ಜಿಲ್ಲಾಡಳಿತ ಸ್ಪಷ್ಟನೆ । ಬಂದ್ ಮಾಡಲು ಮುಂದಾದ್ರೆ ಕಠಿಣ ಕ್ರಮ । ವಿಎಚ್‌ಪಿ, ಬಜರಂಗದಳ ಮುಖಂಡರಿಗೆ ನೋಟಿಸ್
ಮಂಗಳೂರು ಘಟನೆಯನ್ನು ಖಂಡಿಸಿ ಕೆಲ ಸಂಘಟನೆಗಳು ಸೋಮವಾರ ಚಿಕ್ಕಮಗಳೂರು ಜಿಲ್ಲಾ ಬಂದ್ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿವೆ. ಆದರೆ ಈ ಬಂದ್‌ಗೆ ಜಿಲ್ಲಾಡಳಿತವಾಗಲಿ ಅಥವಾ ಪೊಲೀಸ್ ಇಲಾಖೆಯಾಗಲಿ ಅನುಮತಿ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾರೇ ಬಂದ್ ಮಾಡುವುದಾದರೂ ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಗೆ ಮನವಿ ನೀಡಿ ಅನುಮತಿ ಪಡೆಯಬೇಕಿತ್ತು. ಆದರೆ, ಸೋಮವಾರ ಬಂದ್‌ಗೆ ಸಂಬಂಧಿಸಿದಂತೆ ಯಾರೂ ಕೂಡ ಅನುಮತಿ ಪಡೆದಿಲ್ಲ ಎಂದರು.ಸೋಮವಾರ ಜಿಲ್ಲೆಯ ಹಲವೆಡೆ ಸಂತೆ ನಡೆಯುತ್ತದೆ. ಜೊತೆಗೆ ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆಯನ್ನು 648 ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ. ಜನರು, ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಹಿನ್ನೆಲೆ ಬಂದ್‌ಗೆ ಯಾವುದೇ ಅನುಮತಿ ನೀಡುವುದಿಲ್ಲ ಎಂದು ಹೇಳಿದರು.
ಜಿಲ್ಲಾ ರಕ್ಷಣಾಧಿಕಾರಿ ಡಾ.ವಿಕ್ರಂ ಅಮಟೆ, ಪಹಲ್ಗಾಮ್, ಮಂಗಳೂರಿನಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿ ಜಿಲ್ಲೆಯಲ್ಲಿ ಹಲವಾರು ಪ್ರತಿಭಟನೆಗಳು ನಡೆದಿವೆ. ಮಂಗಳೂರಿನ ಪ್ರಕರಣದಲ್ಲಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಈ ಎಲ್ಲಾ ಸೂಕ್ಷ್ಮಗಳನ್ನು ಜಿಲ್ಲಾ ಬಂದ್ ಗೆ ಕರೆ ನೀಡಿದ ಸಂಘಟನೆಗಳ ಪ್ರಮುಖರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕರಿಗೆ ಗೊಂದಲ ಬೇಡ
ಸೋಮವಾರ ಜಿಲ್ಲೆಯಲ್ಲಿ ಎಂಟು ಕಡೆ ಸಂತೆಗಳು ಎಂದಿನಂತೆಯೇ ನಡೆಯುತ್ತವೆ. ಬಸ್ ಹಾಗೂ ವಾಹನ ಸಂಚಾರವೂ ಎಂದಿನಂತೆಯೇ ಇರುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆಯು ಗೊಂದಲವಿಲ್ಲದೆ ನಡೆಯುತ್ತದೆ ಎಂದು ಮಾಹಿತಿ ನೀಡಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲೆಯ 16 ಕಡೆ ಚೆಕ್ ಪೋಸ್ಟ್ ಆರಂಭಿಸಿ, ಎಲ್ಲೆಡೆಯು ಶಸ್ತ್ರ ಸಜ್ಜಿತ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಎಸ್‌ಪಿ ವಿಕ್ರಂ ಅಮಟೆ ತಿಳಿಸಿದರು.
ಮಂಗಳೂರು ಪೊಲೀಸರಿಂದ ಬಂಧನ ಕೊಳಗಾಗಿರುವ ಇಬ್ಬರು ಆರೋಪಿಗಳ ಮೇಲೆ ಕಳಸ ವ್ಯಾಪ್ತಿಯಲ್ಲಿ ಯಾವುದೇ ಪ್ರಕರಣಗಳು ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಲಾಗುವುದು ಎಂದರು.
ರಂಗನಾಥ್, ಜಿಲ್ಲಾ ಕಾರ್ಯದರ್ಶಿ, ವಿಎಚ್‌ಪಿ