;Resize=(412,232))
ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಆಪರೇಷನ್ ಗಜ ಕಾರ್ಯಾಚರಣೆ ನಡುವೆಯೇ ಬೇಲೂರು ಕಡೆಯಿಂದ ಬಂದಿರುವ 39 ಕಾಡಾನೆಗಳ ಹಿಂಡು 4 ಗುಂಪುಗಳಾಗಿ ಚದುರಿ ವಿವಿಧ ಗ್ರಾಮಗಳ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ.
ಕಾಡಾನೆಗಳ ನಿರಂತರ ಸಂಚಾರದಿಂದ ಗ್ರಾಮಸ್ಥರು ಹಾಗೂ ಕಾಫಿ ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿದೆ. 4 ದಿನಗಳಿಂದ ನಿರ್ದಿಷ್ಟ ಸ್ಥಳದಲ್ಲಿ ನೆಲೆ ನಿಲ್ಲದೆ ಸಂಚರಿಸುತ್ತಿರುವ ಬೀಟಮ್ಮ, ಭುವನೇಶ್ವರಿ ಹಾಗೂ ಓಲ್ಡ್ ಬೆಲ್ಟ್ ಗುಂಪಿನ ಕಾಡಾನೆಗಳು ಬುಧವಾರ ರಾತ್ರಿ 4 ಗುಂಪುಗಳಾಗಿ ವಿಭಜನೆಯಾಗಿವೆ.
ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ, ಕಾರ್ಬೈಲು, ಕಸ್ಕೆಬೈಲು ಹಾಗೂ ಕಲ್ಲುಗುಡ್ಡ ಗ್ರಾಮಗಳ ಸುತ್ತಮುತ್ತ ಆನೆಗಳು ಬೀಡುಬಿಟ್ಟಿವೆ. ಮಾಕೋನಹಳ್ಳಿ ಗ್ರಾಮದ ಬಳಿ ಮೊದಲ ಗುಂಪು, ಕಾರ್ಬೈಲು ಬಳಿ ಎರಡನೇ ಗುಂಪು, ಕಸ್ಕೆಬೈಲಿನಲ್ಲಿ ಮೂರನೇ ಗುಂಪು ಹಾಗೂ ಕಲ್ಲುಗುಡ್ಡದಲ್ಲಿ ನಾಲ್ಕನೇ ಗುಂಪು ಸಂಚರಿಸುತ್ತಿವೆ. ಮರಿಯಾನೆಗಳೂ ಹಿಂಡಿನಲ್ಲಿದ್ದು, ಕಾಫಿ ತೋಟಗಳ ನಡುವೆ ಸಂಚರಿಸುತ್ತಿವೆ.
ಕಾರ್ಬೈಲಿನಲ್ಲಿ ಬುಧವಾರ ರಾತ್ರಿ ಸುಮಾರು 8 ಗಂಟೆಗೆ 20ಕ್ಕೂ ಅಧಿಕ ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ನುಗ್ಗಿ ಕಾಫಿ, ಅಡಕೆ, ತೆಂಗು ಸೇರಿ ವಿವಿಧ ಬೆಳೆಗಳನ್ನು ನಾಶಪಡಿಸಿವೆ.
ಕಾಡಾನೆಗಳನ್ನು ಸ್ಥಳಾಂತರಿಸುವ ಕುರಿತು ನ.30ರಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಅಧಿಕಾರಿಗಳು ಹಾಗೂ ಶಾಸಕರು ತಿಳಿಸಿದ್ದಾರೆ. ಆದರೆ, ಅಷ್ಟರವರೆಗೆ ಕಾಯಲು ಸಾಧ್ಯವಿಲ್ಲ. ತಕ್ಷಣವೇ ಆನೆಗಳನ್ನು ಸ್ಥಳಾಂತರಿಸಬೇಕು ಹಾಗೂ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.