ಚಿಕ್ಕಬಳ್ಳಾಪುರ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಬಜೆಟ್ ಅನ್ನು ಶುಕ್ರವಾರ ಮಂಡಿಸಿದ್ದು, ಜಿಲ್ಲೆಗೆ ಯಾವುದೇ ಹೊಸ ಯೋಜನೆ ಕೊಡುಗೆ ನೀಡಿಲ್ಲ. ಹಿಂದಿನ ಯೋಜನೆಗಳ ಕಾಮಗಾರಿ ಮುಂದುವರಿಕೆಗೆ ಅನುದಾನ ಘೋಷಿಸಿದ್ದು, ಜಿಲ್ಲೆಯ ಜನತೆ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಈ ಬಜೆಟ್ ನಲ್ಲಿ ಜಿಲ್ಲೆಯ ಜನರು ಅಪಾರವಾದ ನಿರೀಕ್ಷೆಗಳನ್ನು ಹೊಂದಿದ್ದರು. ನಮ್ಮ ತಾಲೂಕಿಗೆ ಯಾವ ಯೋಜನೆಗಳು ದೊರೆಯುತ್ತವೆ ಎನ್ನುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಹಳೆಯ ಘೋಷಣೆಗಳೇ ಅಪೂರ್ಣವಾಗಿದ್ದು, ಕಾಮಗಾರಿ ಮುಂದುವರಿಸಲು ಹಣ ಘೋಷಣೆ ಮಾಡಲಾಗಿದೆ.
ಬಜೆಟ್‌ನಲ್ಲಿ ಶಿಡ್ಲಘಟ್ಟ ಹೈ-ಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ, ಹೈಟೆಕ್ ಹೂವಿನ ಮಾರುಕಟ್ಟೆ, ಎತ್ತಿನಹೊಳೆ ಯೋಜನೆ, ಚಿಂತಾಮಣಿ ತಾಲೂಕಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆ ಪ್ರಸ್ತಾಪಿಸಲಾಗಿದೆ. ಆದರೆ ಇವುಗಳೆಲ್ಲವೂ ಹಳೆಯ ಅಪೂರ್ಣ ಯೋಜನೆಗಳಾಗಿವೆ.
ಹೈ-ಟೆಕ್ ರೇಷ್ಮೆ ಗೂಡು ಮಾರುಕಟ್ಟೆ
ಶಿಡ್ಲಘಟ್ಟ ಹೈ-ಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯ ಮೊದಲನೇ ಹಂತದ ಕಾಮಗಾರಿಗಳು ಮುಕ್ತಾಯಗೊಳ್ಳಲಿದ್ದು, ಪ್ರಸಕ್ತ ಸಾಲಿನಲ್ಲಿ ಎರಡನೇ ಹಂತದ ಕಾಮಗಾರಿಗಳನ್ನು 250 ಕೋಟಿ ರು.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದಿದ್ದಾರೆ. ಆದರೆ ಹಿಂದಿನ ಮೂರು ಬಜೆಟ್‌ಗಳಿಂದ ಕೋಟಿ ಕೋಟಿ ಹಣ ಮೀಸಲಿಡುತ್ತಿದ್ದಾರೆಯೇ ಹೊರತು, ಆ ಹಣ ಖರ್ಚಾಗಿರುವುದು ಎಲ್ಲೂ ಕಂಡು ಬಂದಿಲ್ಲ.
2023ರ ಅಕ್ಟೋಬರ್ ಐದರಂದು ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಮಾರ್ಕೆಟ್ ನಿರ್ಮಿಸಲು ಹನುಮಂತಪುರ ಗ್ರಾಮದ ಬಳಿ ಜಾಗ ಗುರುತಿಸಲಾಗಿತ್ತು. ಆದರೆ ಸ್ಥಳ ಮೀಸಲಿರಿಸಿರುವುದು ಬಿಟ್ಟರೆ ಇದುವರೆಗೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ.
ತೊಗರಿ ಖರೀದಿಗೆ ಪ್ರೋತ್ಸಾಹಧನ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಪ್ರತಿ ಕ್ವಿಂಟಲ್‌ಗೆ 7,550 ರು. ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ ಪ್ರೋತ್ಸಾಹಧನ 450 ರು.ಗಳಂತೆ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ತೊಗರಿ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ಒಂದಾದ ಚಿಕ್ಕಬಳ್ಳಾಪುರ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಬಜೆಟ್‌ನಲ್ಲಿ ಘೋಷಣೆಯಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆಯನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಯೋಜನೆಗೆ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಈಗಾಗಲೇ ನಂದಿ ಕ್ರಾಸ್ ಬಳಿ ತೋಟಗಾರಿಕೆ ಇಲಾಖೆಗೆ ಸೇರಿದ 20 ಎಕರೆ ಜಮೀನು ಗುರ್ತಿಸಲಾಗಿದೆ.
ಕುಂಟುತ್ತಿರುವ ‘ಎತ್ತಿನಹೊಳೆ’
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ನೀರನ್ನು ಹರಿಸಲು ಕಾಲಮಿತಿಯೊಳಗೆ ಕ್ರಮ ಗೊಳ್ಳಲಾಗುವುದು ಎಂದಿದ್ದಾರೆ. ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಂಡು ನೀರು ಹರಿಸಲಾಗುತ್ತದೆ ಎಂದು ಬಜೆಟ್ ನಲ್ಲಿ ತಿಳಿಸಿದ್ದಾರೆ. ಆದರೆ 12 ವರ್ಷಗಳಿಂದ ಈ ಯೋಜನೆ ಕುಂಟುತ್ತಾ ಸಾಗುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜನ್ನು 150 ಕೋಟಿ ರು. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆಯಾಗಿದೆ. ಕಾಲೇಜಿನ ಕಾರ್ಯ ಪ್ರಗತಿಯಲ್ಲಿದೆ.
ಡಾ. ಎಚ್ಚೆನ್ ಪ್ರಾಧಿಕಾರ ಸ್ಥಾಪನೆ
ನೂತನ ತಾಲೂಕು ಚೇಳೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲಾಗುವುದು, ಡಾ.ಎಚ್. ನರಸಿಂಹಯ್ಯ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದು. ಅವರು ವ್ಯಾಸಂಗ ಮಾಡಿದ, ಗೌರಿಬಿದನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.