- ಒಂದೇ ಗುಂಡಿಯಲ್ಲಿ ಎರಡ್ಮೂರು ಶವ ಹೂಳುವಂತಹ ದುಸ್ಥಿತಿ । ನೀರಿಲ್ಲ, ನೆಟ್‌ವರ್ಕ್ ಇಲ್ಲ, ರಸ್ತೆ-ಚರಂಡಿಗಳೂ ಇಲ್ಲ
ಕನ್ನಡಪ್ರಭ ವಾರ್ತೆ ಜಗಳೂರು
ಒಂದೆಡೆ ಶವಗಳ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದೇ ಅಲೆದಾಡುವ ದುಸ್ಥಿತಿ. ಇನ್ನೊಂದೆಡೆ ಮೂಕ ಪ್ರಾಣಿಗಳಿಗೆ ಕುಡಿಯುವ ನೀರಿನ ತೊಟ್ಟಿಯೂ ಇಲ್ಲದ ಬರದ ವಾತಾವರಣ. ಮೊಬೈಲ್ ನೆಟ್‌ವರ್ಕ್ ಸಿಗ್ನಲ್‌ಗಾಗಿ ಹುಡುಕಾಟ, ತಿಂಗಳ ಪಡಿತರಕ್ಕಾಗಿ ಪಕ್ಕದ ಊರಿಗೆ ಅಲೆದಾಟ, ನೀರಿಗಾಗಿ ಮನೆಗೊಂದು ತಳ್ಳುವ ಗಾಡಿ, ಬಂದ್ ಬಿದ್ದ ಜೆಜೆಎಂ ಯೋಜನೆ, ಸಾರಿಗೆ ಸೌಕರ್ಯವಿಲ್ಲದೇ ಪರದಾಡುವ ವಿದ್ಯಾರ್ಥಿಗಳು- ಕೂಲಿಕಾರರು, ಹೂಳು ತುಂಬಿ ಗಬ್ಬು ನಾರುತ್ತಿರುವ ಚರಂಡಿಗಳು, ತುಕ್ಕು ಹಿಡಿದ ಶುದ್ಧ ಕುಡಿಯುವ ನೀರಿನ (ಆರ್‌ಒ) ಘಟಕಗಳು...ಹೀಗೆ ಸಾಲು ಸಾಲು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಗ್ರಾಮ ತಾಲೂಕಿನ ಚಿಕ್ಕ ಉಜ್ಜಿನಿ. ಜಗಳೂರು ತಾಲೂಕು ಕೇಂದ್ರದಿಂದ ಕೇವಲ ೨೨ ಕಿ.ಮೀ. ದೂರದಲ್ಲಿರುವ, ಕ್ಯಾಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಗ್ರಾಮ ಚಿಕ್ಕ ಉಜ್ಜಿನಿ. ಇಲ್ಲಿ ಸುಮಾರು ೪೦೦ ಮನೆಗಳು, ೩,೦೦೦ಕ್ಕೂ ಹೆಚ್ಚು ಜನಸಂಖ್ಯೆ ಹಾಗೂ ೧,೭೦೦ಕ್ಕೂ ಅಧಿಕ ಮತದಾರರು ಇದ್ದಾರೆ. ಇಷ್ಟು ದೊಡ್ಡ ಗ್ರಾಮಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷದವರು ಈ ಗ್ರಾಮದಿಂದಲೇ ಚುನಾವಣೆ ಪ್ರಚಾರ ಆರಂಭಿಸುತ್ತಾರೆ. ಆದರೆ ಗ್ರಾಮಕ್ಕೆ ಮಾತ್ರ ಮೂಲ ಸೌಕರ್ಯಗಳೇ ಇಲ್ಲ! ಸರ್ಕಾರ ಗ್ರಾಮೀಣ ಅಭಿವೃದ್ಧಿಗಾಗಿ ಕೋಟ್ಯಂತರ ರು. ವೆಚ್ಚ ಮಾಡುತ್ತಿದ್ದರೂ, ಇಲ್ಲಿನ ಜನರಿಗೆ ಮಾತ್ರ ಆ ಯೋಜನೆಗಳು ಗಗನಕುಸುಮ.
ಪ್ರತಿಯೊಬ್ಬ ವ್ಯಕ್ತಿಗೂ ಕೊನೆಗಾಲದಲ್ಲಿ ಗೌರವಯುತ ಅಂತ್ಯಸಂಸ್ಕಾರ ಸಿಗಬೇಕು. ಆದರೆ ಚಿಕ್ಕ ಉಜ್ಜಿನಿಯಲ್ಲಿ ಮೃತದೇಹಗಳನ್ನು ಹೂಳಲು ನಿರ್ದಿಷ್ಟ ಸ್ಮಶಾನ ಜಾಗವೇ ಇಲ್ಲ. ಇದ್ದ ಸಣ್ಣ ಸ್ಮಶಾನದಲ್ಲೇ ಒಂದೇ ಗುಂಡಿಯಲ್ಲಿ ಎರಡ್ಮೂರು ಮೃತದೇಹಗಳನ್ನು ಹೂಳುವಂತಹ ದಯನೀಯ ಸ್ಥಿತಿಯಿದೆ. ಸ್ಮಶಾನ ಸೌಲಭ್ಯಕ್ಕಾಗಿ ತಾಲೂಕು ಕಚೇರಿ ಹಾಗೂ ಗ್ರಾಮ ಪಂಚಾಯಿತಿಗೆ ಇಲ್ಲಿಯ ಗ್ರಾಮಸ್ಥರು ನೂರಾರು ಮನವಿ ಸಲ್ಲಿಸಿದರೂ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ.
ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲ. ಕಲುಷಿತ ನೀರು ರಸ್ತೆ ಮೇಲೇ ಹರಿಯುತ್ತಿದೆ. ಚರಂಡಿಗಳ ಹೂಳು ತೆಗೆಯದೇ ಸೊಳ್ಳೆಗಳ ಹಾವಳಿ ವಿಪರೀತವಾಗಿದೆ. ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಒಮ್ಮೆಯೂ ಚಿಕ್ಕ ಉಜ್ಜಿನಿ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿಲ್ಲ ಎಂದು ಸ್ಥಳೀಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಚಿಕ್ಕ ಉಜ್ಜಿನಿ ಗ್ರಾಮಕ್ಕೆ ಸೂಕ್ತ ಸಾರಿಗೆ ಸಂಪರ್ಕವೇ ಇಲ್ಲ. ಪರಿಣಾಮ ಅಪಘಾತ, ಅನಾರೋಗ್ಯ ಅಥವಾ ಹೆರಿಗೆಯಂತಹ ತುರ್ತು ಸಂದರ್ಭಗಳಲ್ಲಿ ಜನರನ್ನು ಆಸ್ಪತ್ರೆ ತಲುಪಿಸುವುದೇ ದೊಡ್ಡ ಸವಾಲಾಗಿದೆ. ಸೂಕ್ತ ಸಮಯಕ್ಕೆ ವಾಹನ/ಆಂಬ್ಯುಲೆನ್ಸ್ ಸಿಗದೇ ರಸ್ತೆಯಲ್ಲೇ ಹೆರಿಗೆಯಾದ ಹೃದಯ ವಿದ್ರಾವಕ ಘಟನೆಗಳೂ ಇಲ್ಲಿ ನಡೆದಿವೆ. ಚಿಕಿತ್ಸೆಗಾಗಿ ಸೊಕ್ಕೆ ಅಥವಾ ಉಜ್ಜಿನಿಗೆ ಅಲೆಯಬೇಕಾದ ದುಸ್ಥಿತಿ ಇದೆ. ತಕ್ಷಣವೇ ಚಿಕ್ಕ ಉಜ್ಜಿನಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಬೇಕು ಎಂಬುದು ಸ್ಥಳೀಯರ ಒತ್ತಾಯವಿದೆ.
(ಬಾಕ್ಸ್)
ಚಿಕ್ಕ ಉಜ್ಜಿನಿಯಲ್ಲಿ ೩೫೦ಕ್ಕೂ ಹೆಚ್ಚು ರೇಷನ್ ಕಾರ್ಡ್‌ಗಳಿದ್ದರೂ, ೧೯೯೧ರಿಂದ ಈವರೆಗೆ ಸ್ವಂತ ನ್ಯಾಯಬೆಲೆ ಅಂಗಡಿಯೇ ಇಲ್ಲ. ಪಡಿತರ ತರಲು ಪಕ್ಕದ ಗಡಿಮಾಕುಂಟೆ ಗ್ರಾಮಕ್ಕೇ ತೆರಳಬೇಕು. ಸರಿಯಾದ ವಾಹನ ಸೌಕರ್ಯ ಸಿಗದಿದ್ದಾಗ ಕಿಲೋ ಮೀಟರ್‌ಗಟ್ಟಲೆ ತಲೆ ಮೇಲೆಯೇ ಅಕ್ಕಿ-ಗೋದಿಯ ಚೀಲಗಳನ್ನು ಹೊತ್ತು ತರಬೇಕಾದ ಶಿಕ್ಷೆ ಇಲ್ಲಿನ ಜನರು ಅನುಭವಿಸುತ್ತಿದ್ದಾರೆ. "ಪ್ರತಿ ತಿಂಗಳು ರೇಷನ್ ತರಲು ಒಂದು ದಿನದ ದುಡಿಮೆ, ಕೂಲಿ ಹಾಳು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಸರ್ಕಾರ ತಕ್ಷಣ ಚಿಕ್ಕ ಉಜ್ಜಿನಿ ಗ್ರಾಮದಲ್ಲೇ ನ್ಯಾಯಬೆಲೆ ಅಂಗಡಿ ಪ್ರಾರಂಭಿಸಬೇಕು ಎಂದು ಸಾಗರ, ಅಂಜಿನಪ್ಪ ಮೊದಲಾದ ಗ್ರಾಮಸ್ಥರು ಆಗ್ರಹಿಸುತ್ತಾರೆ.
- - -
-08ಜೆ.ಜಿ.ಎಲ್.1: ಚಿಕ್ಕಉಜ್ಜಿನಿಯಲ್ಲಿ ಹೂಳು ತುಂಬಿ ಗಬ್ಬು ನಾರುತ್ತಿರುವ ಚರಂಡಿಗಳು.-08ಜೆ.ಜಿ.ಎಲ್.2: ಕುಡಿಯುವ ನೀರಿಗಾಗಿ ಗ್ರಾಮಸ್ಥರು ಮುಗಿಬಿದ್ದಿರುವುದು.