ಕನ್ನಡಪ್ರಭ ವಾರ್ತೆ ಮೈಸೂರು
ಸೋಮವಾರ ಸಂಜೆ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರು ಅಶೋಕಪುರಂನ ಎನ್.ಟಿ.ಎಂ.ಎಸ್. ಶಾಲೆಯಲ್ಲಿ ವಿ. ಶ್ರೀನಿವಾಸಪ್ರಸಾದ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಪ್ರಸಾದ್ ಅವರ ಪತ್ನಿ, ಪುತ್ರಿಯರು, ಅಳಿಯಂದಿರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ವರ್ಷಗಳ ನಂತರ ನನ್ನ ಅವರ ಭೇಟಿ ಸಂತಸ ತಂದಿತ್ತು. ಶ್ರೀನಿವಾಸಪ್ರಸಾದ್ ಅವರಿಗೆ ಜ್ಞಾಪಕ ಶಕ್ತಿ ಚೆನ್ನಾಗಿತ್ತು. ಮೊನ್ನೆ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆರೋಗ್ಯ ಸುಧಾರಿಸುವ ವಿಶ್ವಾಸವಿತ್ತು. ಕುಟುಂಬದವರ ಜೊತೆ ಮಾತನಾಡಿದ್ದೆ. ಕಿಡ್ನಿ ಫೇಲ್ ಆಗಿದ್ದರೂ ಅವರ ವಿಲ್ ಪವರ್ ಚೆನ್ನಾಗಿ ಇತ್ತು ಎಂದರು.ಶ್ರೀನಿವಾಸಪ್ರಸಾದ್ ಕೇಂದ್ರ ಮಂತ್ರಿಯಾಗಿದ್ದರು, ರಾಜ್ಯ ಮಂತ್ರಿಯಾಗಿದ್ದರು. ರಾಜಕೀಯದಲ್ಲಿ ಸೋಲು- ಗೆಲುವು ಸಾಮಾನ್ಯ. 50 ವರ್ಷಗಳ ಕಾಲ ಸಕ್ರಿಯ ರಾಜಕಾರಣ ಮಾಡಿದರು. ಇತ್ತೀಚೆಗೆ ರಾಜಕೀಯದಿಂದ ನಿವೃತ್ತಿ ಹೊಂದಿ ಯಾರಿಗೂ ಕ್ಯಾಂಪೇನ್ ಮಾಡಲ್ಲ ಎಂದಿದ್ದರು. ಅವರದು ಹೋರಾಟದ ಬದುಕು. ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದರು.
ಮಂಗಳವಾರ ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ರಜೆ ಘೋಷಣೆ ಮಾಡಿದ್ದೇವೆ. ರಾಜ್ಯ ಸರ್ಕಾರದ ಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದರು.ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಮಾಜಿ ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಎಂ.ಕೆ. ಸೋಮಶೇಖರ್ ಮೊದಲಾದವರು ಇದ್ದರು.