ಸಮೀಕ್ಷೆ ವೇಳೆ ಗಣತಿದಾರರಿಗೆ ನಿಖರ ಮಾಹಿತಿ ನೀಡಲು ಡೀಸಿ ಕರೆ

KannadaprabhaNewsNetwork |  
Published : May 05, 2025, 12:49 AM IST

ಸಾರಾಂಶ

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯು ಮೇ ೫ರಿಂದ ೧೭ರವರೆಗೆ ಜಿಲ್ಲೆಯಲ್ಲಿ ನಡೆಯಲಿದೆ. ಯಾವುದೇ ಗೊಂದಲವಿಲ್ಲದಂತೆ ಗಣತಿದಾರರಿಗೆ ನಿಖರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರುಕರೆ ನೀಡಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ಸಮೀಕ್ಷೆಯಿಂದ ತಪ್ಪಿಹೋಗದಂತೆ ನಿಗಾವಹಿಸಲು ಸೂಚಿಸಿದರು. ಪ್ರತಿ ತಾಲೂಕಿಗೂ ನೇಮಿಸಿರುವ ನೋಡಲ್ ಅಧಿಕಾರಿಗಳು ಸಮೀಕ್ಷೆ ಕಾರ್ಯವನ್ನು ಜವಾಬ್ದಾರಿ ವಹಿಸಿ ಯಶಸ್ವಿಗೊಳಿಸುವಂತೆ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯು ಮೇ ೫ರಿಂದ ೧೭ರವರೆಗೆ ಜಿಲ್ಲೆಯಲ್ಲಿ ನಡೆಯಲಿದೆ. ಯಾವುದೇ ಗೊಂದಲವಿಲ್ಲದಂತೆ ಗಣತಿದಾರರಿಗೆ ನಿಖರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಕರೆ ನೀಡಿದ್ದಾರೆ.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸಮೀಕ್ಷೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗಣತಿದಾರರು ಬೆಳಗ್ಗೆ ೬.೩೦ರಿಂದ ಸಂಜೆ ೬ ಗಂಟೆಯವರೆಗೆ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಈ ಗಣತಿಕಾರ್ಯ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಯಾರ ಒತ್ತಡಕ್ಕೂ ಒಳಗಾಗದೆ ನಿಸ್ಸಂಕೋಚವಾಗಿ ಜಾತಿ ಯಾವುದು ಎಂಬ ನಿಖರ ಮಾಹಿತಿಯನ್ನು ಗಣತಿದಾರರಿಗೆ ನೀಡುವಂತೆ ತಿಳಿಸಿದರು.

ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇರುವ ಜಾತಿಗಳನ್ನು ಉಪ ವರ್ಗೀಕರಣ ಮಾಡಿ ಒಳಮೀಸಲಾತಿಯನ್ನು ಜಾರಿ ಮಾಡಲು ಸರ್ಕಾರವು ಗೌರವಾನ್ವಿತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ವ್ಯಕ್ತಿ ವಿಚಾರಣಾ ಆಯೋಗವನ್ನು ನೇಮಿಸಿ ಒಳಮೀಸಲಾತಿಯನ್ನು ವರ್ಗೀಕರಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಉಪ ವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶಗಳನ್ನು ಸಂಗ್ರಹಿಸಲು ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ ಎಂದ ಅವರು, ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ಸಮೀಕ್ಷೆಯಿಂದ ತಪ್ಪಿಹೋಗದಂತೆ ನಿಗಾವಹಿಸಲು ಸೂಚಿಸಿದರು. ಪ್ರತಿ ತಾಲೂಕಿಗೂ ನೇಮಿಸಿರುವ ನೋಡಲ್ ಅಧಿಕಾರಿಗಳು ಸಮೀಕ್ಷೆ ಕಾರ್ಯವನ್ನು ಜವಾಬ್ದಾರಿ ವಹಿಸಿ ಯಶಸ್ವಿಗೊಳಿಸುವಂತೆ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಅವರು ಮಾತನಾಡಿ, ಸದರಿ ಸಮೀಕ್ಷೆಗೆ ಸಂಪೂರ್ಣ ಸಹಕಾರ ನೀಡುವಂತೆ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾದ ವೆಂಕಟೇಶ್‌ ಅವರು ಸಮೀಕ್ಷೆ ಕುರಿತು ಮಾತನಾಡಿ, ರಾಜ್ಯದ ಪ್ರತಿಯೊಂದು ಪರಿಶಿಷ್ಟ ಜಾತಿ ಕುಟುಂಬದ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ, ಒಳ ಮೀಸಲಾತಿ ವರ್ಗೀಕರಣ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡುವ ಜವಾಬ್ದಾರಿಯನ್ನು ಆಯೋಗವು ಹೊಂದಿರುತ್ತದೆ. ಸರ್ಕಾರವು ಈ ಉದ್ದೇಶಕ್ಕಾಗಿ ಪರಿಶಿಷ್ಟ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕೈಗೊಳ್ಳಲಾಗುತ್ತಿದೆ. ರಾಜ್ಯದ ಎಲ್ಲ ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಿಸುವುದಾಗಿರುತ್ತದೆ.ಸಮೀಕ್ಷೆಯಲ್ಲಿ ಅನುಸರಿಸಿದ ವಿವಿಧ ಮಾನದಂಡಗಳ ಆಧಾರದ ಮೇಲೆ ಸಂಗ್ರಹಿಸಿದ ಅಂಕಿ-ಅಂಶಗಳ ಹಿನ್ನೆಲೆಯಲ್ಲಿ ಒಳ ಮೀಸಲಾತಿಯ ವರ್ಗೀಕರಣ ಮಾಡುವುದು. ಸಮೀಕ್ಷೆದಾರರು ಸರಿಯಾದ ಕೋಡ್ ಸಂಖ್ಯೆಗಳನ್ನು ಬಳಸಿ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ಪರಿಶಿಷ್ಟ ಜಾತಿಯ ಅಧಿಕೃತ ಪಟ್ಟಿಯಲ್ಲಿರುವ ಜಾತಿಗಳ ಮಾಹಿತಿ ಆಯೋಗದ ಸಮೀಕ್ಷಾ ಉದ್ದೇಶಕ್ಕೆ ಅತಿಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ವಿವಿಧ ಜನಾಂಗೀಯ ಅಧ್ಯಯನ ವರದಿ, ವಿವಿಧ ಆಯೋಗಗಳ ವರದಿ, ಸರ್ಕಾರದ ಹಿಂದಿನ ಮೀಸಲಾತಿ ಪಟ್ಟಿ ಮತ್ತು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಬಂದ ಮನವಿಗಳಲ್ಲಿ ಜಾತಿವಾರು ಜನಸಂಖ್ಯೆ ನಿರ್ದಿಷ್ಟವಾಗಿ ದೊರೆಯದೆ ಇರುವುದರಿಂದ ಈ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ೧೦೧ ಜಾತಿಗಳ ನಿರ್ದಿಷ್ಟ ಜನಸಂಖ್ಯೆ ಸಂಗ್ರಹಿಸುವುದು ಮುಖ್ಯ ಉದ್ದೇಶವಾಗಿದೆ.

ಮೇ ೧೯ರಿಂದ ೨೧ರವರೆಗೆ ಸಮೀಕ್ಷೆ ಬ್ಲಾಕ್ ಗಳಲ್ಲಿ ವಿಶೇಷ ಶಿಬಿರಗಳನ್ನ ಕೈಗೊಂಡು ಮನೆ ಮನೆ ಭೇಟಿ ಅವಧಿಯಲ್ಲಿ ಬಿಟ್ಟು ಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಸಮುದಾಯದ ಮುಖಂಡರಾದ ಕಲಿವೀರ್, ಈರಪ್ಪ, ಶಂಕರ್‌ರಾಜ್, ಕೃ?ದಾಸ್ ಹಾಗೂ ಸಮುದಾಯದ ಪ್ರತಿನಿಧಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ