ಮಾರುತಿ ಪ್ರತಾಪ ಯಕ್ಷಗಾನಕ್ಕೆ ಮಾರುಹೋದ ಚಿಕ್ಕಮಗಳೂರು

KannadaprabhaNewsNetwork |  
Published : Oct 06, 2026, 03:00 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುನಗರದ ಕುವೆಂಪು ಕಲಾಮಂದಿರದಲ್ಲಿ ಯಕ್ಷಗಾನ ಅಭಿಮಾನಿ ಬಳಗ, ಸಾಂಸ್ಕೃತಿಕ ಸಂಘ, ಲಯನ್ಸ್ ಸಂಸ್ಥೆ ಹಾಗೂ ಹವ್ಯಕ ಬಳಗದ ಆಶ್ರಯದಲ್ಲಿ ಶಿವಮೊಗ್ಗದ ನಾಟ್ಯ ಶ್ರೀ ಕಲಾತಂಡದಿಂದ ಭಾನುವಾರ ಸಂಜೆ ಪ್ರದರ್ಶಿಸಲಾದ ‘ಮಾರುತಿ ಪ್ರತಾಪ’ ಯಕ್ಷಗಾನ ನೋಡುಗರ ಮನಸೂರೆಗೊಂಡಿತು.

ಉತ್ತರ ಕನ್ನಡ ಭಾಗದ ಬಡಗುತಿಟ್ಟಿನ ಯಕ್ಷಗಾನದ ವೈಭವ ಅನಾವರಣಗೊಳಿಸಿದ ಪ್ರದರ್ಶನ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುನಗರದ ಕುವೆಂಪು ಕಲಾಮಂದಿರದಲ್ಲಿ ಯಕ್ಷಗಾನ ಅಭಿಮಾನಿ ಬಳಗ, ಸಾಂಸ್ಕೃತಿಕ ಸಂಘ, ಲಯನ್ಸ್ ಸಂಸ್ಥೆ ಹಾಗೂ ಹವ್ಯಕ ಬಳಗದ ಆಶ್ರಯದಲ್ಲಿ ಶಿವಮೊಗ್ಗದ ನಾಟ್ಯ ಶ್ರೀ ಕಲಾತಂಡದಿಂದ ಭಾನುವಾರ ಸಂಜೆ ಪ್ರದರ್ಶಿಸಲಾದ ‘ಮಾರುತಿ ಪ್ರತಾಪ’ ಯಕ್ಷಗಾನ ನೋಡುಗರ ಮನಸೂರೆಗೊಂಡಿತು.ಉತ್ತರ ಕನ್ನಡ ಭಾಗದ ಬಡಗುತಿಟ್ಟಿನ ಯಕ್ಷಗಾನದ ವೈಭವ ಅನಾವರಣಗೊಳಿಸಿದ ಪ್ರದರ್ಶನದಲ್ಲಿ ಭಾಗವತರ ಕಂಚಿನ ಕಂಠದ ಗಾಯನ, ಅಬ್ಬರದ ಹಿಮ್ಮೇಳ, ಕಲಾವಿದರ ಪ್ರಾಸಬದ್ಧ ಚುರುಕು ಸಂಭಾಷಣೆ, ನವಿರು ಹಾಸ್ಯ, ಮಿಂಚಿನ ನೃತ್ಯ ಹಾಗೂ ಅದ್ಭುತ ಅಭಿನಯ 4ಗಂಟೆಗೂ ಅಧಿಕ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟಿತು.ರಾಮಭಕ್ತ ಆಂಜನೇಯನು ಶ್ರೀಕೃಷ್ಣನ ಅಣ್ಣ ಬಲರಾಮನ ಗರ್ವ ಹಾಗೂ ಅಹಂಕಾರ ಮಣಿಸುವ ಕಥಾಹಂದರದ ಪ್ರಸಂಗ ದಲ್ಲಿ ಆಂಜನೇಯನ ಶಕ್ತಿ, ಭಕ್ತಿ, ಸಾಮರ್ಥ್ಯ ಮತ್ತು ವೀರತ್ವವನ್ನು ಕಲಾವಿದರು ಮನೋಜ್ಞವಾಗಿ ಕಟ್ಟಿಕೊಟ್ಟರು. ಹಿರಿಯ ಕಲಾವಿದ ವಿದ್ವಾನ್ ದತ್ತಮೂರ್ತಿ ಭಟ್ ಮಾರುತಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸಿದರು. ಆಂಜನೇಯನ ಪಾತ್ರ ರಂಗ ಪ್ರವೇಶಿಸುತ್ತಿದ್ದಂತೆ ಕಲಾಮಂದಿರದಲ್ಲಿ ರಾಮನಾಮ ಮೊಳಗಿದ್ದು ಭಕ್ತಿಯ ವಾತಾವರಣ ನಿರ್ಮಿಸಿತು.ಶ್ರೀಕೃಷ್ಣನ ಪಾತ್ರಧಾರಿ ಕಾರ್ತಿಕ್ ಚಿಟ್ಟಾಣಿ ಅವರ ಅದ್ಭುತ ಅಭಿನಯ ಹಾಗೂ ಚುರುಕು ನೃತ್ಯಕ್ಕೆ ಪ್ರೇಕ್ಷಕರಿಂದ ಭರ್ಜರಿ ಚಪ್ಪಾಳೆ ವ್ಯಕ್ತವಾಯಿತು. ಭಾಗವತ ಗಾನಸಾಮ್ರಾಟ್ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಕಂಚಿನ ಕಂಠದ ಗಾಯನ ಯಕ್ಷಗಾನ ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ನೀಡಿತು.ವಿವಿಧ ಪ್ರಸಿದ್ಧ ಮೇಳಗಳ ಬಡಗುತಿಟ್ಟಿನ ಖ್ಯಾತ ಕಲಾವಿದರನ್ನು ಒಂದೇ ರಂಗದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ದೊರೆ ತಿದ್ದು ವಿಶೇಷ. ಕಲಾವಿದರ ಅಭಿನಯ, ನೃತ್ಯದ ಜತೆಗೆ ಭಾಗವತಿಕೆಯನ್ನೂ ಪ್ರೇಕ್ಷಕರು ಮೆಚ್ಚಿಕೊಂಡರು.ಸಮಾರಂಭದಲ್ಲಿ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ, ಹಿರಿಯ ಕಲಾವಿದರಾದ ವಿದ್ವಾನ್ ದತ್ತಮೂರ್ತಿ ಭಟ್ ಹಾಗೂ ವಿದ್ಯಾಧರರಾವ್ ಜಲವಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಾಂಸ್ಕೃತಿಕ ಸಂಘ ಹಾಗೂ ಯಕ್ಷಗಾನ ಅಭಿಮಾನಿ ಬಳಗದ ಅಧ್ಯಕ್ಷ ಆನಂದ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಉಜ್ವಲ್ ಡಿ. ಪಡುಬಿದ್ರಿ, ಹವ್ಯಕ ಬಳಗದ ಅಧ್ಯಕ್ಷ ರಾಮ ಹಾಸ್ಯಗಾರ, ಯಕ್ಷಗಾನ ಅಭಿಮಾನಿ ಬಳಗದ ಕಾರ್ಯದರ್ಶಿ ಕೆ.ಎನ್. ಮಂಜುನಾಥ ಭಟ್, ಸಾಹಿತಿ ನಾಗರಾಜರಾವ್ ಕಲ್ಕಟ್ಟೆ, ರೇಖಾ ನಾಗರಾಜರಾವ್, ಗೋಪಾಲಕೃಷ್ಣ, ವಿನೀತ್ ಕುಮಾರ್, ಸುರೇಂದ್ರ ಶೆಟ್ಟಿ, ವೆಂಕಟೇಶ್, ಹಿರಿಯ ಪತ್ರಕರ್ತ ಸ. ಗಿರಿಜಾಶಂಕರ್ ಹಾಗೂ ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನವ ವೈದ್ಯರು ವೃತ್ತಿ ಗೌರವ ಹೆಚ್ಚಿಸಲಿ: ಬಸವಂತಪ್ಪ
ಸಂಘಟಿತರಾಗಿ ಕ್ರೀಡಾಕೂಟ ಯಶಸ್ವಿಗೊಳಿಸಿ