ಹಾನಗಲ್ಲ: ಬಾಲ್ಯವಿವಾಹ ಸಮಾಜಕ್ಕಂಟಿದ ಶಾಪ, ಈ ಅಪರಾಧಕ್ಕಿರುವ ಶಿಕ್ಷೆ ದಂಡದ ಬಗೆಗೂ ಎಚ್ಚರವಿರಲಿ ಎಂದು ಹಾನಗಲ್ಲ ಸಿವಿಲ್ ನ್ಯಾಯಾಧೀಶ ಎಸ್.ಕೆ. ಜನಾರ್ಧನ್ ತಿಳಿಸಿದರು.ಹಾನಗಲ್ಲಿನ ಜನತಾ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಜನತಾ ಬಾಲಕಿಯರ ಪ್ರೌಢಶಾಲೆ ಸಂಯುಕ್ತವಾಗಿ ಆಯೋಜಿಸಿದ ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯ ವಿವಾಹದ ಭಾವನೆಗಳನ್ನು ಬೇರು ಸಹಿತ ಕಿತ್ತೆಸೆಬೇಕಾಗಿದೆ. ಇದಕ್ಕಾಗಿ ಕಾನೂನಿನೊಂದಿಗೆ ಸಮಾಜ ಎಚ್ಚರಿಕೆ ವಹಿಸಬೇಕಾಗಿದೆ. ಬಾಲ್ಯ ವಿವಾಹದಲ್ಲಿ ಭಾಗಿಯಾದವರಿಗೂ ಶಿಕ್ಷೆ ದಂಡವಿದೆ. ಅಪ್ರಾಪ್ತ ಮಹಿಳೆಯರನ್ನು ಕಾಪಾಡುವ ಹೊಣೆ ಈ ಸಮಾಜದ್ದಾಗಿದೆ. ಬಾಲ್ಯ ವಿವಾಹ ತಡೆಗಟ್ಟಲು ಎಲ್ಲರು ಒಟ್ಟಾಗಿ ಶ್ರಮಿಸೋಣ ಎಂದರು.ನ್ಯಾಯವಾದಿ ವೀಣಾ ಬ್ಯಾತನಾಳ ಮಾತನಾಡಿ, ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮಗಳು, ಆರೋಗ್ಯ ಸಮಸ್ಯೆಗಳ ಬಗೆಗೆ ಅರಿವು ಮೂಡಿಸಬೇಕಾಗಿದೆ. ಕಾನೂನಿನಲ್ಲಿ ಬಾಲ್ಯ ವಿವಾಹಕ್ಕೆ ಅವಕಾಶವಿಲ್ಲ. ಅರಿವು ಇಲ್ಲದಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಸಮಾಜದಲ್ಲ ಎಲ್ಲರಿಗೂ ಇದರ ಅರಿವು ಮೂಡಿಸಲು ಸ್ವಯಂ ಪ್ರೇರಣೆಯಿಂದ ಮುಂದಾಗಿರಿ. ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ ತಕ್ಷಣ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯಬೇಕು ಎಂದರು.ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್. ಅಕ್ಕಿವಳ್ಳಿ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ಪಿ.ವಾಯ್.ಗುಡಗುಡಿ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಪಿ. ಭೋಸ್ಲೆ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಗುಂಡಪಲ್ಲಿ, ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ರೇಣುಕಾ ಹಾವೇರಿ, ಮುಖ್ಯಾಪಾಧ್ಯಾಯ ಸಿ.ಎಸ್. ಲಂಗಟಿ ಮುಖ್ಯ ಅತಿಥಿಗಳಾಗಿದ್ದರು. ಶಿಕ್ಷಕರಾದ ಕೆ.ಕೆ. ರೂಪಶ್ರೀ, ರಾಕೇಶ ಜಿಗಳಿ, ಕೆ.ರೇಣುಕಾ, ನಿರಂಜನ ಗುಡಿ, ಪ್ರಕಾಶ ಚವ್ಹಾಣ, ಗೌರಿ ಕೊಂಡೋಜಿ, ತೇಜಸ್ವಿನಿ ಜಾಧವ, ಹರೀಶ ಹದ್ಲವರ, ಗೀತಾ ಎಸ್., ಸಂಜನಾ ಹಿರಳ್ಳಿ, ಕೀರ್ತಿ ಗಿರಿಯಣ್ಣನವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.