-ಸುರಪುರದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜನ-ಜಾಗೃತಿ ಕಾರ್ಯಕ್ರಮ
----ಕನ್ನಡಪ್ರಭ ವಾರ್ತೆ ಯಾದಗಿರಿ
ಪ್ರತಿಯೊಂದು ಇಲಾಖೆಯು ಕೈಜೋಡಿಸಿದಾಗ ಬಾಲಕಾರ್ಮಿಕ ಪದ್ಧತಿ ಎಂಬ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಫಕೀರವ್ವ ಕೆಳಗೇರಿ ಅವರು ಹೇಳಿದರು.ಜಿಲ್ಲೆಯ ಸುರಪುರ ನಗರದ ವೇಣುಗೋಪಾಲಸ್ವಾಮಿ ರಸ್ತೆಯಿಂದ ಮಾರುಕಟ್ಟೆ ರಸ್ತೆ, ಗಾಂಧಿ ವೃತ್ತದವರೆಗೆ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಗ್ಯಾರೇಜ್‌ಗಳು ಮತ್ತು ಹೊಟೇಲ್‌ಗಳಲ್ಲಿ ಹಠಾತ್ ದಾಳಿ, ತಪಾಸಣೆ ನಡೆಸಿ “ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986, ತಿದ್ದುಪಡಿ ಕಾಯ್ದೆ 2016ರ” ಕುರಿತು ಜಾಗೃತಿ ಮೂಡಿಸಿ ಅವರು ಮಾತನಾಡಿದರು.
2025ರ ಜ.10 ರಿಂದ ಮಾ.31ರವರೆಗೆ ರಕ್ಷಣಾ ಕಾರ್ಯಚರಣೆಗೆ ಸರಕಾರದ ಪ್ರತಿಯೊಂದು ಇಲಾಖೆಯು ಕೈಜೊಡಿಸಿದಾಗ ಮಾತ್ರ ಸಾಧ್ಯ ಎಂದು ತಿಳಿಸಿದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ ಮಾತನಾಡಿ, ಜಿಲ್ಲೆಯ ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಬೇಕೆಂದು ಕಾರ್ಮಿಕ ಇಲಾಖೆಯಿಂದ ನಿರಂತರವಾಗಿ ಜನ-ಜಾಗೃತಿ, ಕಾನೂನು ಅರಿವು-ನೆರವು ಕಾರ್ಯಕ್ರಮ, ಬೀದಿನಾಟಕ ಮತ್ತು ಆಟೋ-ಪ್ರಚಾರ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಇದನ್ನು ಮೀರಿಯೂ ಸಹ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.ಸುರಪುರ ಕಾರ್ಮಿಕ ನಿರೀಕ್ಷಕರಾದ ಶಿವಪ್ಪ ಜಮಾದಾರ್ ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ 20,000-50,000 ರು.ಗಳವರೆಗೆ ದಂಡ ಮತ್ತು 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನು ಸಹ ವಿಧಿಸಲಾಗುವುದು ಎಂದು ತಿಳಿಸಿದರು.
ತಪಾಸಣೆ, ಹಠಾತ್ ದಾಳಿ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಭೀಮನಗೌಡ ಕಂದಾಯ ಇಲಾಖೆಯ ಅಶೋಕ, ಆರೋಗ್ಯ ಇಲಾಖೆಯ ಜೆ.ಕೆ. ಪವಾರ, ಸಮಾಜ ಕಲ್ಯಾಣ ಇಲಾಖೆಯ ರಮೇಶ, ಕೈಗಾರಿಕಾ ಇಲಾಖೆಯ ಶೇಖ್ ಮೆಹಬೂಬ್, ರೇಷ್ಮೆ ಇಲಾಖೆಯ ಭೀಮಣ್ಣ, ಶಿಶು ಅಭಿವೃದ್ಧಿ ಇಲಾಖೆಯ ಮಹ್ಮದ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೀಲಮ್ಮ, ಜಿಲ್ಲಾ ಮಕ್ಕಳ ರಕ್ಷಣ ಘಟಕ ಮಕ್ಕಳ ಸಹಾಯವಾಣಿ 1098/112ನ ವೆಂಕಟೇಶ, ಮಾರ್ಗದರ್ಶಿ ಸಂಸ್ಥೆಯ ಹನುಮಂತ ಎ., ಕಾರ್ಮಿಕ ಇಲಾಖೆಯ ಎಲ್.ಎನ್. ಚೌಧರಿ, ರಮೇಶ ಕೆಲ್ಲೂರು ಇತರರಿದ್ದರು.----
6ವೈಡಿಆರ್11: ಸುರಪುರ ನಗರದ ವಿವಿಧೆಡೆ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಅಂಗವಾಗಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜನ-ಜಾಗೃತಿ ಮೂಡಿಸಲಾಯಿತು.