ಕನ್ನಡಪ್ರಭ ವಾರ್ತೆ ಪಾಂಡವಪುರ
ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ತಾಲೂಕು ಚಿಕ್ಕಮರಳಿ ಗ್ರಾಮಸ್ಥರು ಮಂಡ್ಯ - ಪಾಂಡವಪುರ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.ಮಂಡ್ಯ- ಪಾಂಡವಪುರ ಮುಖ್ಯರಸ್ತೆಯ ಮಡಿಕೆಪಟ್ಟಣ ಗೇಟ್ ಬಳಿ ಸೇರಿದ ಗ್ರಾಮಸ್ಥರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಿಂದಾಗಿ ಅರ್ಧಗಂಟೆಗೂ ಹೆಚ್ಚುಕಾಲ ಮಂಡ್ಯ- ಪಾಂಡವಪುರ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.ಮಂಡ್ಯ- ಪಾಂಡವಪುರ ಮುಖ್ಯರಸ್ತೆ ಹಾಗೂ ಮಡಿಕೆಪಟ್ಟಣ ಗೇಟ್‌ನಿಂದ ಚಿಕ್ಕಮರಳಿ, ನುಗ್ಗಹಳ್ಳಿವರೆಗೆ ಗುಂಡಿಬಿದ್ದ ಅಧ್ವಾನಗೊಂಡಿದೆ. ಹಲವು ವರ್ಷಗಳಿಂದಲೂ ರಸ್ತೆ ಗುಂಡಿಬಿದ್ದು ಇರುವ ಕಾರಣ ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ ಎಂದು ದೂರಿದರು.
ಈಗಾಗಲೇ ಹಲವು ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಆದರೂ ಸಂಬಂಧಪಟ್ಟ ಲೋಕೋಪಯೋಗಿ ಅಧಿಕಾರಿಗಳು, ಶಾಸಕರು ಗುಂಡಿ ಮುಚ್ಚಿಸದೆ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಅಧಿಕಾರಿಗಳು ಗುಂಡಿ ಬಿದ್ದಿರುವ ರಸ್ತೆಯನ್ನು ಬಿಟ್ಟು ಉತ್ತಮವಾಗಿ ರಸ್ತೆಗೆ ಡಾಂಬರೀಕರಣ ಮಾಡಿದ್ದಾರೆ ಎಂದು ದೂರಿದರು.ಮಡಿಕೆಪಟ್ಟಣದ ಗೇಟ್ ಬಳಿಯಿಂದ ಚಿಕ್ಕಮರಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯೂ ಸಹ ಸಂಪೂರ್ಣ ಅಧ್ವಾನಗೊಂಡಿದೆ. ರಸ್ತೆ ತುಂಬೆಲ್ಲ ಬರೀ ಗುಂಡಿಗಳೇ ಬಿದ್ದಿರುವುದರಿಂದ ರಸ್ತೆಯಲ್ಲಿ ಓಡಾಡುವ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಜತಗೆ ರಸ್ತೆಯೂ ಸಹ ಸುತ್ತಮುತ್ತ ಒತ್ತುವರಿಯಾಗಿದೆ. ಕೆಲವರು ರಸ್ತೆಗೆ ಸೀಮೆಕಡ್ಡಿ ನೆಟ್ಟಿದ್ದಾರೆ. ಇದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸಹ ಸಂಬಂಧಿಸಿದ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.ಸ್ಥಳಕ್ಕೆ ಧಾವಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನು ಹೋರಾಟಗಾರರು ತರಾಟೆಗೆ ತೆಗೆದುಕೊಂಡರು. ಬಳಿಕ ಅಧಿಕಾರಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಗುಂಡಿರಸ್ತೆಯನ್ನು ದರ್ಶನ ಮಾಡಿಸಿದರು. ಅಧಿಕಾರಿಗೆ ಮನವಿ ಪತ್ರ ನೀಡಿದರು.ಮನವಿ ಸ್ವೀಕರಿಸಿದ ಲೋಕೋಪಯೋಗಿ ಎಇಇ ಜೈಕುಮಾರ್ ಮಾತನಾಡಿ, ಮಂಡ್ಯ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚಿಸಲು ಅನುದಾನ ಬಿಡುಗಡೆಯಾಗಿದೆ. ಗುಂಡಿ ಜಾಗದಲ್ಲಿ ಡಾಂಬರೀಕರಣ ಮಾಡಲಾಗುವುದು. ಇನ್ನೂ ಚಿಕ್ಕಮರಳಿ ಗ್ರಾಮದ ರಸ್ತೆ ಅಭಿವೃದ್ಧಿಗೂ ಅನುದಾನಕ್ಕೆ ಸರಕಾರಕ್ಕೆ ಕಳುಹಿಸಲಾಹಿಸಲಾಗಿದೆ, ಅನುದಾನ ಬಿಡುಗಡೆಯಾದ ಬಳಿಕ ರಸ್ತೆ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಟ್ಟರು.
ಪ್ರತಿಭಟನೆಯಲ್ಲಿ ಮುಖಂಡರಾದ ತಾಪಂ ಮಾಜಿ ಸದಸ್ಯೆ ಮಂಗಳನವೀನ್ ಕುಮಾರ್, ಗ್ರಾಪಂ ಉಪಾಧ್ಯಕ್ಷ ಈರಾಚಾರಿ, ಸುರೇಂದ್ರ, ವಿಶ್ವನಾಥ್, ಪ್ರವೀಣ್, ಸತೀಶ್, ಪಾಂಡಿದೊರೆ, ನವೀನ್ ಕುಮಾರ್, ಚನ್ನಮಾದೇಗೌಡ, ಉಮೇಶ್, ಚೇತನ್, ರಾಜೇಶ್, ಮಧುಸೂದನ್, ಕಂಚಯ್ಯರ ಕುಮಾರ್, ಕಾಂತರಾಜು, ಕುಮಾರ್, ಅರುಣ ಸೇರಿದಂತೆ ಹಲವಾರು ಯುವಕರು, ಮುಖಂಡರು ಭಾಗವಹಿಸಿದ್ದರು.------------- 9ಕೆಎಂಎನ್ ಡಿ12
ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗೇಟ್ ಬಳಿ ಮಂಡ್ಯ ರಸ್ತೆ ಹಾಗೂ ಚಿಕ್ಕಮರಳಿ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಚಿಕ್ಕಮರಳಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.