ಚಿಕ್ಲಿಹೊಳೆ ಜಲಾಶಯದ ನೀರು ಬಹುತೇಕ ಖಾಲಿ!

KannadaprabhaNewsNetwork |  
Published : Nov 18, 2023, 01:00 AM IST
ಚಿತ್ರ : 17ಎಂಡಿಕೆ10 : ಚಿಕ್ಲಿಹೊಳೆ ಜಲಾಶಯದಿಂದ ನಾಲೆಗೆ ಹರಿದು ಹೋಗುವ ಜಾಕ್ ವೆಲ್ ನಲ್ಲಿ ನೀರಿನ ಮಟ್ಟ ಕುಸಿತವಾಗಿರುವುದು. | Kannada Prabha

ಸಾರಾಂಶ

ಸುಂಟಿಕೊಪ್ಪ ಸಮೀಪದ ಚಿಕ್ಲಿಹೊಳೆ ಜಲಾಶಯವು 0.18 ಟಿಎಂಸಿ ನೀರಿನ ಸಾಮರ್ಥ್ಯವನ್ನು ಹೊಂದಿದೆ. ಮಳೆ ಇಲ್ಲದ ಪರಿಣಾಮ ಈ ಭಾಗದ ರೈತರ ಕೃಷಿ ಚಟುವಟಿಕೆಗೆ ನಿರಂತರವಾಗಿ ನೀರು ಹರಿಸಿದ ಪರಿಣಾಮ ಪ್ರಸ್ತುತ ಜಲಾಶಯದಲ್ಲಿ 0.035ರಷ್ಟು ಮಾತ್ರ ನೀರಿದೆ. ಅಂದರೆ ಅರ್ಧಕ್ಕಿಂತಲೂ ಕಡಿಮೆ ನೀರಿದ್ದು, ಆತಂಕಕ್ಕೆ ಕಾರಣವಾಗಿದೆ.

ವಿಘ್ನೇಶ್ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿ

ಚಿಕ್ಲಿಹೊಳೆ ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದ್ದು, ಬೇಸಗೆ ಅವಧಿಯಲ್ಲಿ ಜಲಾಶಯದ ಸಂಪೂರ್ಣ ನೀರು ಬತ್ತುವ ಆತಂಕ ಉಂಟಾಗಿದೆ. ನೀರು ಬಹುತೇಕ ಕಡಿಮೆಯಾಗಿರುವ ಪರಿಣಾಮ ಮುಳುಗಡೆಯಾಗಿದ್ದ ಪುರಾತನ ಶಿವನ ದೇವಾಲಯ ದರ್ಶನವಾಗಿದೆ.

ಕೊಡಗು ಜಿಲ್ಲೆಯಲ್ಲಿ ಈ ಬಾರಿ ತೀವ್ರ ಮಳೆ ಕೊರತೆಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಐದೂ ತಾಲೂಕನ್ನು ಕೂಡ ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ.

ಸುಂಟಿಕೊಪ್ಪ ಸಮೀಪದ ಚಿಕ್ಲಿಹೊಳೆ ಜಲಾಶಯವು 0.18 ಟಿಎಂಸಿ ನೀರಿನ ಸಾಮರ್ಥ್ಯವನ್ನು ಹೊಂದಿದೆ. ಮಳೆ ಇಲ್ಲದ ಪರಿಣಾಮ ಈ ಭಾಗದ ರೈತರ ಕೃಷಿ ಚಟುವಟಿಕೆಗೆ ನಿರಂತರವಾಗಿ ನೀರು ಹರಿಸಿದ ಪರಿಣಾಮ ಪ್ರಸ್ತುತ ಜಲಾಶಯದಲ್ಲಿ 0.035ರಷ್ಟು ಮಾತ್ರ ನೀರಿದೆ. ಅಂದರೆ ಅರ್ಧಕ್ಕಿಂತಲೂ ಕಡಿಮೆ ನೀರಿದ್ದು, ಆತಂಕಕ್ಕೆ ಕಾರಣವಾಗಿದೆ.

ಈ ಬಾರಿ ಮುಂಗಾರು ಕೈಕೊಟ್ಟಿದೆ. ಇದರಿಂದ ಜಲಾಶಯಯದಲ್ಲಿ ನೀರಿನ ಪ್ರಮಾಣ ಕುಸಿತವಾಗಿದೆ. ನಂಜರಾಯಪಟ್ಟಣ, ಗುಡ್ಡೆಹೊಸೂರು, ರಂಗಸಮುದ್ರ, ಹೊಸಪಟ್ಟಣ, ದೊಡ್ಡ ಬೆಟ್ಟಗೇರಿ, ಬಸವನಹಳ್ಳಿ, ಬೊಳ್ಳೂರು ಸೇರಿದಂತೆ ಕೆಲವು ಭಾಗದ ರೈತರ ಭತ್ತದ ಕೃಷಿಗೆ ಚಿಕ್ಲಿಹೊಳೆ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಪ್ರತಿ ದಿನ 25ರಿಂದ 30 ಕ್ಯುಸೆಕ್ ನೀರು ಹರಿಸಲಾಗುತ್ತದೆ. ಮಳೆ ಇದ್ದರೆ ಚಿಕ್ಲಿಹೊಳೆ ಜಲಾಶಯ ಈಗಲೂ ತುಂಬಿರುತ್ತಿತ್ತು. ನೀರು ಇಳಿಮುಖವಾಗಲು ಮಳೆಯ ಕೊರತೆ ಪ್ರಮುಖ ಕಾರಣವಾಗಿದ್ದು, ಜಲಾಶಯದ ತಳ ಕಾಣುತ್ತಿದೆ.

ಇದೀಗ ಜಲಾಶಯದಲ್ಲಿ ನೀರು ಖಾಲಿಯಾಗುತ್ತಿರುವ ಪರಿಣಾಮ ಜಲಾಶಯದೊಳಗಿದ್ದ ಪುರಾತನ ಶಿವನ ದೇಗುಲ ಕಾಣುತ್ತಿದೆ. ಇದರಿಂದ ಸ್ಥಳೀಯರು ಹಾಗೂ ಪ್ರವಾಸಿಗರು ಹಳೆಯ ದೇಗುಲವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

2017ರಲ್ಲಿ ಏಪ್ರಿಲ್‌ನಲ್ಲಿ ಚಿಕ್ಲಿಹೊಳೆ ಜಲಾಶಯ ಸಂಪೂರ್ಣ ಬತ್ತಿ ಹೋಗಿತ್ತು. ಆ ಸಂದರ್ಭ ಪುರಾತನ ದೇವಾಲಯವೂ ಕಾಣುತ್ತಿತ್ತು. ನಂತರ ಜಲಾಶಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೀರು ಇಳಿಮುಖವಾಗಿರಲಿಲ್ಲ. ಆದರೆ ಇದೀಗ ನವೆಂಬರ್‌ನಲ್ಲೇ ನೀರು ಖಾಲಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಇನ್ನು ಬೇಸಗೆ ವರೆಗೆ ಮಳೆಯಾಗದಿದ್ದಲ್ಲಿ ಈ ಭಾಗದ ರೈತರಿಗೆ ನೀರಿನ ಸಮಸ್ಯೆ ಉಂಟಾಗಲಿದೆ. ಅಲ್ಲದೆ ಜಾನುವಾರು ಹಾಗೂ ಜಲಚರಗಳಿಗೂ ಆಪತ್ತು ಎದುರಾಗಲಿದೆ.

ಚಿಕ್ಲಿಹೊಳೆ ಜಲಾಶಯವನ್ನು 1983ರ ಅವಧಿಯಲ್ಲಿ ನಿರ್ಮಿಸಲಾಯಿತು. ಇದೇ ಸ್ಥಳದಲ್ಲಿ ಪುರಾತನ ಶಿವನ ದೇವಾಲಯವಿತ್ತು. 1993ರಲ್ಲಿ ದೇವರ ಮೂಲ ವಿಗ್ರಹವನ್ನು ಮಾಗ್‌ಡೂರ್ ಕುಟುಂಬದವರು ಸ್ಥಳಾಂತರ ಮಾಡಿದರು. ಈಗಲೂ ಜಲಾಶಯದ ಸಮೀಪದಲ್ಲೇ ಮಾಗ್‌ಡೂರ್ ಶ್ರೀ ವಿಶ್ವನಾಥ ದೇವಾಲಯವಿದೆ.ಈ ಬಾರಿ ತೀರಾ ಮಳೆ ಕೊರತೆಯಿಂದಾಗಿ ಚಿಕ್ಲಿಹೊಳೆ ಜಲಾಶಯದಲ್ಲಿ ನೀರು ಇಳಿಮುಖವಾಗಲು ಕಾರಣವಾಗಿದೆ. ಪ್ರತಿ ದಿನ ಚಿಕ್ಲಿಹೊಳೆ ಜಲಾಶಯದಿಂದ 25ರಿಂದ 35 ಕ್ಯುಸೆಕ್ ನೀರನ್ನು ರೈತರಿಗೆ ಹರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೀರು ಖಾಲಿಯಾಗುತ್ತಿದೆ. 0.18 ಟಿಎಂಸಿ ಸಾಮರ್ಥ್ಯವಿದ್ದು, ಪ್ರಸ್ತುತ 0.035 ಟಿಎಂಸಿ ನೀರು ಮಾತ್ರವಿದೆ.

। ಕಿರಣ್ ಕುಮಾರ್, ಸಹಾಯಕ ಎಂಜಿನಿಯರ್ ಹಾರಂಗಿ ಅಣೆಕಟ್ಟೆ ಉಪ ವಿಭಾಗ

--------------------ಚಿಕ್ಲಿಹೊಳೆ ಜಲಾಶಯದಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಇಲ್ಲಿನ ಪುರಾತನ ಕಾಲದ ಶಿವನ ದೇವಾಲಯ ಕಾಣುತ್ತಿದೆ. ಇದರಿಂದ ಕುಟುಂಬ ಸಮೇತರಾಗಿ ಚಿಕ್ಲಿಹೊಳೆಗೆ ಹೋಗಿ ವೀಕ್ಷಣೆ ಮಾಡಿದೆವು.। ಕಲಾ ನಾರಾಯಣ, ಕೊಡಗರಹಳ್ಳಿ ನಿವಾಸಿ

--------------ಹಾರಂಗಿ ಜಲಾಶಯದಲ್ಲಿ ಸದ್ಯಕ್ಕೆ ನೀರಿನ ಕೊರತೆ ಇಲ್ಲ. ರೈತರಿಗೆ ಕೃಷಿ ಚಟುವಟಿಕೆಗೆ ಕಾಲಕ್ಕೆ ತಕ್ಕಂತೆ ನಾಲೆಗಳ ಮೂಲಕ ನೀರು ಹರಿಸಲಾಗುತ್ತಿದೆ. ಪ್ರಸ್ತುತ 5.5 ಟಿಎಂಸಿ ನೀರಿದ್ದು, 2 ಟಿಎಂಸಿ ವರೆಗೆ ಬೆಳೆಗಳಿಗೆ ನೀಡಲಾಗುತ್ತದೆ.। ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಾರಂಗಿ

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ