ಇಂದು ಮುಖ್ಯಮಂತ್ರಿಯಿಂದ ಲಕ್ಕುಂಡಿಯಲ್ಲಿ ಉತ್ಖನನಕ್ಕೆ ಚಾಲನೆ

KannadaprabhaNewsNetwork |  
Published : Jun 03, 2025, 12:29 AM IST
ಎಚ್‌.ಕೆ.ಪಾಟೀಲ್‌ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಜೂ. 3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐತಿಹಾಸಿಕ ಲಕ್ಕುಂಡಿಯಲ್ಲಿರುವ 101 ಬಾವಿ, 101 ದೇವಸ್ಥಾನ ಸೇರಿದಂತೆ ಅನೇಕ ಐತಿಹಾಸಿಕ ಕುರುಹು ಪತ್ತೆ ಹಚ್ಚುವಿಕೆಯ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಸಿದ್ದರಾಮಯ್ಯ ಅವರು ಬಯಲು ವಸ್ತು ಸಂಗ್ರಹಾಲಯ, ಪ್ರಾಚ್ಯಾವಶೇಷಗಳ ವೀಕ್ಷಣೆ ಮಾಡಲಿದ್ದಾರೆ.

ಗದಗ: ಜೂ. 3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐತಿಹಾಸಿಕ ಲಕ್ಕುಂಡಿಯಲ್ಲಿರುವ 101 ಬಾವಿ, 101 ದೇವಸ್ಥಾನ ಸೇರಿದಂತೆ ಅನೇಕ ಐತಿಹಾಸಿಕ ಕುರುಹು ಪತ್ತೆ ಹಚ್ಚುವಿಕೆಯ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ಯುನಿಸ್ಕೊದವರು ಲಕ್ಕುಂಡಿಯನ್ನು ಈಗಾಗಲೇ ಗುರುತಿಸಿದ್ದಾರೆ. ಸಿದ್ದರಾಮಯ್ಯ ಅವರು ಬಯಲು ವಸ್ತು ಸಂಗ್ರಹಾಲಯ, ಪ್ರಾಚ್ಯಾವಶೇಷಗಳ ವೀಕ್ಷಣೆ ಮಾಡಲಿದ್ದಾರೆ. ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಗದಗ ನಗರಕ್ಕೆ ಆಗಮಿಸಿ ಕರ್ನಾಟಕ ಕುರುಬರ ಸಹಕಾರಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಾಧಿಕಾರ ಉದ್ಘಾಟನೆ: ಗದಗ-ಬೆಟಗೇರಿ ವ್ಯಾಪಾರ ವಸ್ತು ಪ್ರದರ್ಶನ ಪ್ರಾಧಿಕಾರ ಉದ್ಘಾಟಿಸಲಿದ್ದು, ಆನಂತರ 34 ಎಕರೆಯ ಪರಿಕಲ್ಪನೆ ಅನಾವರಣೆ ಮಾಡಲಿದ್ದಾರೆ. ರಾಜ್ಯ ಸರ್ಕಾರದ ಪ್ರಾಚ್ಯ ವಸ್ತು ಇಲಾಖೆಯಿಂದ ಕೇಂದ್ರ ಸರ್ಕಾರದ ನಿಯಮಾನುಸಾರ ಉತ್ಖನನ ನಡೆಯಲಿದೆ. ದೇಶದಲ್ಲಿ ಕೆಲವೇ ಭಾಗಗಳಲ್ಲಿ ಮಾತ್ರ ಉತ್ಖನನ ನಡೆದಿದೆ. ಲಕ್ಕುಂಡಿಯಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಆಗಿದೆ. ಕೋಟಿ ಶ್ರೀ ವೀರಭದ್ರೇಶ್ವರ ಆವರಣದಲ್ಲಿ ಉತ್ಖನನ ಕಾರ್ಯಕ್ಕೆ ಚಾಲನೆ ಮಾಡಲಾಗುವುದು ಎಂದರು.

ಈ ಹಿಂದೆ 1200 ಪ್ರಾಚ್ಯಾವಷೇಶಗಳು ಲಕ್ಕುಂಡಿಯಲ್ಲಿ ಒಂದೇ ದಿನದಲ್ಲಿ ಪತ್ತೆಯಾಗಿವೆ. 5 ಮನೆಯವರು ನಾವು ಮನೆ ನೀಡುತ್ತೇವೆ. ಆದರೆ, ನಮಗೆ ಪರ್ಯಾಯವಾಗಿ ಮನೆ ನಿರ್ಮಿಸಿ ಕೊಡಿ ಎಂದು ಕೇಳಿದ್ದಾರೆ. ಗ್ರಾಮಸ್ಥರ ಸಂಪೂರ್ಣ ಸಹಕಾರ ಈ ಕಾರ್ಯಕ್ಕೆ ಇದ್ದು, ಒಟ್ಟು 27 ಮನೆಯವರು ಮನೆ ಬಿಟ್ಟು ಕೊಡಲು ತೀರ್ಮಾನಿಸಿದ್ದಾರೆ. ಅವರಿಗೆ ಸರ್ಕಾರದಿಂದ ಮನೆ ನಿರ್ಮಾಣ ಮಾಡಲು ಭರವಸೆ ನೀಡಲಾಗಿದೆ. ಒಟ್ಟಾರೆಯಾಗಿ ಲಕ್ಕುಂಡಿಯನ್ನು ಐತಿಹಾಸಿಕ ತಾಣವಾಗಿ ವಿಶ್ವದರ್ಜೆಗೆ ಏರಿಸಬೇಕು ಎನ್ನುವುದೇ ನಮ್ಮ ಮೂಲ ಗುರಿಯಾಗಿದೆ. ಇದಕ್ಕೆ ಅನೇಕ ಇತಿಹಾಸ ತಜ್ಞರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಿದರು.ರಾಷ್ಟ್ರಪತಿ ಅಂಕಿತ: ರಾಜ್ಯ ಸರ್ಕಾರ, ಕರ್ನಾಟಕ ಶಾಸನ ಸಭೆ, ಸಿವಿಲ್ ಪ್ರೊಸಿಜರ್ ಕೋಡ್‌ ತಿದ್ದುಪಡಿ ಮಾಡಲಾಗಿದೆ. 89ಎ ವಿಧಿಯನ್ನು ಸೇರಿಸಿದ ಕಾನೂನನ್ನು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಕಳುಹಿಸಲಾಗಿತ್ತು. ರಾಷ್ಟ್ರಪತಿ ಅವರು ಈಗಾಗಲೇ ಅಂಕಿತ ಹಾಕಿದ್ದಾರೆ. ಸಿವಿಲ್ ಕೇಸ್‌ಗೆ ಎರಡು ತಿಂಗಳಿಗೆ ಕಾಲಾವಧಿ ನೀಡಲಾಗುವುದು. ಈ ಅವಧಿಯಲ್ಲಿ ಸಮಸ್ಯೆ ಬಗೆಹರಿಯದಿದ್ದರೆ, ಈ ಕೇಸ್ ಎಷ್ಟು ದಿನಗಳಲ್ಲಿ ಬಗೆಹರಿಯುತ್ತದೆ ಎಂದು ತೀರ್ಮಾನಿಸಲಾಗುವುದು. ಒಟ್ಟಾರೆಯಾಗಿ ಎರಡು ವರ್ಷಗಳಲ್ಲಿ ಎಲ್ಲ ಸಿವಿಲ್ ಪ್ರಕರಣ ಬಗೆಹರಿಸಲು ತೀರ್ಮಾನಿಸಲಾಗಿದ್ದು, ಇದೊಂದು ಕ್ರಾಂತಿಕಾರಕ ಬದಲಾವಣೆ ಆಗಲಿದೆ ಎಂದು ಕಾನೂನು ಸಚಿವರು ಮಾಹಿತಿ ನೀಡಿದರು.

ಬಡವರ, ಸಣ್ಣ ರೈತರ ಪ್ರಕರಣಗಳನ್ನು 6 ತಿಂಗಳಲ್ಲಿ ಬಗೆಹರಿಯಬೇಕು. ಮಧ್ಯಮ ವರ್ಗದವರ ಪ್ರಕರಣಗಳು ಎರಡು ವರ್ಷಗಳಲ್ಲಿ ಬಗೆಹರಿಯಬೇಕು ಎನ್ನುವುದು ಸಿವಿಲ್ ಪ್ರೊಸಿಜರ್ ಕೋಡ್‌ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಯಾರಿ ಮಾಡಿಕೊಂಡಿದೆ. ಒಟ್ಟಾರೆಯಾಗಿ ವ್ಯಾಜ್ಯಮುಕ್ತ ರಾಜ್ಯವನ್ನಾಗಿ ಮಾಡುವುದೇ ಸರ್ಕಾರದ ಉದ್ದೇಶವಾಗಿದೆ. ಎರಡು ವರ್ಷದ ಅವಧಿಯಲ್ಲಿ ಇದು ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.

ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆ ಅನಾಷ್ಠಾನದ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಅಕ್ಬರಸಾಬ್ ಬಬರ್ಚಿ, ಉಮರಫಾರೂಖ್ ಹುಬ್ಬಳ್ಳಿ, ಬಸವರಾಜ ಕಡೆಮನಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀನಿಮಿಷಾಂಬ ದೇವಾಲಯದಲ್ಲಿ ಮಾಘ ಶುದ್ಧ ಹುಣ್ಣಿಮೆ ಮಹೋತ್ಸವ
ಮಕ್ಕಳನ್ನು ಸ್ಪರ್ಧಾತ್ಮಕ ಯುಗಕ್ಕೆ ಪರಿಚಯಿಸಬೇಕಿದೆ: ಎಸ್.ಆರ್.ಲೋಕೇಶ್