ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಹಂಪಾಪುರ ಹೋಬಳಿಯ ಬಾಚೇಗೌಡನಹಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ಮಕ್ಕಳ ಜಾಗೃತಿ ಸಂಸ್ಥೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಪ್ರೌಢಶಾಲೆ ಸಹಕಾರದೊಂದಿಗೆ ಬಾಲ್ಯ ವಿವಾಹ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.ಹಂಪಾಪುರ ಹೋಬಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಲ್ಯ ವಿವಾಹದ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಡೆಯಲು ಜಾಥಾ ಕಾರ್ಯಕ್ರಮ ಗ್ರಾಮದ ಬೀದಿಗಳಲ್ಲಿ ಸಾಗಿ ಜಾಗೃತಿ ಮೂಡಿಸಲಾಯಿತು. ನಂತರ ಬೀದಿ ನಾಟಕವನ್ನು ಪ್ರದರ್ಶಿಸುವ ಮೂಲಕ ಅರಿವು ಮೂಡಿಸಲಾಯಿತು. ಬಾಲ್ಯ ವಿವಾಹದಿಂದಾಗುವ ಅನಾಹುತಗಳ ಬಗ್ಗೆ ಹಾಗೂ ಶಾಲಾ ಪೂರ್ವ ಶಿಕ್ಷಣದ ಬಗ್ಗೆ ಅರಿವು ಮೂಡಿಸಲಾಯಿತು.ಜಾಥಾ ಕಾರ್ಯಕ್ರಮವನ್ನು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸುಜಾತ ಉದ್ಘಾಟಿಸಿ ಮಾತನಾಡಿ, ಗ್ರಾಮಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿದ್ದು, ಇದನ್ನು ತಡೆಗಟ್ಟದೆ ಹೋದರೆ ಹೆಣ್ಣು ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ, ಈ ಕುರಿತು ಹೆಣ್ಣುಮಕ್ಕಳ ಪೋಷಕರು ಎಚ್ಚೆತ್ತುಕೊಂಡು ಬಾಲ್ಯ ವಿವಾಹಗಳನ್ನು ನಿಲ್ಲಿಸಬೇಕು ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಇಲಾಖೆಯ ಮೇಲ್ವಿಚಾರಕಿ ಚಿನ್ನಮ್ಮ ಮಾತನಾಡಿ, ಇಲಾಖೆಯಿಂದ ಬಾಲ್ಯ ವಿವಾಹದ ಬಗ್ಗೆ ಮನೆ ಮನೆಗೆ ಭೇಟಿ ಮಾಡಿ ಜಾಗೃತಿ ಮೂಡಿಸಿದ್ದರೂ ಸಹ ಇನ್ನು ಬಾಲ್ಯ ವಿವಾಹಗಳು ಕಂಡುಬರುತ್ತಿರುವುದು ವಿಷಾದನೀಯ ಎಂದು ಬೇಸರಿಸಿದರು.ಜೀವಿಕ ಸಂಸ್ಥೆಯ ಶಿವರಾಜು ಮಕ್ಕಳ ಹಕ್ಕುಗಳ ಬಗ್ಗೆ ಹಾಗೂ ಬೆಳವಣಿಗೆಯ ಬಗ್ಗೆ ಮಾತನಾಡಿದರು.ಗ್ರಾಮದ ನಾಗನಾಯಕ, ಪಂಚಾಯಿತಿ ಅಧ್ಯಕ್ಷೆ ಸುನಂದಮ್ಮ, ಸದಸ್ಯ ಮಂಜೇಶ್, ಜೀವಿಕಾ ಸಂಸ್ಥೆಯ ನಟರಾಜು, ನೀಲಮ್ಮ, ಮಕ್ಕಳ ಜಾಗೃತಿ ಸಂಸ್ಥೆಯ ಉಪ ವ್ಯವಸ್ಥಾಪಕ ನವೀನ್ ಕುಮಾರ್, ವೃತ್ತ ಸಂಯೋಜಕ ಮೂಗುರಯ್ಯ ಇದ್ದರು.