀಸಲಿಗೆ ತೀರ್ಮಾನಿಸಿ ಅದರಂತೆ ನಡೆದುಕೊಂಡಿದ್ದಾರೆಂದು ಗೋವಿಂದ ಕಾರಜೋಳ ಹೇಳಿದರು.

ರಾಜಕಾರಣಿಗಳಾದ ನಾವು ಚುನಾವಣೆಯಲ್ಲಿ ಅನಿವಾರ್ಯವಾಗಿ ಪಕ್ಷದ ಕೆಲಸ ಮಾಡಬೇಕು. ಆದರೆ ನೀವು ಮಾತ್ರ, ಯಾರು ನ್ಯಾಯ ಒದಗಿಸುತ್ತಾರೋ ಅಂತಹವರ ಪರವಾಗಿರಿ ಎಂದರು. ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಮೂವತ್ತು ವರ್ಷಗಳ ಸುಧೀರ್ಘ ಹೋರಾಟದ ಫಲವಾಗಿ ಸುಪ್ರೀಂಕೋರ್ಟ್ ಒಳ ಮೀಸಲಾತಿ ವಿಚಾರದಲ್ಲಿ ಐತಿಹಾಸಿಕ ತೀರ್ಪು ನೀಡಿ ಮಾದಿಗರ ಮನೆಯ ಕದ ತಟ್ಟುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಡ ಮಾಡದೆ ಅನುಷ್ಠಾನಗೊಳಿಸಬೇಕು. ಅಲ್ಲಿಯವರೆಗೂ ಯಾವುದೇ ಹುದ್ದೆಗಳಿಗೆ ನೇಮಕ ಮಾಡಬಾರದೆಂದು ಒತ್ತಾಯಿಸಿದರು.ಮಾಜಿ ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಎಲ್ಲಾ ಜಾತಿ ಧರ್ಮದವರಿಗೂ ಸಮಾನತೆ ಸಿಗಲಿ ಎನ್ನುವ ಕಾರಣಕ್ಕಾಗಿ ಮೀಸಲಾತಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ತಿರಸ್ಕಾರ, ಶೋಷಣೆಗೊಳಗಾದವರಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ರಾಜಕೀಯವಾಗಿ ಶಕ್ತಿ ತುಂಬಬೇಕಾಗಿದೆ. ಅಧಿಕಾರಿಗಳು ಧೈರ್ಯ ಮಾಡಿ ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘ ಕಟ್ಟಿರುವುದು ತುಂಬಾ ಖುಷಿಯಾಗಿದೆ ಎಂದರು. ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳು ಬಲಿಷ್ಠರ ಕೈಗೆ ಸಿಕ್ಕಿರುವುದರಿಂದ ಮಾದಿಗ ಸಮಾಜದ ಮಕ್ಕಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಸಿಇಟಿಯಲ್ಲಿಯೂ ಭ್ರಷ್ಟಾಚಾರ. ಹಾಗಾಗಿ ಒಳ ಮೀಸಲಾತಿಯನ್ನು ಗಂಭೀರವಾಗಿ ಪರಿಗಣಿಸಿ ಹೋರಾಟಕ್ಕೆ ಇಳಿಯದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ. ಶಿಕ್ಷಣದಲ್ಲಿ ಮಕ್ಕಳು ಏಕ್ರಾಗತೆ, ಬದ್ಧತೆಯನ್ನಿಟ್ಟುಕೊಳ್ಳಬೇಕು. ಶಿಕ್ಷಣದ ಜತೆ ತಾಂತ್ರಿಕ ಜ್ಞಾನವಿರಬೇಕು. ಒಳ ಮಿಸಲಾತಿಗಾಗಿ ಬೀದಿಗಿಳಿದು ಹೋರಾಡೋಣ ಎಂದು ಕರೆ ಕೊಟ್ಟರು.ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, ಸಮಾಜದ ವಿಚಾರ ಬಂದಾಗ ಮಾದಿಗ ಜನಾಂಗ ಮೊದಲು ಒಗ್ಗಟ್ಟಾಗಬೇಕು. ಸುಪ್ರೀಂಕೋರ್ಟ್ ಒಳ ಮೀಸಲಾತಿ ಕುರಿತು ಮಹತ್ವದ ತೀರ್ಪು ನೀಡಿದೆ. ಸಹೋದರ ಸಮಾಜದವರು ಒಳ ಮೀಸಲಾತಿಯಿಂದ ಅನ್ಯಾಯವಾಗುತ್ತಿದೆ ಎಂದು ಅವರವರೆ ಮಾತನಾಡಿಕೊಳ್ಳುತ್ತಿರುವುದರಲ್ಲಿ ಅರ್ಥವಿಲ್ಲ ಎಂದರು.ಸಮಾರಂಭದ ಸಾನಿಧ್ಯ ವಹಿಸಿದ್ದ ಆದಿಜಾಂಬವ ಗುರುಪೀಠದ ಷಡಕ್ಷರಮುನಿ ಸ್ವಾಮೀಜಿ ಆಶೀರ್ವಚನ ನೀಡಿ, ರಾಜಕೀಯ ದೊಂಬರಾಟ, ಇಬ್ಬಗೆಯ ಮಾತುಗಳಿಂದ ಮಾದಿಗ ಸಮುದಾಯಕ್ಕೆ ಧಕ್ಕೆಯಾಗುತ್ತಿದೆ. ಒಳ ಮೀಸಲಾತಿ ಕುರಿತು ಮಾದಿಗ ಸಮುದಾಯದ ರಾಜಕಾರಣಿಗಳು ಸದನದಲ್ಲಿ ಧ್ವನಿ ಎತ್ತಬೇಕು ಎಂದರು. ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಕೆ.ಜಿ. ಜಗದೀಶ್ ಪ್ರಾಸ್ತಾವಿಕ ಮಾತನಾಡಿದರು. ಪಂಚಾಯತ್‍ ರಾಜ್ ಇಂಜಿನಿಯರಿಂಗ್ ವಿಭಾಗ ಕಾರ್ಯಪಾಲಕ ಇಂಜಿನಿಯರ್ ಎಲ್. ಹನುಮಂತಪ್ಪ, ನಿವೃತ್ತ ಜಂಟಿ ನಿರ್ದೇಶಕ ಎಂ. ರೇವಣಸಿದ್ದಪ್ಪ, ಖಜಾನೆ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪಿ. ಜಯಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ನರಸಿಂಹರಾಜ, ನಿವೃತ್ತ ಕಾರ್ಯಪಾಲಕ ಅಭಿಯಂತರ ದೇವರಾಜ್ ಜಿ.ಆರ್. ಬಿಸಿಎಂಇಲಾಖೆ ನಿವೃತ್ತ ಅಧಿಕಾರಿ ಡಿ.ಟಿ. ಜಗನ್ನಾಥ್, ಡಾ. ಸತೀಶ್, ಕಾಂಗ್ರೆಸ್ ಮುಖಂಡ ಬಿ. ಸೋಮಶೇಖರ್, ನಿವೃತ್ತ ಕೆಎಎಸ್ ಅಧಿಕಾರಿ ಬಿ.ಎಸ್. ಪುರುಷೋತ್ತಮ ಸೇರಿದಂತೆ ಮಾದಿಗ ಸಮುದಾಯದ ಅನೇಕ ಮುಖಂಡರುಗಳು ವೇದಿಕೆಯಲ್ಲಿದ್ದರು. ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಿ.ಟಿ. ಶ್ರೀನಿವಾಸನ್ ಅಧ್ಯಕ್ಷತೆ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸಾಪ ಸಿಬ್ಬಂದಿಗಿಲ್ಲ 3 ತಿಂಗಳ ವೇತನ
ಜೆಡಿಎಸ್‌ ಹಾಸನ ಸಮಾವೇಶಕ್ಕೆ ಆಹ್ವಾನವಿಲ್ಲ : ಜಿ.ಟಿ.ದೇವೇಗೌಡ