ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಡಿಸಿ । ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಲು ಸೂಚನೆಕನ್ನಡಪ್ರಭ ವಾರ್ತೆ ಕಲಬುರಗಿ
ನಗರದಲ್ಲಿ ನಿರ್ಮಾಣವಾಗಿರುವ 371 ಹಾಸಿಗೆಯ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಆಸ್ಪತ್ರೆಯನ್ನು ಇದೇ ಡಿ.22 ರಂದು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಶುಕ್ರವಾರ ಇಲ್ಲಿನ ತಮ್ಮ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸುವಂತೆ ಸೂಚಿಸಿದರು.ಜಯದೇವ ಆಸ್ಪತ್ರೆ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ, ರಾಜ್ಯಸಭೆ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಜಿಲ್ಲೆಯ ಸಚಿವರು, ಶಾಸಕರು ಹಾಗೂ ಇನ್ನಿತರ ಜನಪ್ರತಿನಿಧಿಗಳು ಭಾಗವಹಿಸಲಿದ್ದು, ವೇದಿಕೆ ಕಾರ್ಯಕ್ರಮ ನೂತನ ಆಸ್ಪತ್ರೆಯ ಆವರಣದಲ್ಲಿ ಜರುಗಲಿದ್ದು, ಆಸ್ಪತ್ರೆಯನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಬೇಕು. ಎಲ್ಲೆಡೆ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.
ಸಿಎಂ ಸೇರಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದರಿಂದ ಶಿಷ್ಟಚಾರದಂತೆ ಎಲ್ಲಾ ಜನಪ್ರತಿನಿಧಿಗಳಿಗೆ ಆಮಂತ್ರಣ ಪತ್ರಿಕೆ ತಲುಪಿಸಬೇಕು. ನೂತನ ಜಯದೇವ ಆಸ್ಪತ್ರೆಯಲ್ಲಿಯೇ ಗ್ರೀನ್ ರೂಂ ಸ್ಥಾಪಿನೆ ಹಾಗೂ ಸೂಕ್ತ ಪೊಲೀಸ್ ಭದ್ರತೆ ವ್ಯವಸ್ಥೆ ಕಲ್ಪಿಸಬೇಕು. ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಮುಖ್ಯ ವೇದಿಕೆ ಸ್ಥಳ ಮತ್ತು ಡಿ-ಜೋನ್ ಅಂತಿಮಗೊಳಿಸಬೇಕು. ಸಂಚಾರಿ ವ್ಯವಸ್ಥೆ ನಿರ್ವಹಣೆ, ಕಾರ್ಯಕ್ರಮ ನಡೆಯುವ ಆಸ್ಪತ್ರೆ ಆವರಣದಲ್ಲಿ ಟೆಂಟ್, ಆಸನ ವ್ಯವಸ್ಥೆ, ಪಾರ್ಕಿಂಗ್ ಸ್ಥಳ ಗುರುತಿಸಿ ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಸಾರ್ವಜನಿಕರು ಬರುವುದರಿಂದ ಎಲ್ಲೆಡೆ ಸೈನೇಜ್ ಬೋರ್ಡ್ ಅಳವಡಿಸಬೇಕು. ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ಊಟದ ವ್ಯವಸ್ಥೆ ಮಾಡಬೇಕು ಎಂದರು.
ಕಲಬುರಗಿಯ ಜಯದೇವ ಶಾಖಾ ಆಸ್ಪತ್ರೆಯ ಪ್ರಭಾರಿ ಅಧೀಕ್ಷಕ ಡಾ.ವಿರೇಶ ಪಾಟೀಲ ಮತ್ತು ಇವೆಂಟ್ ಮ್ಯಾನೇಜರ್ ಶರತ್ ಇದೂವರೆಗೆ ಕೈಗೊಂಡಿರುವ ಸಿದ್ಧತೆ ಕುರಿತು ಸಭೆಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಕ್ಷಣಕ್ಷಣದ ವೇಳಾಪಟ್ಟಿ ಸಿದ್ದಪಡಿಸಿ ಸಲ್ಲಿಸಬೇಕು ಎಂದು ಆಸ್ಪತ್ರೆ ವೈದ್ಯರಿಗೆ ಡಿಸಿ ತರುನ್ನುಮ್ ಸೂಚಿಸಿದರು.ಸಭೆಯಲ್ಲಿ ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಎಸ್‌ಪಿ ಅಡ್ಡೂರು ಶ್ರೀನಿವಾಸಲು, ಡಿಸಿಪಿ ಕನಿಕಾ ಸಿಕ್ರಿವಾಲ್, ಮಹಾನಗರ ಪಾಲಿಕೆಯ ಉಪ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ, ಜಯದೇವ ಆಸ್ಪತ್ರೆಯ ಸಮನ್ವಯಾಧಿಕಾರಿ ಸಂತೋಷ್, ಪ್ರೊಜೆಕ್ಟ್ ಎಂಜಿನೀಯರ್ ಪ್ರಸಾದ ಉಪಸ್ಥಿತರಿದ್ದರು.