ಕನ್ನಡಪ್ರಭ ವಾರ್ತೆ ಬೆಂಗಳೂರು
ವೆಚ್ಚ ಕಡಿಮೆ ಮಾಡುವ ಕುರಿತು ಇತ್ತೀಚೆಗೆ ಲೋಕೋಪಯೋಗಿ ಇಲಾಖೆ, ಕರ್ನಾಟಕ ಗೃಹ ಮಂಡಳಿ, ಕೆಆರ್‌ಐಡಿಎಲ್, ಪೊಲೀಸ್ ಗೃಹ ಮಂಡಳಿಯ ಉನ್ನತ ಅಧಿಕಾರಿಗಳೊಂದಿಗೆ ಮುಖ್ಯ ಕಾರ್ಯದರ್ಶಿಯವರು ಸಭೆ ನಡೆಸಿದ್ದರು.
ಸಭೆಯಲ್ಲಿ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಮುಖವಾಗಿ ಕಿಟಕಿ ಮೇಲೆ ಸಜ್ಜಾ ನಿರ್ಮಾಣ ಕೈಬಿಡುವುದು, ನೆಲಹಾಸು ನಿರ್ಮಾಣಕ್ಕೆ ಮಾರ್ಬಲ್ ಫ್ಲೋರಿಂಗ್ ಬದಲು ವಿಟ್ರಿಫೈಡ್ ಟೈಲ್ಸ್ ಬಳಕೆ ಸೇರಿದಂತೆ ಹಲವು ಸಲಹೆ ನೀಡಿದರು. ಸಿವಿಲ್ ಕಾಮಗಾರಿ, ಎಲೆಕ್ಟ್ರಿಕಲ್, ನೀರು, ಒಳಚರಂಡಿ ಕಾಮಗಾರಿಗಳಿಗೆ ಪ್ರತಿ ಚದರ ಮೀಟರ್‌ಗೆ ಕರ್ನಾಟಕ ಗೃಹ ಮಂಡಳಿಯು ಅತಿ ಕಡಿಮೆ ವೆಚ್ಚ ಅಂದರೆ 2,750 ರು. ಮಾಡುತ್ತದೆ. ಲೋಕೋಪಯೋಗಿ ಇಲಾಖೆ ₹2,861, ಕೆಆರ್‌ಐಡಿಎಲ್ ಮತ್ತು ಪೊಲೀಸ್ ಗೃಹ ಮಂಡಳಿ ₹2,881 ವೆಚ್ಚ ಮಾಡುತ್ತಿವೆ. ಹೀಗಾಗಿ ಎಲ್ಲ ಸರ್ಕಾರಿ ಕಟ್ಟಡಗಳಿಗೂ ಅನ್ವಯವಾಗುವಂತೆ ಒಂದು ಸರಾಸರಿ ದರ ನಿಗದಿಪಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.ಮಣ್ಣಿನ ವಿಧ, ಬಂಡೆರೂಪದ ಜಮೀನು, ಕರಾವಳಿ ಸೇರಿದಂತೆ ವಿಭಿನ್ನ ಭೂಪ್ರದೇಶ ಇರುವ ಕಡೆ ಕಟ್ಟಡದ ಸುರಕ್ಷತೆಗಾಗಿ ವೆಚ್ಚ ಹೆಚ್ಚಳವಾಗುವ ಅಂಶಗಳನ್ನು ಪರಿಗಣಿಸಿ ಅಂತಹ ಕಡೆ ಅಗತ್ಯಕ್ಕೆ ತಕ್ಕಂತೆ ವೆಚ್ಚ ನಿಗದಿಪಡಿಸಿ ಕಟ್ಟಡ ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.ವೆಚ್ಚ ಕಡಿತಕ್ಕೆ ಸಲಹೆಗಳು:
-ಕಟ್ಟಡಗಳಿಗೆ ಯುಪಿವಿಸಿ ಕಿಟಕಿ ಅಳವಡಿಸುವ ಕಾರಣ ಮಳೆ ನೀರು, ಗಾಳಿ ಬರುವುದಿಲ್ಲ. ಹೀಗಾಗಿ, ಸಜ್ಜಾವನ್ನು ಕೈಬಿಡುವುದು.-ಬೇಸ್‌ಮೆಂಟ್, ಸೆಲ್ಲಾರ್ ಮಟ್ಟದಲ್ಲಿ ವಾಹನ ನಿಲುಗಡೆಗೆ ನೆಲಮಟ್ಟದಲ್ಲಿ ‘ಸ್ಟಿಲ್ಟ್ ಪಾರ್ಕಿಂಗ್’ ನಿರ್ಮಿಸಬೇಕು. ಎತ್ತರವನ್ನು 4.50 ಮೀಟರ್ ನೀಡಿದರೆ ಎರಡು ಅಂತಸ್ತಿನಲ್ಲಿ ವಾಹನಗಳನ್ನು ನಿಲ್ಲಿಸಬಹುದು.
-ಕಟ್ಟಡದೊಳಗೆ ನೆಲಹಾಸು ಹಾಕಲು ಮಾರ್ಬಲ್, ಕ್ಲಾಡ್ಡಿಂಗ್ ಬದಲು ವಿಟ್ರಿಫೈಡ್ ಟೈಲ್ಸ್ ಬಳಸುವುದು.-ಬಾಗಿಲುಗಳು, ಕಿಟಕಿಗಳ ಎತ್ತರವನ್ನು ವಸತಿಗೃಹಗಳಿಗೆ 2.10 ಮೀಟರ್ ಹಾಗೂ ಕಚೇರಿಗಳಿಗೆ 2.40 ಮೀಟರ್ ಸೀಮಿತಗೊಳಿಸುವುದು.
-ವೆಂಟಿಲೇಟರ್‌ಗಳನ್ನು ಪ್ರಸ್ತಾಪಿಸಬಾರದು. ಅವುಗಳು 2.25 ಮೀಟರ್ ಎತ್ತರ ಇರುವ ಕಾರಣ ನಿರ್ವಹಣೆ ಕಷ್ಟ.-ವಸತಿಗೃಹಗಳ ಒಳ ಎತ್ತರ 3 ಮೀಟರ್ ಹಾಗೂ ಕಚೇರಿಗಳ ಒಳ ಎತ್ತರ 3.60 ಮೀಟರ್‌ಗೆ ಸೀಮಿತಗೊಳಿಸುವುದು.
-ಮೀಟಿಂಗ್ ಹಾಲ್, ಶಸ್ತ್ರಚಿಕಿತ್ಸಾ ಕೊಠಡಿಗಳಿಗೆ ಮಾತ್ರ ಫಾಲ್ಸ್ ಸೀಲಿಂಗ್ ಇರಲಿ. ಅಧಿಕಾರಿಗಳ ಕೊಠಡಿಗಳಿಗೆ ಅಗತ್ಯವೆನಿಸುವುದಿಲ್ಲ.- ಆವರಣ ಗೋಡೆಗಳಿಗೆ ಕಾಂಕ್ರೀಟ್ ಪ್ರೀ ಫ್ಯಾಬ್ರಿಕೇಟೆಡ್ ಕಾಂಪೋನೆಂಟ್ಸ್ ಬಳಸುವುದರಿಂದ ಮೂಲವೆಚ್ಚ ಮತ್ತು ಸಮಯ ಉಳಿತಾಯವಾಗುತ್ತದೆ.
- ನ್ಯಾಯಾಧೀಶರು ಹಾಗೂ ಅತಿ ಮುಖ್ಯ ವ್ಯಕ್ತಿಗಳ ಕಟ್ಟಡ ಹೊರತುಪಡಿಸಿ ಪೀಠೋಪಕರಣಗಳ ವೆಚ್ಚವು ಕಟ್ಟಡದ ವೆಚ್ಚದ ಶೇ.5ಕ್ಕೆ ಸೀಮಿತಗೊಳ್ಳಬೇಕು.