ಉಡುಪಿ: ಉಡುಪಿ ಜಿಲ್ಲೆಯಲ್ಲಿ 1 - 10ನೇ ತರಗತಿವರೆಗೆ 1,59,731 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ಆಧಾರ್ ಸೀಡಿಂಗ್ ಮತ್ತು ಆಧಾರ್ ಮ್ಯಾಪಿಂಗ್ ಕಡ್ಡಾಯವಾಗಿ ಆಗಿರಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಅವರು ಸಮಸ್ಯೆ ಎದುರಿಸುತ್ತಾರೆ. ಆದ್ದರಿಂದ ತಿಂಗಳೊಳಗೆ ಜಿಲ್ಲೆಯ ಎಲ್ಲ ಮಕ್ಕಳ ಆಧಾರ್ ಸೀಡಿಂಗ್ - ಮ್ಯಾಪಿಂಗ್ ಮಾಡಿಸಬೇಕು, ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಎಚ್ಚರಿಕೆ ನೀಡಿದರು.ಶುಕ್ರವಾರ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಆರ್‌ಟಿಇ ಕಾಯ್ದೆ, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆಗಳ ಪ್ರಗತಿ ಪರಿಶೀಲನಾ ಸಭೆಯ ಅಧಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು, ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ಪ್ರದರ್ಶಿಸುವುದು ಕಡ್ಡಾಯವಾಗಿದ್ದರೂ, ಬ್ರಹ್ಮಾವರದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿಯೇ ಪ್ರದರ್ಶಿಸದಿರುವುದು ಕಂಡುಬಂದಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪರಿಶೀಲಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ, ಹೆಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಸ್. ಎಸ್. ಕಾದ್ರೊಳ್ಳಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.