ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ವಹಿಸಬೇಕಾಗಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ಕುಶಾಲನಗರದಲ್ಲಿ ಸಂಚಾರಿ ಪೊಲೀಸ್ ಠಾಣೆಯ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಯಾವುದೇ ಸಂದರ್ಭ ಕಾನೂನು ಉಲ್ಲಂಘನೆಗೆ ಅವಕಾಶ ಕಲ್ಪಿಸಬಾರದು. ಸಂಚಾರಿ ವ್ಯವಸ್ಥೆಗೆ ಸಾರ್ವಜನಿಕರು ಕೈಜೋಡಿಸಿ ಉತ್ತಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಕರ್ತವ್ಯದಲ್ಲಿರುವ ಪೊಲೀಸರಿಗೆ ಸಹಕಾರದೊಂದಿಗೆ ರಕ್ಷಣೆ ನೀಡುವುದು ಸಾರ್ವಜನಿಕರ ಕರ್ತವ್ಯ ಕೂಡ ಆಗಿದೆ ಎಂದು ಅವರು ಹೇಳಿದರು. ಪೊಲೀಸರು ನಾಗರಿಕರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಬೇಕು ಎಂದರು. ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ ಎಸ್ ಅರುಣ್ ಮಾಚಯ್ಯ ಮಾತನಾಡಿ, ಜಿಲೆಯಲ್ಲಿ ಉಭಯ ಶಾಸಕರು ಕ್ಷೇತ್ರದ ಅಭಿವೃದ್ಧಿಯತ್ತ ಸಾಗುತ್ತಿದ್ದು ಕ್ರೀಡಾ ಕ್ಷೇತ್ರಕ್ಕೆ ಕೂಡ ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಜಿಲೆಯಲ್ಲಿ ಶೂಟಿಂಗ್ ರೇಂಜ್ ನಿರ್ಮಾಣ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸರಕಾರದೊಂದಿಗೆ ಚಿಂತನೆ ಹರಿಸಲಾಗಿದೆ ಎಂದರು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಎನ್ ಬಿಂದು ಮಣಿ ಮಾತನಾಡಿ, ಕುಶಾಲನಗರದಲ್ಲಿ ಸಂಚಾರಿ ಪೊಲೀಸ್ ಠಾಣಾ ಕಟ್ಟಡಕ್ಕೆ ಅಂದಾಜು ಮೊತ್ತ ಎರಡು ಕೋಟಿ 72 ಲಕ್ಷ 50 ಸಾವಿರ ರುಪಾಯಿ ಅನುದಾನ ಕಲ್ಪಿಸಲಾಗಿದ್ದು 11 ತಿಂಗಳ ಅವಧಿಯಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಕಟ್ಟಡದಲ್ಲಿ ನೆಲ ಮಹಡಿ ಮತ್ತು ಮೊದಲನೇ ಮಹಡಿ ಕಾಮಗಾರಿ ನಡೆಯಲಿದ್ದು ಪೊಲೀಸ್ ಉಪ ನಿರೀಕ್ಷಕರ ಕಚೇರಿ ಸಹಾಯಕ ಪೊಲೀಸ್ ಉಪ ನಿರೀಕ್ಷಕರ ಕಚೇರಿ ಆಫೀಸ್ ಕೊಠಡಿ, ವಯರ್ಲೆಸ್ ಕೊಠಡಿ ಕಂಪ್ಯೂಟರ್ ರೂಮ್, ಶಸ್ತ್ರಾಗಾರ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಟ್ಟಡ ಹೊಂದಲಿದೆ ಎಂದು ಅವರು ಮಾಹಿತಿ ಒದಗಿಸಿದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್ ಕುಶಾಲನಗರದಲ್ಲಿ ತಾಲೂಕು ಕಚೇರಿಗಳಿಗೆ ಅಗತ್ಯವಾದ ಸ್ಥಳಗಳನ್ನು ನಿಗದಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದಲ್ಲಿ ಸಮರ್ಪಕವಾದ ಸಂಚಾರಿ ವ್ಯವಸ್ಥೆ ರೂಪಿಸಲು ವಾಹನ ಸವಾರರು ಪೊಲೀಸರೊಂದಿಗೆ ಕೈಜೋಡಿಸಬೇಕಾಗಿದೆ ಎಂದರು. ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ ಪಿ ಚಂದ್ರಕಲಾ , ವಕೀಲರ ಸಂಘದ ಅಧ್ಯಕ್ಷರಾದ ಆರ್ ಕೆ ನಾಗೇಂದ್ರ ಬಾಬು ಮಾತನಾಡಿದರು.ಜಿಲ್ಲಾಧಿಕಾರಿ ಎಸ್ ಜೆ ಸೋಮಶೇಖರ್, ಜಿಲ್ಲಾ ಅರಣ್ಯ ಅಧಿಕಾರಿ ಅಭಿಷೇಕ್ ಪ್ರಮುಖರಾದ ಮಂಜುನಾಥ್ ಗುಂಡೂರಾವ್, ಜೋಸೆಫ್ ವಿಕ್ಟರ್ ಸೋನ್ಸ್ ಇದ್ದರು. ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಚಂದ್ರಶೇಖರ್ ಪೊಲೀಸ್ ವೃತ್ತ ನಿರೀಕ್ಷಕರಾದ ದಿನೇಶ್ ಕುಮಾರ್, ಪ್ರದೀಪ್, ಉಪನಿರೀಕ್ಷಕರಾದ ಗಣೇಶ್ ಮೋಹನ್ ರಾಜ್, ಗೀತಾ ಮತ್ತಿತರರು ಇದ್ದರು. ದಿವ್ಯ ನಿರೂಪಿಸಿದರು. ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಸ್ವಾಗತಿಸಿದರು. ಆಶಾ ಪ್ರಾರ್ಥನೆ ಮಾಡಿದರು. ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ವಂದಿಸಿದರು.