ಮಕ್ಕಳನ್ನು ದುಡಿಸುವುದು ಶಿಕ್ಷಾರ್ಹ ಅಪರಾಧ

KannadaprabhaNewsNetwork | Published : Apr 1, 2025 12:47 AM

ಸಾರಾಂಶ

೧೪ ವರ್ಷದೊಳಗಿನ ಮಕ್ಕಳಿಗೆ ಬೇಕರಿ, ಮಾಲ್, ಕಾರ್ಖಾನೆ, ಹೋಟೆಲ್, ತೋಟ ಹೀಗೆ ಕಷ್ಟಕರವಾದ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಮಾಲೀಕರಿಗೂ ಹಾಗೂ ಪೋಷಕರಿಗೂ ಸಹ ಇಪ್ಪತ್ತು ಸಾವಿರದಿಂದ ಐವತ್ತು ಸಾವಿರದವರೆಗೆ ದಂಡ ವಿಧಿಸಲಾಗುವುದು. ಮತ್ತು ಆರು ತಿಂಗಳಿಂದ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೋಲಾರಮಕ್ಕಳು ಸಸಿ ಇದ್ದಂತೆ. ಅ‍ವರನ್ನು ಮರವನ್ನಾಗಿ ಬೆಳೆಸುವುದು ಪೋಷಕರ ಜವಾಬ್ದಾರಿ. ಚಿಕ್ಕ ವಯಸ್ಸಿನಲ್ಲೇ ಅವರಿಗೆ ಶಿಕ್ಷಣ ನೀಡದೆ ವಂಚಿಸಬಾರದು. ಅವರಿಗೆ ಬಾಲ್ಯ ಶಿಕ್ಷಣ, ಆರೋಗ್ಯ ಮತ್ತು ರಕ್ಷಣೆ ನೀಡೋಣ. ಹಾಗೆಯೇ ಮಕ್ಕಳಿಂದ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ನ್ಯಾಯಮೂರ್ತಿ ಸುನಿಲ ಎಸ್.ಹೊಸಮನಿ ತಿಳಿಸಿದರು.ತಾಲೂಕಿನ ಅಮ್ಮೇರಹಳ್ಳಿಯಲ್ಲಿ ಬಾಲ್ಯಾವಸ್ಥೆ ಮತ್ತು ಕೀಶೋರವಸ್ಥೆ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಈನೆಲ ಈಜಲ ಕಲಾ ತಂಡದಿಂದ ಬೀದಿ ನಾಟಕ ಮತ್ತು ಜಾಗೃತಿ ಗೀತೆಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರುಜನಜಾಗೃತಿ ಕಾರ್ಯಕ್ರಮ

ಜಿಲ್ಲಾಧ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹೆಚ್ಚು ವಾಸವಿರುವ ಸ್ಥಳಗಳಾದ ಮಾಲೂರು ತಾಲೂಕು ಟೇಕಲ್, ಕೆಜಿಎಫ್ ತಾಲ್ಲೂಕು ಕೋರಮಂಡಲ್, ಬಂಗಾರಪೇಟೆಯ ದೊಡ್ಡಎಲುವಳ್ಳಿ, ಮುಳಬಾಗಿಲು ತಾಲ್ಲೂಕು ಕಮ್ಮದಟ್ಟಿ ಕಡೆಯದಾಗಿ ಕೋಲಾರ ಅಮ್ಮೇರಹಳ್ಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು.೧೪ ವರ್ಷದೊಳಗಿನ ಮಕ್ಕಳಿಗೆ ಬೇಕರಿ, ಮಾಲ್, ಕಾರ್ಖಾನೆ, ಹೋಟೆಲ್, ತೋಟ ಹೀಗೆ ಕಷ್ಟಕರವಾದ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಮಾಲೀಕರಿಗೂ ಹಾಗೂ ಪೋಷಕರಿಗೂ ಸಹ ಇಪ್ಪತ್ತು ಸಾವಿರದಿಂದ ಐವತ್ತು ಸಾವಿರದವರೆಗೆ ದಂಡ ವಿಧಿಸಲಾಗುವುದು. ಮತ್ತು ಆರು ತಿಂಗಳಿಂದ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುವುದು ಎಂದರು.ಬಾಲ ಕಾರ್ಮಿಕರ ರಕ್ಷಣೆಗೆ ಸಹಾಯವಾಣಿ

ಬಾಲಕಾರ್ಮಿಕ ಪದ್ದತಿಯನ್ನು ಯಾರಾದರೂ ಕಂಡುಬಂದರೆ ೧೦೯೮ ಸಹಾಯವಾಣಿಗೆ ಕರೆ ಮಾಡಿ ತಿಳಿಸುವುದು. ಅಂತಹ ಕರೆ ಮಾಡಿದರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿಟ್ಟು ಮಕ್ಕಳನ್ನು ರಕ್ಷಿಸಿ ಶಾಲೆಗೆ ಸೇರಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.ಕಾರ್ಮಿಕ ಅಧಿಕಾರಿ ವರಲಕ್ಷ್ಮಿ ಮಾತನಾಡಿ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಅವರನ್ನು ದುಡಿಮೆಗೆ ಹಚ್ಚಿ ಅವರ ಹಕ್ಕುಗಳನ್ನು ಕಿತ್ತುಕೊಳ್ಳಬಾರದು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಹಾಗಾಗಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕು. ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ. ಮಧ್ಯಾಹ್ನ ಬಿಸಿಯೂಟ, ಹಾಲು, ಮೊಟ್ಟೆ, ಸಮವಸ್ತ್ರ, ಪುಸ್ತಕ ಇನ್ನಿತರೆ ಕಲಿಕಾ ಸಾಮಾಗ್ರಿಗಳನ್ನು ಉಚಿತವಾಗಿ ನೀಡುತ್ತಾರೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿದರೆ ಉತ್ತಮವಾದ ಶಿಕ್ಷಣ ಪಡೆಯಬಹುದು ಎಂದು ನುಡಿದರು.ಅರಿವು ಗೀತೆ, ಬೀದಿ ನಾಟಕ

ಈನೆಲ ಈಜಲ ಕಲಾ ತಂಡದಿಂದ ಅರಿವು ಗೀತೆಗಳು ಮತ್ತು ಬೀದಿ ನಾಟಕ ನಡೆಯಿತು. ಜಿಲ್ಲಾ ಬಾಲ ಕಾರ್ಮಿಕ ಅಧಿಕಾರಿ ಶೃತಿ, ಕಾರ್ಮಿಕ ನಿರೀಕ್ಷಕಿ ರಾಜೇಶ್ವರಿ, ಕಲಾವಿದರಾದ ಬಿ. ವೆಂಕಟಾಚಲಪತಿ, ಹೆಚ್.ಶಾಂತಮ್ಮ, ರಶ್ಮಿ.ಸಿ.ಹೆಚ್, ಅಭಿಲಾಷ್, ಎಂ.ಶೈಲಜಾ ಇದ್ದರು.

Share this article