ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿ ಸಮಾಜಕ್ಕೆ ಮಾರಕ

KannadaprabhaNewsNetwork |  
Published : Jul 22, 2024, 01:19 AM IST
೨೧ಕೆಎಲ್‌ಆರ್-೧ಕೋಲಾರದ ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್ ಎಸ್.ಹೊಸಮನಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಇತ್ತೀಚೆಗೆ ಭ್ರೂಣಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆಯಂತಹ ಅಪರಾಧಗಳು ಹೆಚ್ಚಾಗುತ್ತಿದ್ದು, ಇದರ ವಿರುದ್ಧ ಧ್ವನಿಯೆತ್ತಬೇಕು. ಇಂತಹ ಪ್ರಕರಣ ಹಾಗೂ ಮಾದಕ ವಸ್ತುಗಳ ಸಾಗಾಣೆ, ಮಾರಾಟ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಿ.

ಕನ್ನಡಪ್ರಭ ವಾರ್ತೆ ಕೋಲಾರಸಮಾಜಕ್ಕೆ ಕಂಟಕವಾಗಿರುವ ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ದತಿ ನಿಷೇಧವಿದ್ದರೂ ಅಲ್ಲಲ್ಲಿ ಇನ್ನು ಈ ಪ್ರಕರಣಗಳು ನಡೆಯುತ್ತಿರುವುದು ಆತಂಕಕಾರಿಯಾಗಿದ್ದು, ವಿದ್ಯಾರ್ಥಿಗಳು ಈ ಅನಿಷ್ಟ ಪದ್ದತಿಗಳ ತಡೆಗೆ ಸಂಕಲ್ಪ ಮಾಡಬೇಕು, ಪೋಷಕರಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ಹೇಳಿದರು.ನಗರದ ನೂತನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನ ಜೀವನದಲ್ಲಿ ಇಂದು ಆಹಾರ, ನೀರಿನಷ್ಟೇ ಕಾನೂನು ಮುಖ್ಯವಾಗಿದ್ದು, ದೈನಂದಿನ ಬದುಕಿಗೆ ಅಗತ್ಯವಾದ ಕನಿಷ್ಟ ಕಾನೂನುಗಳ ಅರಿವು ಅಗತ್ಯವಿದೆ ಎಂದರು.

ಭ್ರೂಣ ಹತ್ಯೆ ವಿರುದ್ಧ ದನಿ ಎತ್ತಿ

ಪೋಷಕರ ಆಶಯ ಈಡೇರಿಕೆ ವಿದ್ಯಾರ್ಥಿಗಳ ಜವಾಬ್ದಾರಿ ಎಂಬುದನ್ನು ಅರಿತು ಹಕ್ಕುಗಳನ್ನು ಕೇಳುವುದರ ಜತೆಗೆ ಕರ್ತವ್ಯ ಪಾಲನೆಯನ್ನೂ ಮಾಡಬೇಕು. ಮನುಷ್ಯ ಭ್ರೂಣದಿಂದ ಸಾಯುವವರೆಗೂ ಕಾನೂನಿನ ಅಡಿಯೇ ಬದುಕಬೇಕಾಗಿದೆ, ಕಾನೂನು ಪಾಲಿಸುವವರನ್ನು ಕಾನೂನು ರಕ್ಷಿಸುತ್ತದೆ, ಇತ್ತೀಚೆಗೆ ಭ್ರೂಣಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆಯಂತಹ ಅಪರಾಧಗಳು ಹೆಚ್ಚಾಗುತ್ತಿದ್ದು, ಇದರ ವಿರುದ್ಧ ಧ್ವನಿಯೆತ್ತಬೇಕು. ಇಂತಹ ಪ್ರಕರಣ ಕಂಡುಬಂದರೆ ಪೊಲೀಸರಿಗೆ ತಿಳಿಸಬೇಕು ಎಂದರು.

ಸಮಾಜಕ್ಕೆ ಹಾಗೂ ಯುವಪೀಳಿಗೆಗೆ ಕಂಟಕವಾಗಿರುವ ಮಾದಕ ವ್ಯಸನದಿಂದ ದೂರ ಮಾಡಲು ವಿದ್ಯಾರ್ಥಿಗಳಿಗೆ ಅರಿವು ನೀಡುವ ಕೆಲಸ ಮಾಡುತ್ತಿದ್ದು, ಶಾಲೆಯ ಆವರಣದಲ್ಲಿ ಅಥವಾ ಎಲ್ಲೇ ಆಗಲಿ ಮಾದಕ ವಸ್ತುಗಳ ಸಾಗಾಣೆ, ಮಾರಾಟ ಕಂಡು ಬಂದರೆ ಪೊಲೀಸರಿಗೆ ದೂರು ನೀಡಿ ಎಂದು ತಿಳಿಸಿದರು.ಕೋಟ್ಪಾ ಕಾಯ್ದೆ ಪಾಲಿಸಿ

ಶಾಲೆಯ ಉಪಪ್ರಾಂಶುಪಾಲೆ ಕೆ.ಉಮಾ ಮಾತನಾಡಿ, ತಂಬಾಕು, ಮಾದಕ ವಸ್ತು ನಿಯಂತ್ರಣಕ್ಕೆ ಕೋಟ್ಟಾ ಸಿಗರೇಟು ಹಾಗೂ ಇತರೆ ತಂಬಾಕು ಉತ್ಪನ್ನಗಳ ಕಾಯಿದೆ ಜಾರಿಯಲ್ಲಿದ್ದು, ೧೮ ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದ ಅಪರಾಧವಾಗಿದೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ ಶಾಲೆಯಿಂದ ೨೦೦ ಮೀಟರ್ ವ್ಯಾಪ್ತಿಯಲ್ಲಿ ಮಾರಾಟ ಮಾಡುವಂತಿಲ್ಲ ಎಂದರು.ಸಖಿ ಒನ್‌ ಸ್ಟಾಪ್ ಸೆಂಟರ್‌ನ ಸಲಹೆಗಾರರಾದ ವೆಂಕಟಲಕ್ಷ್ಮಮ್ಮ ಮಾತನಾಡಿ, ಶಾಲಾ ಕಾಲೇಜುಗಳಿಂದ ೨೦೦ ಮೀಟರ್ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಸದರಿ ಕಾಯಿದೆಯಡಿ ನಿಷೇಧಿಸಲಾಗಿದ್ದು, ಪ್ರತಿ ಶಾಲೆ, ಕಾಲೇಜು ಬಳಿ ನಿಷೇಧದ ಕುರಿತು ನಾಮಫಲಕ ಹಾಕುವುದು ಕಡ್ಡಾಯವಾಗಿದೆ ಎಂದರು.ಕಾನೂನಿನ ಅರಿವಿಲ್ಲದೇ ಅಪರಾಧ ಮಾಡಿದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ನಿತ್ಯ ಜೀವನದಲ್ಲಿ ಅಗತ್ಯವಾದ ಕಾನೂನುಗಳ ಅರಿವು ಇದ್ದರೆ ನೆಮ್ಮದಿಯ ವಿವಾದ ರಹಿತ ಜೀವನ ನಡೆಸಬಹುದು ಎಂದರು.ಬಾಲ್ಯ ವಿವಾಹ ಅಪರಾಧ

ಕೆಜಿಎಫ್‌ನ ಮಕ್ಕಳ ಸಹಾಯವಾಣಿಯ ಅಶ್ವಿನಿ ಮಾತನಾಡಿ, ಬಾಲ್ಯವಿವಾಹ ಅಪರಾಧ ಮಾತ್ರವಲ್ಲ, ಇದು ಮಕ್ಕಳ ಬದುಕನ್ನೇ ನಾಶಪಡಿಸುತ್ತದೆ, ಅವರಿಗೆ ಅವರೇ ಮಕ್ಕಳಾಗಿರುವಾಗ ಮತ್ತೊಂದು ಮಗುವಿಗೆ ತಾಯಿಯಾದರೆ ಹೇಗೆ ನಿಭಾಯಿಸುತ್ತಾರೆ, ಆರೋಗ್ಯಕ್ಕೂ ಮಾರಕ ಎಂದು ಎಚ್ಚರಿಸಿ, ಸುತ್ತಮುತ್ತ ಬಾಲ್ಯವಿವಾಹ ಆಗುತ್ತಿದ್ದರೆ ನೀವು ಕೂಡಲೇ ೧೦೯೮ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು, ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.ಈ ಸಂದರ್ಭದಲ್ಲಿ ಎನ್‌ಎಎಲ್‌ಎಸ್‌ಎ ಸಹಾಯವಾಣಿ ೧೫೧೦೦ ಕುರಿತು ಮಾಹಿತಿ ನೀಡಲಾಯಿತು, ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಶಿಕ್ಷಕರಾದ ಸತೀಶ್‌ಕುಮಾರ್, ನಾರಾಯಣರೆಡ್ಡಿ, ಕಾಳಿದಾಸ, ಭಾರತಿ, ಉಮೇರಾ ಫಾತಿಮಾ, ವನಜಾಕ್ಷಿ, ವಾಣಿ, ಕೋಮಲ, ಜುಮೇರಾ ಅಂಜುಂ, ಅನುಸೂಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!