ವಿನೋಭಾ ಬಾವೆ ಪ್ರೇರಣೆಯಿಂದ ಶಿಕ್ಷಣ ಸಂಸ್ಥೆ ಸ್ಥಾಪನೆ: ಗೃಹ ಸಚಿವ ಜಿ. ಪರಮೇಶ್ವರ್

KannadaprabhaNewsNetwork |  
Published : Nov 24, 2024, 01:46 AM IST
12 | Kannada Prabha

ಸಾರಾಂಶ

ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ವ್ಯವಸ್ಥೆಯ ವಿರುದ್ಧದ ಸಾತ್ವಿಕ ಸಿಟ್ಟು ಇದೆ. ಸಿಎಂ ಆಗಿ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಅವರು ಕೆಲಸ ಮಾಡಬೇಕಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿನೋಭಾಬಾವೆ ಅವರ ಪ್ರೇರಣೆಯಿಂದ ನಮ್ಮ ತಂದೆ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾಗಿ ಗೃಹ ಸಚಿವ ಹಾಗೂ ಶ್ರೀ ಸಿದ್ಧಾರ್ಥ ಎಜುಕೇಷನ್‌ ಸೊಸೈಟಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹೇಳಿದರು.

ಸುಭಾಷ್‌ ನಗರದಲ್ಲಿ ಶುಕ್ರವಾರ ನಡೆದ ಕ್ವೆಸ್ಟ್‌ ಅಕಾಡೆಮಿಯ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಶಿಕ್ಷಣವು ಸಮಾಜ ಮತ್ತು ದೇಶವನ್ನು ಬದಲಿಸುತ್ತದೆ ಎಂಬ ನಂಬಿಕೆ ಇತ್ತು. ವಿನೋಭಾ ಬಾವೆ ಅವರು ಒಮ್ಮೆ ನಮ್ಮ ಮನೆಗೆ ಭೇಟಿ ನೀಡಿದ್ದಾಗ ಹರಿಜನರ ಪರವಾದ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವಂತೆ ನಮ್ಮ ತಂದೆ ಮನವಿ ಮಾಡಿದರು. ಆದರೆ ಬಾವೆ ಅವರು ನಮ್ಮ ತಂದೆಗೇ ಆ ಜವಾಬ್ದಾರಿ ನೀಡಿದ್ದರ ಫಲವಾಗಿ ಸಿದ್ಧಾರ್ಥ ಎಜುಕೇಷನ್‌ ಸೊಸೈಟಿ ಆರಂಭವಾಯಿತು. ಕೊಟ್ಟಿಗೆಯಲ್ಲಿ ಆರಂಭವಾದ ಶಿಕ್ಷಣವು ಇಂದು 85 ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ ಎಂದರು.

ಇದಕ್ಕೆ ನನ್ನ ಸಹೋದರನ ಪ್ರೇರಣೆ ಮರೆಯುವಂತಿಲ್ಲ. ನಮ್ಮ ಸಂಸ್ಥೆಯಲ್ಲಿ ಲಕ್ಷಾಂತರ ಮಂದಿ ಪದವಿ ಪಡೆದಿದ್ದಾರೆ. ಸಾವಿರಾರು ಮಂದಿ ಜೀವನ ಕಟ್ಟಿಕೊಂಡಿದ್ದಾರೆ. 40 ಪ್ರೌಢಶಾಲೆಗಳಿವೆ. ನಮ್ಮ ಎಲ್ಲಾ ಶಿಕ್ಷಣ ಸಂಸ್ಥೆಗಳು ಗ್ರಾಮಾಂತರ ಪ್ರದೇಶದಲ್ಲಿವೆ. ಆದರೆ ನಾವು ಮೈಸೂರಿನಲ್ಲಿ ಈ ಸಂಸ್ಥೆ ಆರಂಭಿಸಿದ್ದು ಬದಲಾವಣೆಯ ಕಾರಣಕ್ಕೆ. ಈ ಜಾಗವನ್ನು 25 ವರ್ಷದ ಹಿಂದೆ ಎಂಡಿಎ ನೀಡಿತ್ತು. ಇಲ್ಲಿ ಕೆಲವರು ಸಣ್ಣಪುಟ್ಟ ಮನೆ ನಿರ್ಮಿಸಿಕೊಂಡಿದ್ದರು. ನಾವು ಅದೆಲ್ಲವನ್ನೂ ತೆರವುಗೊಳಿಸಿ, ನಮ್ಮ ಶಿಕ್ಷಣ ಮಂಡಳಿಯ ಒಪ್ಪಿಗೆ ಪಡೆದು ಇಲ್ಲಿ ಕ್ವೆಸ್ಟ್‌ ಅಕಾಡೆಮಿ ಆರಂಭಿಸಿದ್ದಾಗಿ ಅವರು ಹೇಳಿದರು.

ಕ್ವೆಷ್ಟ್ ಎಂದರೆ ಹುಡುಕುವುದು ಎಂದರ್ಥ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು. ನಮ್ಮದು ಒಂದು ವಿವಿ ಆಗಿದೆ. ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸಂಸ್ಥೆ ಬದ್ಧವಾಗಿದೆ. ಶಿಕ್ಷಣದ ಮೂಲಕ ನಾವು ಯಾರಿಗೆ ತಲುಪಲು ಸಾಧ್ಯವಿಲ್ಲವೋ ಅವರನ್ನು ತಲುಪಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ವ್ಯವಸ್ಥೆಯ ವಿರುದ್ಧದ ಸಾತ್ವಿಕ ಸಿಟ್ಟು ಇದೆ. ಸಿಎಂ ಆಗಿ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಅವರು ಕೆಲಸ ಮಾಡಬೇಕಿದೆ ಎಂದು ಹೇಳಿದರು.

ನಾನು ಶಾಸಕನಾಗಿದ್ದಾಗ ಗಂಗಾಧರಯ್ಯ ಅವರು ನಮ್ಮದೇ ಆದ ವೈದ್ಯಕೀಯ ಕಾಲೇಜು ತೆರೆಯಬೇಕು ಎಂದು ಬಂದಾಗ ಒಂದು ಅರ್ಜಿ ಬರೆದು 27 ಶಾಸಕರಿಂದ ಸಹಿ ಹಾಕಿಸಿದ್ದರ ಫಲವಾಗಿ ವೈದ್ಯಕೀಯ ಕಾಲೇಜು ಆರಂಭವಾಯಿತು. ಅಂತಹ ಸಾರ್ಥಕ ಸೇವೆಯನ್ನು ಗಂಗಾಧರಯ್ಯ ಮಾಡಿದ್ದಾರೆ ಎಂದರು.

ಶಾಸಕ ತನ್ವೀರ್‌ ಸೇಠ್‌ ಮಾತನಾಡಿ, ರಾಜ್ಯ ಸರ್ಕಾರವು ಕರ್ನಾಟಕ ಶಿಕ್ಷಣ ಕಾಯ್ದೆ ಮೂಲಕ ಶಾಲೆ ಎಂಬುದಕ್ಕೆ ನಿಜವಾದ ಅರ್ಥ ನೀಡಿದೆ. ಶಿಕ್ಷಣದಿಂದ ವಂಚಿತ ವರ್ಗ ಹೆಚ್ಚಾಗಿರುವ ನನ್ನ ಕ್ಷೇತ್ರದಲ್ಲಿ ಶಾಲೆ ಇರುವುದು ನನಗೆ ಸಂತೋಷವಾಗಿದೆ. ಈ ಸ್ಥಳದಲ್ಲಿ ವಿಳಂಬವಾದರೂ ಉತ್ತಮ ಕಟ್ಟಡ ಬಂದಿದೆ. ಈ ಸಂಸ್ಥೆಗೆ ಪೋಷಕನಾಗಿ ಇರುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!