ಚಿಕ್ಕಬಳ್ಳಾಪುರ ಜಿಲ್ಲೆ 1575 ಎಕರೆ ಕೆರೆ ಭೂಮಿ ಒತ್ತುವರಿ ತೆರವುಗೊಳಿಸಿ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork |  
Published : Nov 13, 2026, 01:30 AM IST
              ಸಿಕೆಬಿ-7  ಸಚಿವ ಈಶ್ವರ ಖಂಡ್ರೆ ಅವರು   ಸಿಇಓ ಡಾ.ವೈ.ನವೀನ್ ಭಟ್  ರೊಂದಿಗೆ ಕಾರಿನಲ್ಲೇ ಸಭೆ ನಡೆಸಿದರು | Kannada Prabha

ಸಾರಾಂಶ

ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ ಸ್ವಾಧೀನದಲ್ಲಿರುವ ಅಥವಾ ನಿರ್ವಹಿಸುತ್ತಿರುವ 1332 ಕೆರೆಗಳಿದ್ದು, 742 ಕೆರೆಗಳ 2817 ಎಕರೆ ಭೂಮಿ ಒತ್ತುವರಿಯಾಗಿತ್ತು. ಈ ಪೈಕಿ 299 ಕೆರೆಗಳ 1242 ಎಕರೆ ಒತ್ತುವರಿಯನ್ನು ಈವರೆಗೆ ತೆರವು ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗ್ರಾ.ಪಂ.ಗೆ ಸೇರಿದ 443 ಕೆರೆಗಳ 1575 ಎಕರೆ ಭೂಮಿ ಒತ್ತುವರಿಯಾಗಿದ್ದು, ಕೂಡಲೇ ತೆರವು ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಜಿಲ್ಲಾ ಪಂಚಾಯತಿ ಸಿಇಒಗೆ ಆದೇಶ ನೀಡಿದ್ದಾರೆ.

ಗೌರಿಬಿದನೂರಿಗೆ ತೆರಳುವ ಮಾರ್ಗದಲ್ಲಿ ಬೆಂಗಳೂರು ಗ್ರಾಮಾಂತರ ಗಡಿಯಿಂದ ಗೌರಿಬಿದನೂರುವರೆಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಅವರೊಂದಿಗೆ ಕಾರಿನಲ್ಲೇ ಸಭೆ ನಡೆಸಿದ ಸಚಿವರು, ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ ಸ್ವಾಧೀನದಲ್ಲಿರುವ ಅಥವಾ ನಿರ್ವಹಿಸುತ್ತಿರುವ 1332 ಕೆರೆಗಳಿದ್ದು, 742 ಕೆರೆಗಳ 2817 ಎಕರೆ ಭೂಮಿ ಒತ್ತುವರಿಯಾಗಿತ್ತು. ಈ ಪೈಕಿ 299 ಕೆರೆಗಳ 1242 ಎಕರೆ ಒತ್ತುವರಿಯನ್ನು ಈವರೆಗೆ ತೆರವು ಮಾಡಲಾಗಿದೆ. ಉಳಿಕೆ ಒತ್ತುವರಿಯಲ್ಲಿ ಮನೆಗಳ ನಿರ್ಮಾಣ ಆಗಿರುವ ಪ್ರದೇಶ ಹೊರತು ಪಡಿಸಿ ಉಳಿದ ಕೆರೆ ಭೂಮಿ ಒತ್ತುವರಿ ತೆರವುಗೊಳಿಸಿ ಕೆರೆಗಳ ಸಂರಕ್ಷಣೆ ಮಾಡಬೇಕು. ರಾಜಕಾಲುವೆ ಅಡೆತಡೆ ನಿವಾರಿಸಿ, ನೀರು ತುಂಬಿಸಿ, ಅಂತರ್ಜಲಮಟ್ಟ ಹೆಚ್ಚಿಸುವಂತೆ ಹಾಗೂ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗದಂತೆ ರಕ್ಷಿಸಿ ಎಂದು ತಾಕೀತು ಮಾಡಿದರು. ರಾಜ್ಯೋತ್ಸವದ ಕೊಡುಗೆಯಾಗಿ ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು ನೀಡಲು ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ನ.2ರಿಂದ ಅರ್ಜಿ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಈವರೆಗೆ ಎಷ್ಟು ಅರ್ಜಿ ಸ್ವೀಕೃತವಾಗಿದೆ ಎಂಬ ಮಾಹಿತಿ ಪಡೆದ ಸಚಿವರು, ಇ.ಓ ಮತ್ತು ಪಿಡಿಓಗಳೊಂದಿಗೆ ಸಭೆ ನಡೆಸಿ, ಎಲ್ಲ ಆಸ್ತಿಗಳಿಗೂ ವಿಳಂಬ ಇಲ್ಲದೆ ಇ-ಸ್ವತ್ತು ನೀಡುವಂತೆ ನಿರ್ದೇಶನ ನೀಡಿದರು.

ಇ-ಸ್ವತ್ತು ಕೋರಿ ಅರ್ಜಿಗಳು ಬಂದ ಕೂಡಲೇ ಪಿಡಿಓಗಳು ಅಥವಾ ಕಾರ್ಯದರ್ಶಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಯಾವುದೇ ವಿಳಂಬವಿಲ್ಲದಂತೆ ಇ-ಸ್ವತ್ತು ವಿತರಿಸಬೇಕು ಎಂದು ಸಚಿವರು ತಿಳಿಸಿದರು.

ಬಸ್ ತಂಗುದಾಣ ನಿರ್ಮಾಣಕ್ಕೆ ಸೂಚನೆ:

ವಿಬಿಜಿ ರಾಮ್ ಜಿ ಅಡಿಯಲ್ಲಿ 1000 ಬಸ್ ತಂಗುದಾಣ ನಿರ್ಮಿಸಲು ತೀರ್ಮಾನಿಸಲಾಗಿದ್ದು, ರಾಜ್ಯ ಮಟ್ಟದಲ್ಲೇ ವಿನ್ಯಾಸ ತಯಾರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೆಚ್ಚು ಪ್ರಯಾಣಿಕರ ಆಗಮನ, ನಿರ್ಗಮನ ಇರುವ 50 ಹಳ್ಳಿಗಳ ಬಸ್ ನಿಲುಗಡೆ ಗುರುತಿಸಿ ಅಲ್ಲಿ ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಲು ಕ್ರಮ ವಹಿಸುವಂತೆ ಸೂಚಿಸಿದರು.

ಅಕ್ಕ ಕೆಫೆಗಳು ಮಹಿಳೆಯರಿಗೆ ಜೀವನೋಪಾಯ ಕಲ್ಪಿಸಲು ಸಹಕಾರಿಯಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೊಸ ಅಕ್ಕ ಕೆಫೆ ಆರಂಭಿಸಲು ಮತ್ತು ವಿಬಿಜಿ ರಾಮ್ ಜಿ ಯೋಜನೆಯಡಿ ಸ್ತ್ರೀ ಮಾರ್ಟ್ ಗಳನ್ನು ನಿರ್ಮಿಸಲು ಕ್ರಮ ವಹಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಇಲಾಖೆಗೆ ಲಭ್ಯವಿರುವ ಸಂಪನ್ಮೂಲದ ಸದ್ಬಳಕೆಗೆ ಸೂಚನೆ ನೀಡಿದ ಸಚಿವರು, ವಿಬಿಜಿ ರಾಮ್ ಜಿ ಅಡಿ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಗ್ರಾಮ ಸಭೆ ನಡೆಸಿ ಅರ್ಹ ಫಲಾನುಭವಿಗಳಿಗೆ ಕುರಿ, ಮೇಕೆ ಕೊಟ್ಟಿಗೆ, ಹಂದಿ ಗೂಡು, ಕೊಳವೆ ಬಾವಿ ಮರುಪೂರಣ ಪಿಟ್, ಕೃಷಿ ಹೊಂಡ ಮಂಜೂರು ಮಾಡಲು ಮತ್ತು ಕಾರ್ಮಿಕರಿಗೆ 15 ದಿನಗಳಲ್ಲಿ ಕೂಲಿ ಪಾವತಿಸಲು ಆದೇಶ ನೀಡಿದರು.

ಸಿಇಒ, ಉಪ ಕಾರ್ಯದರ್ಶಿ ಮತ್ತು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯತಿಗಳಿಗೆ ಹಠಾತ್ ಭೇಟಿ ನೀಡಿ ರಸ್ತೆ, ನೀರು, ಬೀದಿ ದೀಪ, ಇ-ಸ್ವತ್ತು, ನಕ್ಷೆ ಮಂಜೂರಾತಿ, ನೈರ್ಮಲ್ಯ, ಕೆರೆ ಅಭಿವೃದ್ಧಿ, ವಿಬಿಜಿ ರಾಮ್ ಜಿ ಪ್ರಗತಿ ಪರಿಶೀಲಿಸಬೇಕು. ಜನರ ಅಹವಾಲು ಆಲಿಸಬೇಕು ಎಂದೂ ಈಶ್ವರ ಖಂಡ್ರೆ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1640 ಜೆಜೆಎಂ ಕಾಮಗಾರಿಗಳು ನಡೆಯುತ್ತಿವೆ . ಇದರಲ್ಲಿ ಶೇ.68ರಷ್ಟು ಕಾಮಗಾರಿ ಮಾತ್ರ ಮುಗಿದಿದೆ. ಉಳಿದ ಕಾಮಗಾರಿ ಪೂರ್ಣಗೊಳಿಸಿ ಮನೆ ಮನೆಗೂ ನೀರು ಹರಿಯುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ ಎಂದೂ ಸೂಚಿಸಿದರು.

ಜೀವನೋಪಾಯ ಅಭಿಯಾನದಡಿ ಜಿಲ್ಲೆಯಲ್ಲಿ ಆಗಿರುವ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌