ಧಾರವಾಡ: ಚಿಗರಿ ಬಸ್ಸುಗಳ ಅವಾಂತರ ಆಗಾಗ ಆಗುತ್ತಿದ್ದರೂ ಭಾನುವಾರದ ದುರಂತ ಮಾತ್ರ ಆಕಸ್ಮಿಕ ಹಾಗೂ ಭಯಂಕರ. ಚಿಗರಿ ಬಸ್ಸಿನ ಎಕ್ಸಲ್ ತುಂಡಾಗಿ ಚಾಲಕನ ನಿಯಂತ್ರಣ ಕಳೆದುಕೊಂಡು ಜೆಎಸ್‌ಎಸ್ ಕಾಲೇಜಿನ ಆವರಣಕ್ಕೆ ನುಗ್ಗಿದೆ.
ನಿತ್ಯ ಸಾವಿರಾರು ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಬಂದು ಹೋಗುವ ಕಾಲೇಜಿನ ಮುಖ್ಯದ್ವಾರದ ಮೂಲಕ ಆವರಣಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ. ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.ನಿಯಂತ್ರಣ ತಪ್ಪಿದ ಚಿಗರಿ ಬಸ್ ಏಕಾಏಕಿ ತನ್ನ ಕಾರಿಡಾರ್ ಬಿಟ್ಟು ಬ್ಯಾರಿಕೇಡ್ ಮುರಿದುಕೊಂಡು ಕಾಲೇಜಿನ ಕಾಂಪೌಂಡ್‌ಗೆ ಡಿಕ್ಕಿ ಹೊಡೆಯಿತು. ಕಾಲೇಜಿನ ದ್ವಾರದ ಬಳಿ ನಿತ್ಯ ವಿದ್ಯಾರ್ಥಿಗಳು ಮತ್ತು ಜನರು ಇರುತ್ತಿದ್ದರು. ಅದೃಷ್ಟವಶಾತ್ ಭಾನುವಾರ ಶಾಲೆ- ಕಾಲೇಜಿಗೆ ರಜೆ ಇದ್ದಿದ್ದರಿಂದ ವಿದ್ಯಾರ್ಥಿಗಳು ಇರಲಿಲ್ಲ. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ. ಕಾಲೇಜು ಕಾಂಪೌಂಡ್ ಬಸ್ ಡಿಕ್ಕಿಯಾಗಿರುವ ವಿರುದ್ಧ ಜೆಎಸ್‌ಎಸ್ ಸಂಸ್ಥೆ ಅವರು ಧಾರವಾಡ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎಬಿವಿಪಿ ಪ್ರತಿಭಟನೆ: ಚಿಗರಿ ಬಸ್ ಕಾಲೇಜು ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದ್ದನ್ನು ಖಂಡಿಸಿ ಎಬಿವಿಪಿ ಪದಾಧಿಕಾರಿಗಳು ರಸ್ತೆಗಿಳಿದು ದಿಢೀರ್ ಪ್ರತಿಭಟನೆ ನಡೆಸಿದರು. ಬಿಆರ್‌ಟಿಎಸ್ ಬಸ್‌ಗಳಿಂದ ಈ ರೀತಿಯ ಅನಾಹುತಗಳು ಆಗಾಗ ಸಂಭವಿಸುತ್ತಲೇ ಇವೆ. ಕಾಲೇಜು ಕಾಂಪೌಂಡ್ ಬಳಿ ವಿದ್ಯಾರ್ಥಿಗಳು ಇಲ್ಲದಿರುವುದರಿಂದ ದೊಡ್ಡ ದುರ್ಘಟನೆ ತಪ್ಪಿದೆ. ಇಂತಹ ಅನಾಹುತಗಳಿಗೆ ಕಡಿವಾಣ ಬೀಳಬೇಕಿದೆ. ಜೆಎಸ್‌ಎಸ್ ಕಾಲೇಜಿನ ಎದುರಿನ ರಸ್ತೆಯಲ್ಲಿ ಮೇಲು ಸೇತುವೆ ನಿರ್ಮಿಸಬೇಕು. ರಸ್ತೆ ಮಧ್ಯದ ವಿಭಜಕವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ, ವಾಹನಗಳ ಸಂಚಾರ ತಡೆದು ಪ್ರತಿಭಟಿಸಿದರು. ಇದರಿಂದ ಕೆಲ ಹೊತ್ತು ಸಂಚಾರ ದಟ್ಟನೆಯಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ಮಹಾನಿಂಗ ನಂದಗಾವಿ, ಪ್ರತಿಭಟನಾಕಾರರ ಮನಮೊಲಿಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.ಈ ವೇಳೆ ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕರು ಸ್ಥಳಕ್ಕೆ ಬರುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಬಿಆರ್‌ಟಿಸಿ ಎಂ.ಡಿ. ಸಾವಿತ್ರಿ ಕಡಿ, ಕಾಲೇಜು ಬಳಿ ಸೇತುವೆ ನಿರ್ಮಿಸಲು ಶೀಘ್ರದಲ್ಲಿ ಸಭೆ ಕರೆಯುತ್ತೇನೆ ಎಂದು ತಿಳಿಸಿದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.