ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸೋಮವಾರ ಮಧ್ಯಾಹ್ನ 12 ಗಂಟೆಗೆ ಅಣೆಕಟ್ಟೆ ಮಧ್ಯ ಭಾಗದಲ್ಲಿನ ಕಾವೇರಿ ಮಾತೆಯ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಣೆಕಟ್ಟೆಗೆ ಬಾಗಿನ ಅರ್ಪಿಸಲಿದ್ದು, ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಕಾವೇರಿ ನೀರಾವರಿ ನಿಗಮದ ಅಣೆಕಟ್ಟೆ ವಿಭಾಗದ ಅಧಿಕಾರಿಗಳು, ಜಿಲ್ಲಾಧಿಕಾರಿ ಡಾ.ಕುಮಾರ್, ಎಸ್ಪಿ ಅವರು ಸಿದ್ಧತೆ ಕುರಿತು ಪರಿಶೀಲಿಸಿದರು.
ಬಾಗಿನ ಅರ್ಪಣೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಸಚಿವರಾದ ಎನ್.ಎಸ್. ಬೋಸರಾಜು, ಕೆ.ವೆಂಕಟೇಶ್ ಉಪಸ್ಥಿತಿಯಲ್ಲಿ ಸ್ಥಳೀಯ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ಹಿನ್ನೆಲೆಯಲ್ಲಿ ನಿಗಮದಿಂದ ಅಣೆಕಟ್ಟೆ ಮೇಲ್ಬಾಗದಲ್ಲಿನ ಗೋಡೆಗಳಿಗೆ ಸುಣ್ಣ-ಬಣ್ಣ ಬಳಿದು, ಕನ್ನಡ ಬಾವುಟ ಹಾಗೂ ತೋರಣಗಳಿಂದ ಸಿಂಗರಿಸುವ ಕೆಲಸ ನಡೆಸಲಾಗಿದೆ. ಸಚಿವ ಸಂಪುಟ ಸದಸ್ಯರು, ಶಾಸಕರು ಬಾಗಿನ ಅರ್ಪಿಸುವ ಜಾಗದಲ್ಲಿ ಕೆಂಪು ಬಣ್ಣದ ಮ್ಯಾಟ್ ಹೊದಿಸಿ ಪುಟ್ಟ ವೇದಿಕೆ ನಿರ್ಮಿಸಲಾಗಿದೆ. ಬಾಗಿನ ಅರ್ಪಿಸುವ ಜಾಗದ ಸುತ್ತಲೂ ಅಣೆಕಟ್ಟೆಗೆ ಹೊಂದಿಕೊಳ್ಳುವಂತೆ ಬೊಂಬುಗಳಿಂದ ಕಟ್ಟಿ ಬಿಗಿ ಭದ್ರತೆ ಗೊಳಿಸಿಲಾಗಿದೆ. ಸಿಎಂ, ಸಚಿವರು ಆಗಮಿಸುವ ಹಿನ್ನೆಲೆಯಲ್ಲಿ ಅಣೆಕಟ್ಟೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಹೆಲಿಪ್ಯಾಡ್ ಬಳಿ ಸ್ವಚ್ಛತೆ:
ಸಿಎಂ ತೆರಳುವ ಮಾರ್ಗದ ರಸ್ತೆಯಲ್ಲಿ ಬೆಳದ ಗಿಡ-ಗೆಂಟೆ ತೆಗೆದು ಹೊರ ಸಾಗಿಸಿ ಸ್ವಚ್ಛತೆ ಮಾಡಲಾಗಿದೆ. ಹೆಲಿಕಾಪ್ಟರ್‌ನಿಂದ ಇಳಿದ ಬಳಿಕ ಕಾರಿನ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬರುವ ಮಾರ್ಗದಲ್ಲಿ ರಸ್ತೆಯ ಎರಡು ಬದಿಯಲ್ಲಿ ವಿವಿಧ ಬಗೆಯ ಸ್ವಾಗತ ಕಮಾನುಗಳು, ಕಟೌಟ್‌ಗಳನ್ನು ಅಳವಡಿಸಿ ಸ್ವಾಗತಿಸಲಾಗುತ್ತಿದೆ. ಈಗಾಗಲೇ ಜಲಾಶಯದಲ್ಲಿ ಗರಿಷ್ಠ ಮಟ್ಟ ತಲುಪಿ ಸಂಪೂರ್ಣ ಭರ್ತಿಯಾಗಿದ್ದು, ಉಳಿದ ನೀರನ್ನು ಜಲಾಶಯದಿಂದ ಕಾವೇರಿ ನದಿಗೆ ಹರಿಸಲಾಗುತ್ತಿದೆ.