ರೈಲು ಬೋಗಿಯೊಳಗೇ ಹೆರಿಗೆ! : ಖಾಸಗಿ ಆಸ್ಪತ್ರೆ ವೈದ್ಯಕೀಯ ತಂಡ ಸಹಕಾರ

KannadaprabhaNewsNetwork |  
Published : Apr 27, 2026, 02:45 AM IST
ರೈಲು | Kannada Prabha

ಸಾರಾಂಶ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬಳಿಗೆ ಹೆರಿಗೆಯಾದ ಘಟನೆ ಬಿಸಿರೋಡಿನಲ್ಲಿ ಭಾನುವಾರ ರಾತ್ರಿ ವೇಳೆ ನಡೆದಿದೆ.

ಬಂಟ್ವಾಳ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬಳಿಗೆ ಹೆರಿಗೆಯಾದ ಘಟನೆ ಬಿಸಿರೋಡಿನಲ್ಲಿ ಭಾನುವಾರ ರಾತ್ರಿ ವೇಳೆ ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡು ಬಳಿಕ ಬಿಸಿರೋಡಿನ ರೈಲು ನಿಲ್ದಾಣದಲ್ಲಿ ಬೋಗಿಯೊಳಗೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಮೈಸೂರು ಸವಣೂರು ನಿವಾಸಿ ಪೊನ್ನಮ್ಮ ಅವರು ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆಯಾಗಿದ್ದಾರೆ. ಅವರು ಮಂಗಳೂರಿನಲ್ಲಿ ರೈಲು ಹತ್ತಿದ್ದು, ಸ್ವಲ್ಪ ಮುಂದೆ ಬರುವ ವೇಳೆಗೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಬೆಂಗಳೂರಿಗೆ ತೆರಳುತ್ತಿದ್ದ ಮುಸ್ಲಿಂ ಸಮುದಾಯದ ಮಹಿಳೆಯರು ಉಪಚರಿಸಿದರಲ್ಲದೆ, ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ರೈಲ್ವೆ ಇಲಾಖೆ ತಕ್ಷಣ ಸ್ಪಂದಿಸಿ ಬಿಸಿರೋಡಿನ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ, ಸ್ಥಳೀಯ ಸೋಮಯಾಜಿ ಆಸ್ಪತ್ರೆಯ ವೈದ್ಯರ ತಂಡವನ್ನು ಕರೆಸಿಕೊಂಡು ರೈಲು ಬೋಗಿಯೊಳಗೆ ಹೆರಿಗೆಗಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದಲ್ಲದೆ, ವೈದ್ಯರ ತಂಡ ಯಶಸ್ವಿಯಾಗಿ ಹೆರಿಗೆಯನ್ನು ಮಾಡಿಸಿದೆ.

ಕೂಡಲೇ ಆಂಬ್ಯಲೆನ್ಸ್ ಮೂಲಕ ಮಗು ಹಾಗೂ ತಾಯಿಯನ್ನು ವೈದ್ಯರ ತಂಡ ಬಿಸಿರೋಡಿನ ಸೋಮಯಾಜಿ‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿ, ಇಬ್ಬರಿಗೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಮಗು ಹಾಗೂ ತಾಯಿ ಆರೋಗ್ಯದಿಂದ ಇದ್ದರೂ ಕೂಡ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಬಿಸಿರೋಡಿಗೆ 7.20ಕ್ಕೆ ಬಂದಿದ್ದ ರೈಲು ಸುಮಾರು ಒಂದು ತಾಸುಗಳ ಕಾಲ ಬಿಸಿರೋಡಿನ ನಿಲ್ದಾಣದಲ್ಲಿ ನಿಂತು, ಹೆರಿಗೆಯಾದ ಬಳಿಕ ಅಂದರೆ 8.20 ಕ್ಕೆ ಬಿಸಿರೋಡಿನಿಂದ ತೆರಳಿದೆ.ಸಮಯಕ್ಕೆ ಸರಿಯಾಗಿ ಬಂದ ವೈದ್ಯಕೀಯ ತಂಡ: ಬಸುರಿಯೋರ್ವಳ ಹೆರಿಗೆಗಾಗಿ ರೈಲು ನಿಲ್ದಾಣಕ್ಕೆ ವೈದ್ಯರ ತಂಡವನ್ನು ಕರೆದುಕೊಂಡು ಬರುವಂತೆ ಕಲ್ಲಡ್ಕ ದ ಸುಜ್ಞಾನ ಅಂಬ್ಯುಲೆನ್ಸ್ ವಾಹನದ ಚಾಲಕ ಲೋಕೇಶ್ ಅವರಿಗೆ ಪೋನ್ ಬಂದ ತಕ್ಷಣವೇ ಕೇವಲ ಮೂರು ನಿಮಿಷದಲ್ಲಿ ಬಿಸಿರೋಡಿನ ಸೋಮಯಾಜಿ ಆಸ್ಪತ್ರೆಯಿಂದ ವೈದ್ಯರನ್ನು ಕರೆಸಿಕೊಂಡು ರೈಲು ನಿಲ್ದಾಣಕ್ಕೆ ಬಂದಿದ್ದಾರೆ.

ವೈದ್ಯರು ಹೆರಿಗೆ ಮಾಡಿಸಿದ ಕೂಡಲೇ ಮಗುವನ್ನು ಸೋಮಯಾಜಿ ಆಸ್ಪತ್ರೆಗೆ ಸುಜ್ಞಾನ ಆಂಬ್ಯುಲೆನ್ಸ್ ವಾಹನದಲ್ಲಿ ಹಾಗೂ ತಾಯಿಯನ್ನು ಸೋಮಯಾಜಿ ಆಸ್ಪತ್ರೆಯ ಅಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಕೈಕಂಬದ ಸಮಾದ್ , ಬಂಟ್ವಾಳ ನಗರ ಠಾಣೆ ಪೊಲೀಸರು ಹಾಗೂ ಸಾರ್ವಜನಿಕರು ಮಹಿಳೆಯ ಹೆರಿಗಾಗಿ ಸಕಲ ವ್ಯವಸ್ಥೆಯನ್ನು ಮಾಡಿದ್ದಾರೆ.

ಮಂಗಳೂರು ರೈಲ್ವೆ ಇಲಾಖೆಯ ಪೊಲೀಸರ ತಂಡ ಕೂಡ ಆಗಮಿಸಿದ್ದು, ಮಾಹಿತಿ ಸಂಗ್ರಹಿಸುತ್ತಿದೆ.

ಪೊನ್ನಮ್ಮ ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿ ಎಂದು ಹೇಳಲಾಗುತ್ತಿದ್ದರೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರಿಕೆಟ್ ಪಂದ್ಯಾವಳಿ: ಗೆದ್ದು ಬೀಗಿದ ಆಯುರ್ವೇದ ಕಾಲೇಜು ತಂಡ
ಪರಿಶ್ರಮದಿಂದ ಪ್ರತಿಫಲ ಸಾಧ್ಯ: ಇಒ ಬಡಿಗೇರ