2021ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದಿದ್ದ ಚುನಾವಣೆಯ ಮರುಮತ ಎಣಿಕೆ ನ್ಯಾಯಾಲಯದ ನಿರ್ದೇಶನದಂತೆ ಶುಕ್ರವಾರ ನಡೆದಿದ್ದು, ಪರಾಜಿತ ಕಾಂಗ್ರೆಸ್ ಅಭ್ಯರ್ಥಿ, ಬಿಜೆಪಿಯ ಪರಿಷತ್ ಸದಸ್ಯ ಎಂ.ಪ್ರಾಣೇಶ್ ಅವರಿಗಿಂತ 9 ಹೆಚ್ಚು ಮತಗಳನ್ನು ಗಳಿಸಿದ್ದಾರೆ ಎನ್ನಲಾಗಿದೆ.
ಆರ್. ತಾರಾನಾಥ್ ಅಟೋಕರ್
ಚಿಕ್ಕಮಗಳೂರು : 2021ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದಿದ್ದ ಚುನಾವಣೆಯ ಮರುಮತ ಎಣಿಕೆ ನ್ಯಾಯಾಲಯದ ನಿರ್ದೇಶನದಂತೆ ಶುಕ್ರವಾರ ನಡೆದಿದ್ದು, ಪರಾಜಿತ ಕಾಂಗ್ರೆಸ್ ಅಭ್ಯರ್ಥಿ, ಬಿಜೆಪಿಯ ಪರಿಷತ್ ಸದಸ್ಯ ಎಂ.ಪ್ರಾಣೇಶ್ ಅವರಿಗಿಂತ 9 ಹೆಚ್ಚು ಮತಗಳನ್ನು ಗಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಚುನಾವಣೆ ವೇಳೆ ಕೇವಲ 6 ಮತಗಳಿಂದ ಗೆದ್ದು, ಪರಿಷತ್ ಸದಸ್ಯರಾಗಿರುವ ಬಿಜೆಪಿಯ ಎಂ.ಕೆ.ಪ್ರಾಣೇಶ್‌ಗೆ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಜಿಲ್ಲಾಡಳಿತ ಮರುಮತ ಎಣಿಕೆಯ ವರದಿಯನ್ನು ಚುನಾವಣಾ ಆಯೋಗದ ಮೂಲಕ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದು, ಮಾ.4ರಂದು ಹೈಕೋರ್ಟ್‌ನಿಂದ ಯಾವ ತೀರ್ಪು ಬರಲಿದೆ ಎಂಬುದು ಕುತೂಹಲದ ಸಂಗತಿಯಾಗಿದೆ. ಹಾಲಿ ಪರಿಷತ್ತು ಸದಸ್ಯ ಪ್ರಾಣೇಶ್ ಅವರಿಗೆ ಟೆನ್ಷನ್ ಶುರುವಾಗಿದ್ದರೆ, ಕಾಂಗ್ರೆಸ್‌ನ ಗಾಯತ್ರಿ ಶಾಂತೇಗೌಡ ಅವರು ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ.
ಪ್ರಕರಣವೇನು?:
2021ರ ಡಿ.10ರಂದು ನಡೆದ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್, ಕಾಂಗ್ರೆಸ್ ನ ಗಾಯತ್ರಿ ಶಾಂತೇಗೌಡ, ಪಕ್ಷೇತರ ಅಭ್ಯರ್ಥಿ ಡಾ.ಸುಂದರೇಗೌಡ, ಬಿ.ಟಿ.ಚಂದ್ರಶೇಖರ್ ಹಾಗೂ ಜಿ.ಐ.ರೇಣುಕುಮಾರ್ ಸ್ಪರ್ಧೆ ಮಾಡಿದ್ದರು.
ಅಂದು 2,410 ಮತಗಳು ಚಲಾವಣೆಯಾಗಿದ್ದು, ಈ ಪೈಕಿ 39 ಮತಗಳು ತಿರಸ್ಕೃತಗೊಂಡಿದ್ದವು. ಪ್ರಾಣೇಶ್ ಅವರು 1,188, ಗಾಯತ್ರಿ ಶಾಂತೇಗೌಡ 1,182, ಡಾ.ಸುಂದರೇಗೌಡ 1 ಮತಗಳನ್ನು ಪಡೆದಿದ್ದರು. ಗಾಯತ್ರಿ ಶಾಂತೇಗೌಡ 6 ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ನಾಮನಿರ್ದೇಶನ ಸದಸ್ಯರಿಗೆ ಮತದಾನ ಮಾಡಲು ಅವಕಾಶ ಇಲ್ಲ. ಹಾಗಿದ್ದರೂ ಜಿಲ್ಲಾ ಚುನಾವಣಾಧಿಕಾರಿ 12 ಮಂದಿ ನಾಮ ನಿರ್ದೇಶಕರಿಗೆ ಮತದಾನಕ್ಕೆ ಅವಕಾಶ ನೀಡಿದ್ದಾರೆ. ಅವರನ್ನು ಕೈ ಬಿಟ್ಟು ಮರುಮತ ಎಣಿಕೆ ಮಾಡಬೇಕೆಂದು ಗಾಯತ್ರಿ ಶಾಂತೇಗೌಡ ಹೈಕೋರ್ಟ್ ಮೊರೆ ಹೋಗಿದ್ದರು. ನಾಮ ನಿರ್ದೇಶನದ ಸದಸ್ಯರಿಗೂ ಮತದಾನದ ಹಕ್ಕಿದೆ ಎಂದು ವಾದಿಸಿ ಎಂ.ಕೆ.ಪ್ರಾಣೇಶ್ ಅವರು ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದರು. ಸುಪ್ರೀಂಕೋರ್ಟ್ ಜನವರಿ 24ರಂದು ಹೈಕೋರ್ಟ್‌ಗೆ ಮರುಮತ ಎಣಿಕೆ ನಡೆಸಿ, ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶದ ಮಾಹಿತಿಯನ್ನು ಪಡೆಯುವಂತೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಕಳೆದ ಜ.29ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಾಮ ನಿರ್ದೇಶನದ ಸದಸ್ಯರನ್ನು ಕೈ ಬಿಟ್ಟು ಉಳಿದ ಮತಗಳನ್ನು ಮರುಎಣಿಕೆ ಮಾಡುವಂತೆ ಸೂಚನೆ ನೀಡಿತ್ತು.
ಗಾಯತ್ರಿಗೆ 9 ಮತಗಳು ಲೀಡ್?:
ಗಾಯತ್ರಿ ಶಾಂತೇಗೌಡ 6 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆದರೆ, ಶುಕ್ರವಾರ ನಡೆದ ಮರುಮತ ಎಣಿಕೆಯಲ್ಲಿ ಪ್ರಾಣೇಶ್ ಅವರಿಗಿಂತ 9 ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಮರುಮತ ಎಣಿಕೆ ಸಂದರ್ಭದಲ್ಲಿ 12 ನಾಮ ನಿರ್ದೇಶನ ಸದಸ್ಯರ ಮತಗಳನ್ನು ಕೈ ಬಿಡಲಾಗಿದೆ. ಈ ಪ್ರಕ್ರಿಯೆಯನ್ನು ನ್ಯಾಯಾಲಯ ಒಪ್ಪಿಕೊಂಡರೆ ಕೇಂದ್ರ ಚುನಾವಣಾ ಆಯೋಗ ಗಾಯತ್ರಿ ಶಾಂತೇಗೌಡ ಅವರ ಗೆಲುವು ಪ್ರಕಟಿಸಲಿದೆ. ನಂತರ ಪ್ರಾಣೇಶ್ ಅವರು ಮತ್ತೆ ಕಾನೂನು ಹೋರಾಟಕ್ಕೆ ಇಳಿಯುತ್ತಾರಾ ಎಂಬುದು ಸದ್ಯ ಜನರ ಮುಂದಿರುವ ಕುತೂಹಲದ ಪ್ರಶ್ನೆ.
ಯಾರು ಹೊಣೆಗಾರರು?:
ಚುನಾವಣೆಗೂ ಮುನ್ನ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿ ಚುನಾವಣಾ ಆಯೋಗದಿಂದ ಅನುಮತಿ ಪಡೆದು ಚುನಾವಣೆ ನಡೆಸಲಾಗುತ್ತದೆ. 2021ರಲ್ಲಿ ನಡೆದ ಪರಿಷತ್ ಚುನಾವಣೆ ಸಂದರ್ಭದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಜತೆಗೆ ನಾಮನಿರ್ದೇಶನದ ಸದಸ್ಯರ ಪಟ್ಟಿಗೂ ಜಿಲ್ಲಾ ಚುನಾವಣಾಧಿಕಾರಿಗಳು ಕೇಂದ್ರ ಚುನಾವಣಾ ಆಯೋಗದಿಂದ ಅನುಮತಿ ಪಡೆದುಕೊಂಡಿದ್ದರಾ?. ಅನುಮತಿ ಪಡೆಯದೇ ಚುನಾವಣೆ ನಡೆಸಲು ಸಾಧ್ಯವಿಲ್ಲ. ಹಾಗಾದರೆ, ನಾಮ ನಿರ್ದೇಶನ ಸದಸ್ಯರು ಮತದಾನ ಮಾಡಬೇಕೋ?, ಬೇಡವೇ? ಎಂಬ ಬಗ್ಗೆ ಆಯೋಗಕ್ಕೆ ಮಾಹಿತಿ ಇರಲಿಲ್ಲವಾ? ಎಂಬ ಪ್ರಶ್ನೆಗಳು ಕಾಡುತ್ತಿವೆ.