ಭಟ್ಕಳ: ಮಕ್ಕಳು ತಂದೆ- ತಾಯಿ, ಗುರು ಹಿರಿಯರ ಬಗ್ಗೆ ಗೌರವ, ಅಭಿಮಾನ ಬೆಳೆಸಿಕೊಂಡು ಸಂಸ್ಕಾರಯುತರಾಗಬೇಕು ಎಂದು ಗೋಕರ್ಣ ಪರ್ತಗಾಳಿ ಮಠದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ತಿಳಿಸಿದರು.
ಶಿರಾಲಿಯ ಅಳ್ವೆಕೋಡಿಯ ದುರ್ಗಾಪರಪಮೇಶ್ವರಿ ದೇವಿ ಸಭಾಭವನದಲ್ಲಿ ಭಾನುವಾರ ಸಂಜೆ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲೂಕಿನಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಪಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ವಿದ್ಯಾರ್ಥಿಗಳು ಉನ್ನತ ವ್ಯಾಸಾಂಗ ಮಾಡಿ ಯಾವುದೇ ರೀತಿಯ ಉನ್ನತ ಹುದ್ದೆಗೆ ಹೋದರೂ ತಂದೆ- ತಾಯಿ, ಗುರು- ಹಿರಿಯರನ್ನು ಮರೆಯಬಾರದು. ಮಕ್ಕಳನ್ನು ಉತ್ತಮವಾಗಿ ಬೆಳೆಸಲು ಮತ್ತು ವಿದ್ಯೆ ಕೊಡಿಸಲು ಪಾಲಕರು ಸಾಕಷ್ಟು ತ್ಯಾಗ ಮಾಡುತ್ತಾರೆ. ಆದರೆ ಮಕ್ಕಳು ದೊಡ್ಡವರಾದಾಗ ಈ ತ್ಯಾಗ ಮರೆಯದೇ ಇದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವ ಕೆಲಸ ಮಾಡಬೇಕು. ಅಳ್ವೆಕೋಡಿ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟಿನವರು ಜಾತಿ, ಮತ ಭೇದ ಇಲ್ಲದೇ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ. ಇಂತಹ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳಿಗೆ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ಆಗಿದೆ ಎಂದರು.
ಅಳ್ವೆಕೋಡಿ ಮಾರಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಾ ಎಂ. ಮೊಗೇರ ಮಾತನಾಡಿ, ದುರ್ಗಾದೇವಿ ಚಾರಿಟೇಬಲ್ ಟ್ರಸ್ಟಿನವರು ವೈದ್ಯಕೀಯ ಶಿಬಿರ, ಪ್ರೌಢಶಾಲೆಗೆ ನೆರವು, ಧರ್ಮಾರ್ಥ ಸಭಾಭವನ ಹೀಗೆ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ವರ್ಷಂಪ್ರತಿ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಜಾತಿ, ಮತ ಎಣಿಸದೇ ನೆರವು ನೀಡುತ್ತಿರುವುದು ಶ್ಲಾಘನಾರ್ಹ ಕಾರ್ಯ ಎಂದರು.ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ, ಶಿಕ್ಷಣ ಸಂಯೋಜಕ ಅಶೋಕ ಆಚಾರ್ಯ ಮಾತನಾಡಿದರು. ದುರ್ಗಾದೇವಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಪ್ರಮುಖರಾದ ಹನುಮಂತ ನಾಯ್ಕ, ಯಾದವ ಮೊಗೇರ, ಅಣ್ಣಪ್ಪ ಮೊಗೇರ, ಬಾಬು ಮೊಗೇರ, ನಾರಾಯಣ ಮೊಗೇರ, ಜಟಕಾ ಮೊಗೇರ, ಮಂಜುನಾಥ ಕೋಡಿಹಿತ್ಲು ಮುಂತಾದವರಿದ್ದರು.
ಚಾರಿಟೇಬಲ್ ಟ್ರಸ್ಟಿನ ಕಾರ್ಯದರ್ಶಿ ನಾರಾಯಣ ದೈಮನೆ ಸ್ವಾಗತಿಸಿದರು. ಅರವಿಂದ ಪೈ ವರದಿ ವಾಚಿಸಿದರು. ಶಿಕ್ಷಕರಾದ ಶ್ರೀಧರ ಶೇಟ್, ರಾಜೀವಿ ಮೊಗೇರ ನಿರೂಪಿಸಿದರು. ಸಭೆಯಲ್ಲಿ 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅದರಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.