ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ: ಜಿ. ಲಕ್ಷ್ಮೀಕಾಂತ ರೆಡ್ಡಿ

KannadaprabhaNewsNetwork |  
Published : Apr 16, 2026, 01:15 AM IST
47 | Kannada Prabha

ಸಾರಾಂಶ

ಬಾಲ್ಯವಿವಾಹವು ಅನಾದಿ ಕಾಲದಿಂದ ನಡೆದು ಬಂದ ಅನಿಷ್ಟ ಪದ್ಧತಿಯಾಗಿದ್ದು, ಇದು 21ನೇ ಶತಮಾನದಲ್ಲೂ ಆಚರಣೆಯಲ್ಲಿರುವುದು ಶೋಚನೀಯ ಸಂಗತಿ. ಏ.20 ರಂದು ಬಸವ ಜಯಂತಿ ಮತ್ತು ಅಕ್ಷಯ ತೃತೀಯ ದಿನವಾಗಿದ್ದು, ಬಾಲ್ಯ ವಿವಾಹ ಪ್ರಕರಣ ಹೆಚ್ಚು ನಡೆಯುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಾಲ್ಯವಿವಾಹವು ಅನಾದಿ ಕಾಲದಿಂದ ನಡೆದು ಬಂದ ಅನಿಷ್ಟ ಪದ್ಧತಿಯಾಗಿದ್ದು, ಇದು 21ನೇ ಶತಮಾನದಲ್ಲೂ ಆಚರಣೆಯಲ್ಲಿರುವುದು ಶೋಚನೀಯ ಸಂಗತಿ. ಏ.20 ರಂದು ಬಸವ ಜಯಂತಿ ಮತ್ತು ಅಕ್ಷಯ ತೃತೀಯ ದಿನವಾಗಿದ್ದು, ಬಾಲ್ಯ ವಿವಾಹ ಪ್ರಕರಣ ಹೆಚ್ಚು ನಡೆಯುವ ಸಾಧ್ಯತೆ ಇದ್ದು, ಎಲ್ಲಾ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.

ಬಾಲ್ಯವಿವಾಹ ಎಂದರೆ 18 ವರ್ಷದೊಳಗಿನ ಹುಡುಗಿ ಹಾಗೂ 21 ವರ್ಷದೊಳಗಿನ ಹುಡುಗನ ನಡುವೆ ನಡೆಯುವ ಮದುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೆ ಇಂತಹ ಮದುವೆಯನ್ನು ಬಾಲ್ಯವಿವಾಹ ಎಂದು ಪರಿಗಣಿಸಲಾಗುತ್ತದೆ.

ಬಾಲ್ಯವಿವಾಹ ನಿಷೇಧ ಅಧಿನಿಯಮ 2016 ಪ್ರಕಾರ ಮದುವೆ ಏರ್ಪಡಿಸಿದ ಪೋಷಕರು ಅಥವಾ ಪಾಲಕರು 18 ವರ್ಷದೊಳಗಿನ ಹುಡುಗಿಯನ್ನು ಮದುವೆಯಾಗುವ ವಯಸ್ಕ ವ್ಯಕ್ತಿ ಮತ್ತು ಮದುವೆಯಲ್ಲಿ ಭಾಗವಹಿಸುವ ಎಲ್ಲಾ ರೀತಿಯಲ್ಲಿ ಸಹಕರಿಸಿದ ಕುಟುಂಬಸ್ಥರನ್ನು ಕೂಡ ತಪ್ಪಿತಸ್ಥರು ಎಂದು ಪರಿಗಣಿಸಿ ಇವರ ವಿರುದ್ಧ ಈ ಕಾಯ್ದೆ ಅನ್ವಯ ಒಂದು ವರ್ಷಕ್ಕೆ ಕಡಿಮೆಯಿಲ್ಲದ ಅಂದರೆ ಎರಡು ವರ್ಷಗಳ ಕಾಲ ವಿಸ್ತರಿಸಬಹುದಾದ ಕಠಿಣ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂ. ಗಳವರೆಗಿನ ದಂಡ ಅಥವಾ ಇವರೆಡರಿಂದಲೂ ಶಿಕ್ಷೆಗೆ ಒಳಪಡುತ್ತಾರೆ.

ಈ ಕಾಯ್ದೆಯಡಿ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ತನ್ನ ಅಧಿಕಾರ ವ್ಯಾಪ್ತಿಯಡಿ ಬಾಲ್ಯವಿವಾಹ ಜರುಗುತ್ತಿರುವ ಮಾಹಿತಿ ಬಂದಾಗ ಸ್ವಪ್ರೇರಿತವಾಗಿ ದೂರು ದಾಖಲು ಮಾಡಲು ಅವಕಾಶವಿದೆ. ಅಂತೆಯೇ ಇದು ಕೇವಲ ಸರ್ಕಾರಿ ಅಧಿಕಾರಿಗಳ ಜವಾಬ್ದಾರಿ ಆಗದೇ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಬಾಲ್ಯವಿವಾಹ ನಿಷೇಧಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಗೆ ಬರುವ ಧಾರ್ಮಿಕ ಸ್ಥಳಗಳಲ್ಲಿ ಮತ್ತು ಕಲ್ಯಾಣಮಂಟಪಗಳಲ್ಲಿ ಸಾಮೂಹಿಕ ಅಥವಾ ವೈಯಕ್ತಿಕ ವಿವಾಹದಲ್ಲಿ ಯಾವುದೇ ಬಾಲ್ಯವಿವಾಹ ಜರುಗದಂತೆ ಕ್ರಮವಹಿಸಬೇಕು. ಜಿಲ್ಲೆಯಲ್ಲಿ ಬಾಲ್ಯವಿವಾಹ ನಡೆಯುತ್ತಿರುವುದು ಗಮನಕ್ಕೆ ಬಂದರೆ ತುರ್ತಾಗಿ ಮಕ್ಕಳ ಸಹಾಯವಾಣಿ 1098, ಪೊಲೀಸ್ ಸಹಾಯವಾಣಿ 112 ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ 0821-2543003 ಹಾಗೂ ಸಂಬಂಧಿಸಿದ ಸಮೀಪದ ಪೊಲೀಸ್ ಠಾಣೆಗೆ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬಾಲ್ಯವಿವಾಹ ತಡೆಗಟ್ಟಲು ಸರ್ಕಾರದಿಂದ ಗುರುತಿಸಲಾದ ಗ್ರಾಪಂ, ಬ್ಲಾಕ್, ನಗರ ವಾರ್ಡ್ ಮತ್ತು ಜಿಲ್ಲಾ / ತಾಲೂಕು ಮಟ್ಟದ ಬಾಲ್ಯವಿವಾಹ ನಿಷೇಧಾಧಿಕಾರಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ, ಬಾಲ್ಯ ವಿವಾಹ ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ, ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು ಅಂಗನವಾಡಿ ಮೇಲ್ವಿಚಾರಕರು, ವಿವಾಹ ನೆರವೇರಿಸುವ ಧಾರ್ಮಿಕ ಮುಖಂಡರು ಮತ್ತು ವಿವಾಹ ಕಾರ್ಯಗಳಲ್ಲಿ ತೊಡಗಿರುವ ಸೇವಾ ಪೂರೈಕೆದಾರರು (ಮುದ್ರಣ ಯಂತ್ರಗಳು, ಟೆಂಟ್ ಪೂರೈಕೆದಾರರು ಮತ್ತು ಕಲ್ಯಾಣ ಮಂಟಪದ ವ್ಯವಸ್ಥಾಪಕರು) ಸೇರಿದಂತೆ ಪ್ರಮುಖ ಪಾಲುದಾರರು ಬಾಲ್ಯವಿವಾಹ ನಡೆಯದಂತೆ ಕ್ರಮವಹಿಸಬೇಕು ಎಂದು ಅವರು ಕೋರಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಕಲ್ಯಾಣ ಸಮಿತಿಯು ಸ್ಥಳೀಯ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರ ಸಹಕಾರದೊಂದಿಗೆ ಬಾಲ್ಯ ವಿವಾಹ ನಡೆಯದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ವರದಾನ
ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೆರೆಗಳ ಪಾತ್ರ ಅತಿಮುಖ್ಯ