ಸುಂಟಿಕೊಪ್ಪದಲ್ಲಿ ರಂಜಾನ್ ಹಬ್ಬ ಆಚರಣೆ

KannadaprabhaNewsNetwork | Published : Apr 1, 2025 12:47 AM

ಸಾರಾಂಶ

ಸುಂಟಿಕೊಪ್ಪದಲ್ಲಿ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಡಗರ ಸಂಭ್ರಮದಿಂದ ರಂಜಾನ್‌ ಹಬ್ಬವನ್ನು ಆಚರಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಸುಂಟಿಕೊಪ್ಪದಲ್ಲಿ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಆಲಂಗಿಸಿ ಶುಭಾಶಯ ವಿನಿಮಯಗೊಳಿಸಿ ಸಡಗರ ಸಂಭ್ರಮದಿಂದ ರಂಜಾನ್ ಹಬ್ಬವನ್ನು ಆಚರಿಸಿಕೊಂಡರು.

ಸೋಮವಾರ ರಂಜಾನ್ ಈದ್‌ಉಲ್ ಪಿತರ್ ಅಂಗವಾಗಿ ಪಟ್ಟಣದಲ್ಲಿ ಹೊಸ ಉಡುಪುಗಳನ್ನು ತೊಟ್ಟು ಒಬ್ಬರಿಗೊಬ್ಬರು ಈದ್‌ಉಲ್ ಪಿತರ್ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದು ಮುಂಜಾನೆ ಕಂಡು ಬಂದವು.

ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್‌ನಲ್ಲಿ ಇಬ್ರಾಹಿಂ ಯಾಸನಿ, ಸುನ್ನಿ ಹನಫಿ ಮುಸ್ಲಿಂ ಜಮಾಅತ್ ಮೌಲನಾ ಜುಬೇರ್, ಸುನ್ನಿ ಶಾಫಿ ಜುಮಾ ಮಸ್ಜಿದ್ ಧಾರ್ಮಿಕ ಮೌಲವಿ ಉಸ್ಮಾನ್ ಫೈಝಿ, ಕೂಬ ಮಸ್ಜಿದ್ ಮೌಲನಾ ಇನಾಂ, ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್ ಮುಸ್ಲಿಯರ್ ಅಬ್ದುಲ್ ಅಜೀಜ್ ಸಖಾಫಿ ಧಾರ್ಮಿಕ ಪ್ರವಚನ, ಪ್ರಾರ್ಥನೆಯನ್ನು ಸಲ್ಲಿಸಿದರು.

ಕಳೆದ 30 ದಿನಗಳ ಉಪವಾಸದ ಅಂಗವಾಗಿ ಪ್ರತಿದಿನ ರಾತ್ರಿ ಮಸೀದಿಗಳಲ್ಲಿ ಮೌಲವಿಗಳಿಂದ ಧಾರ್ಮಿಕ ಪ್ರವಚನ ಹಾಗೂ ವಿಶೇಷ ಪ್ರಾರ್ಥನೆಯನ್ನು ಮೌಲವಿಗಳು ನೀಡಿದ್ದರು. ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪಾಲ್ಗೊಳ್ಳುತ್ತಿದ್ದರು.

ಈದ್‌ಉಲ್ ಪಿತರ್ ಅಂಗವಾಗಿ ಸೋಮವಾರ ಎಲ್ಲ ಜುಮ್ಮ ಮಸೀದಿಗಳಲ್ಲಿ ಪ್ರಾರ್ಥನೆ, ಧಾರ್ಮಿಕ ಪ್ರವಚನದ ನಂತರ ಮುಸ್ಲಿಂಬಾಂಧವರು ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ನಂತರ ಮುಸ್ಲಿಂ ಬಾಂಧವರು ಗದ್ದೆಹಳ್ಳದ ಈದ್ಗಾಗಳಿಗೆ ಕುಟುಂಬದಲ್ಲಿ ಮೃತರಿಗೆ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಮನೆಗಳಲ್ಲಿ ಕುಟುಂಬದವರೊಂದಿಗೆ ಹಬ್ಬ ಆಚರಣೆ ಸಡಗರದಲ್ಲಿ ತೊಡಗಿಸಿಕೊಂಡರು.

ಸಲಾಫಿ ಮಸೀದಿಯಲ್ಲಿ ರಂಜಾನ್ ಈದ್‌ಉಲ್ ಪಿತರ್ ಅಂಗವಾಗಿ ಶಮೀರ್ ಮೌಲವಿ ಪಾಲಕ್ಕಡ್ ಅವರು ಧಾರ್ಮಿಕ ಪ್ರವಚನ ಹಾಗೂ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಪುರುಷರು, ಮಹಿಳೆಯರು, ಮಕ್ಕಳು ಒಗ್ಗೂಡಿ ಪ್ರಾರ್ಥನೆಯನ್ನು ಸಲ್ಲಿಸಿದರು.

ಸುಂಟಿಕೊಪ್ಪ ಠಾಣಾಧಿಕಾರಿ ಜಗದೀಶ್ ಹಾಗೂ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ವಹಿಸಿದ್ದರು.

Share this article