ಕನ್ನಡಪ್ರಭ ವಾರ್ತೆ ಹುಣಸಗಿ
ಮಕ್ಕಳನ್ನು ದುಡಿಸಿಕೊಳ್ಳುವುದು ಮಹಾ ಅಪರಾಧ.14 ವರ್ಷದೊಳಗಿನ ಮಕ್ಕಳನ್ನು ಅಂಗಡಿ, ಸಂಸ್ಥೆ, ಕಾರ್ಖಾನೆ, ಹೊಟೇಲ್‌ಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಕಡ್ಡಾಯವಾಗಿ ನಿಷೇಧಿಸಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಹೆಚ್ಚುವರಿ ದಿವಾಣಿ ನ್ಯಾಯಧೀಶ ಬಸವರಾಜ್ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ, ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ ಹಾಗೂ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ನಡೆದ "ಬಾಲಕಾರ್ಮಿಕ ಪದ್ಧತಿ ಅಳಿಸಿ, ಮಕ್ಕಳನ್ನು ಶಾಲೆಗೆ ಕಳುಹಿಸಿ " ಪ್ಯಾನ್ ಇಂಡಿಯಾ ರಕ್ಷಣೆ, ಕಾನೂನು ಅರಿವು-ನೆರವು ಹಾಗೂ ಪುನರ್ ವಸತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಲು ನೆರವು ನೀಡಿದ ಪಾಲಕರ ಮೇಲೆಯೂ ಮೊಕದ್ದಮೆ ದಾಖಲಿಸಲಾಗುತ್ತಿದೆ. ಹೀಗಾಗಿ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ನೇಮಿಸುವುದು ಅಪರಾಧವಾಗಿದ್ದು, ಮಕ್ಕಳನ್ನು ದುಡಿಸದೇ ಶಾಲೆಗೆ ಕಳುಹಿಸಬೇಕು ಎಂದು ತಿಳಿಸಿದರು.ಒಂದು ವೇಳೆ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಮಾಲೀಕರು ಪ್ರತಿ ಮಗುವಿಗೆ ₹20 ಸಾವಿರ ಪರಿಹಾರವನ್ನು ಪುನರ್ ವಸತಿಯ ಕಲ್ಯಾಣ ನಿಧಿಗೆ ಪಾವತಿಸಬೇಕು. ಅಲ್ಲಿ ಎರಡು ವರ್ಷದವರೆಗೂ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಕಾನೂನಿನ ಪ್ರಜ್ಞೆ ಮತ್ತು ಕಾಯ್ದೆಗಳ ಕುರಿತು ವಿವರಿಸಿದರು. ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣ ನಾಯಕ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಪ್ರತಿ ತಿಂಗಳು 15 ತಪಾಸಣೆ ಮತ್ತು ಹಠಾತ್ ದಾಳಿ ಆಯೋಜಿಸುಸುವುದು ಹಾಗೂ ಪ್ರತಿ ತಿಂಗಳು ಕಾನೂನು ಅರಿವು-ನೆರವು ಜನ ಜಾಗೃತಿ ಮೂಡಿಸಿ ಮಕ್ಕಳನ್ನು ಕೂಲಿಗೆ ಕಳುಹಿಸದೆ ಶಾಲೆಗೆ ಕಳುಹಿಸಿ ಎಂದರು. ನಂತರ ಪಟ್ಟಣ ಪ್ರಮುಖ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅರಿವು, ಜಾಗೃತಿ ಮೂಡಿಸಲಾಯಿತು.ತಾಲೂಕು ಉಪ ತಹಸೀಲ್ದಾರ್ ಶ್ರೀಶೈಲ್, ಪಿಎಸ್‌ಐ ಚಂದ್ರಶೇಖರ, ಬಸವರಾಜ ಸಜ್ಜನ್, ಕಾರ್ಮಿಕ ಇಲಾಖೆ ಎಲ್.ಎನ್. ಚೌದ್ರಿ, ರಮೇಶ ಕೆಲ್ಲೂರು, ಬಾಲುನಾಯಕ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ವರ್ಕನಳ್ಳಿ, ಡಾನ್ ಬಾಸ್ಕೋ ಸಮಾಜ ಸೇವಾ ಕೇಂದ್ರ ನಿರ್ದೇಶಕ ಡಾ. ಶಾಬು ಫ್ರಾನ್ಸಿಸ್, ಎಸ್‌ಐ ಭಾಗಣ್ಣ, ಶಿವಪ್ಪ ಜಮಾದಾರ, ಮಾರ್ಗದರ್ಶಿ ಚನ್ನಮ್ಮ, ತಾಯಮ್ಮ ಸೇರಿದಂತೆ ಇತರರಿದ್ದರು.