ಕನ್ನಡಪ್ರಭ ವಾರ್ತೆ ಮಂಡ್ಯ
ಅಹಿಂದ ವರ್ಗದ ಮುಖ್ಯಮಂತ್ರಿ ಸಿದ್ದರಾಮಯ್ಯರ ಅವರ ತೇಜೋವಧೆ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ವಿರುದ್ಧ ಆ.27ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜಭವನ ಚಲೋ ಕಾರ್‍ಯಕ್ರಮಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಹಿಂದ ವರ್ಗದವರು ಭಾಗವಹಿಸುವಂತೆ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಎಚ್.ನಾಗರಾಜು ಮನವಿ ಮಾಡಿದರು.ನಗರದ ಕುರುಬರ ಸಂಘದ ಕಚೇರಿಯಲ್ಲಿ ನಡೆದ ರಾಜಭವನ ಚಲೋ ಕಾರ್‍ಯಕ್ರಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಈ ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಸಂವಿಧಾನ ಮತ್ತು ಒಕ್ಕೂಟ ತತ್ವದ ವಿರೋಧಿಯಾದ ರಾಜ್ಯಪಾಲರನ್ನು ಮೋದಿ ಸರ್ಕಾರ ಕೂಡಲೇ ವಾಪಸು ಕರೆಸಿಕೊಳ್ಳಬೇಕು. ಸಿದ್ದರಾಮಯ್ಯರವರ ಪ್ರಾಸಿಕ್ಯೂಷನ್ ಅನುಮತಿ ಹಿಂಪಡೆಯಬೇಕು, ಪ್ರಜಾಪ್ರಭುತ್ವ ಒಕ್ಕೂಟದ ವ್ಯವಸ್ಥೆ ಮತ್ತು ರಾಜ್ಯ ಸರ್ಕಾರದ ಸಾರ್ವಭೌಮತೆ ಸಂರಕ್ಷಿಸಬೇಕು. ಕನ್ನಡ ನಾಡಿನ ಘನತೆ ಕಾಪಾಡಬೇಕೆಂದು ಒತ್ತಾಯಿಸಿದರು.ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವಾಗ ಸಂವಿಧಾನದ ಮೂಲ ತತ್ವಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ರಾಜಭವನವನ್ನು ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಮತ್ತು ಫ್ಯೂಡಲ್ ವಾದಿ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಪಕ್ಷಗಳ ಕಚೇರಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯಪಾಲರು ಬಿಜೆಪಿ-ಜೆಡಿಎಸ್ ಪಕ್ಷಗಳ ತಾಳಕ್ಕೆ ಕುಣಿಯುತ್ತಿರುವುದಷ್ಟೆ ಅಲ್ಲದೇ, ತಾವು ಪಕ್ಷಪಾತಿ ಧೋರಣೆ ತಾಳಿದ್ದಾರೆ. ಜನರಿಂದ ಆಯ್ಕೆಯಾದ ಸರ್ಕಾರದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳ ವಿರುದ್ಧ ನಡೆಯುತ್ತಿರುವ ಪಿತೂರಿ- ಷಡ್ಯಂತ್ರಗಳ ಭಾಗವಾಗಿದ್ದಾರೆ. ಆ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ದುಷ್ಟರು, ಭ್ರಷ್ಟರೂ ಆದ ಬಿಜೆಪಿ-ಜೆಡಿಎಸ್ ಪಕ್ಷಗಳ ಹಿತಾಸಕ್ತಿಗೆ ಅಡವಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮುಡಾ ವಿಚಾರದಲ್ಲಿ ಒಂದು ಸೂಜಿ ಮೊನೆಯಷ್ಟೂ ತಪ್ಪು ಮಾಡಿಲ್ಲವೆಂದು ಇಡೀ ರಾಜ್ಯದ ಜನ ಹೇಳುತ್ತಿದ್ದಾರೆ ಹಾಗೂ ಸರ್ಕಾರಿ ದಾಖಲೆಗಳೂ ಹೇಳುತ್ತಿವೆ. ಆದರೆ, ರಾಜಕೀಯ ದುರುದ್ದೇಶದಿಂದ ಬಿಜೆಪಿ-ಜೆಡಿಎಸ್‌ಗಳು ಸಿದ್ದರಾಮಯ್ಯನವರನ್ನು ತೇಜೋವಧೆ ಮಾಡುತ್ತಲೇ ಹೊರಟಿದ್ದಾರೆ ಎಂದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್. ಸುರೇಶ್ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ರಾಜಭವನ ಚಲೋ’ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಜನರು ಭಾಗವಹಿಸುವಂತೆ ಮನವಿ ಮಾಡಿದರು.ಕೇಂದ್ರ ಸರ್ಕಾರ ರಾಜ ಭವನವನ್ನು ದುರ್ಬಳಕೆ ಮಾಡಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಈ ತಕ್ಷಣವೇ ನಿಲ್ಲಿಸಬೇಕು. ಸಂವಿಧಾನ ಮತ್ತು ಒಕ್ಕೂಟ ತತ್ವದ ವಿರೋಧಿ ರಾಜ್ಯಪಾಲರನ್ನು ಪ್ರಧಾನಿ ಮೋದಿ ಸರ್ಕಾರ ಕೂಡಲೇ ವಾಪಸು ಕರೆಸಿಕೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅಭಿಯೋಜನೆಗೆ ಅನುಮತಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಶೋಷಿತ ಸಮುದಾಯಗಳ ಮುಖಂಡರಾದ ವಿಜಯಲಕ್ಷ್ಮಿ ರಘುನಂದನ, ಅಮ್ಜದ್ ಪಾಷ, ಎಲ.ಸಂದೇಶ, ಸಾತನೂರು ಕೃಷ್ಣ, ರಾಜು, ರಮೇಶ, ರಾಜಣ್ಣ, ಮರಿಹೆಗ್ಗಡೆ, ಎನ್. ದೊಡ್ಡಯ್ಯ, ಚಂದಗಾಲು ವಿಜಯಕುಮಾರ್,ಸುಂಡಹಳ್ಳಿ ಮಂಜುನಾಥ, ಮಹೇಶ, ಸುಮನ, ನಾಗರತ್ನ ಮತ್ತಿತರರು ಭಾಗವಹಿಸಿದ್ದರು.