ಜಿಲ್ಲೆಯಲ್ಲಿ ಹೆಚ್ಚಿದ ಬಾಲ್ಯವಿವಾಹ, ಪೋಕ್ಸೋ ಪ್ರಕರಣ

KannadaprabhaNewsNetwork |  
Published : Jun 16, 2025, 02:48 AM ISTUpdated : Jun 16, 2025, 02:49 AM IST
ಎಚ್ ಎಚ್ ಆರ್ ಪಿ 3. ಆರ್.ಎಲ್.ಲಕ್ಷ್ಮೀಪತಿ. | Kannada Prabha

ಸಾರಾಂಶ

ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು, ಸಮಾಜವಾದದ ತವರು, ಸುಸಂಸ್ಕೃತರ ಜಿಲ್ಲೆ ಎಂಬ ಹಲವಾರು ಹೆಗ್ಗಳಿಕೆಗಳನ್ನು ಹೊಂದಿದ ಜಿಲ್ಲೆ. ಆದರೆ ಇಂದು ಎಲ್ಲಾ ಹೊಗಳಿಕೆಗಳಿಗೂ ಮಸಿ ಬಳಿಯುವಂತೆ ರಾಜ್ಯದಲ್ಲೇ ಅತೀ ಹೆಚ್ಚು ಬಾಲ್ಯವಿವಾಹ ಮತ್ತು ಪೋಕ್ಸೋ ಪ್ರಕರಣಗಳು ನಡೆದಿರುವ ಜಿಲ್ಲೆ ಎಂಬ ಕುಖ್ಯಾತಿಯನ್ನೂ ಸಹ ಪಡೆದುಕೊಂಡಿರುವುದು ದುರದೃಷ್ಟವೇ ಸರಿ.

ಅರಹತೊಳಲು ಕೆ.ರಂಗನಾಥ

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು, ಸಮಾಜವಾದದ ತವರು, ಸುಸಂಸ್ಕೃತರ ಜಿಲ್ಲೆ ಎಂಬ ಹಲವಾರು ಹೆಗ್ಗಳಿಕೆಗಳನ್ನು ಹೊಂದಿದ ಜಿಲ್ಲೆ. ಆದರೆ ಇಂದು ಎಲ್ಲಾ ಹೊಗಳಿಕೆಗಳಿಗೂ ಮಸಿ ಬಳಿಯುವಂತೆ ರಾಜ್ಯದಲ್ಲೇ ಅತೀ ಹೆಚ್ಚು ಬಾಲ್ಯವಿವಾಹ ಮತ್ತು ಪೋಕ್ಸೋ ಪ್ರಕರಣಗಳು ನಡೆದಿರುವ ಜಿಲ್ಲೆ ಎಂಬ ಕುಖ್ಯಾತಿಯನ್ನೂ ಸಹ ಪಡೆದುಕೊಂಡಿರುವುದು ದುರದೃಷ್ಟವೇ ಸರಿ.

ಜಿಲ್ಲೆಯಲ್ಲಿ ಏಪ್ರಿಲ್ 2024 ರಿಂದ ಮಾರ್ಚ್ 2025 ರ ವರೆಗಿನ ಅಂಕಿಅಂಶಗಳ ಪ್ರಕಾರ 79 ಬಾಲ್ಯ ವಿವಾಹ ಪ್ರಕರಣ ಮತ್ತು 231 ಪ್ರೋಕ್ಸೋ ಪ್ರಕರಣಗಳು ದಾಖಲಾಗಿವೆ ಎಂಬುದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ರಕ್ಷಣಾ ಇಲಾಖೆಯ ಮಾಹಿತಿ. ಆದರೆ ದಾಖಲೆಗೆ ಸಿಗದೇ ಇರುವ ಬಹಳಷ್ಟು ಪ್ರಕರಣಗಳು ಇರುವುದು ಸಹ ಸತ್ಯ. ಅಂತಹ ಪ್ರಕರಣಗಳು ಸದ್ದಿಲ್ಲದೇ ಮುಚ್ಚಿ ಹೋಗಿವೆ. ಬಲಾಢ್ಯರು ಹಣದ ಆಮಿಷ, ಜೀವ ಬೆದರಿಕೆ ಮತ್ತು ಕುಟುಂಬ ಗೌರವದ ಹೆಸರಿನಲ್ಲಿ ದುರ್ಬಲರನ್ನು ಸುಮ್ಮನಾಗಿಸಿರುವ ಉದಾಹರಣೆಗಳು ಸಾಕಷ್ಟಿವೆ.

ದೇಶದ ಪ್ರಧಾನಿಗಳು “ಬೇಟಿ ಬಚಾವೋ, ಬೇಟಿ ಪಡಾವೋ” ಎಂಬ ಘೋಷವಾಕ್ಯದ ಮೂಲಕ ನಾಡಿನ ಹೆಣ್ಣು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಹೆಣ್ಣು ಮಕ್ಕಳ ರಕ್ಷಣೆ, ಪೋಷಣೆ, ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಸರ್ಕಾರಗಳು ಶ್ರಮಿಸುತ್ತಿವೆ. ಆದರೆ ನಮ್ಮ ಯುವ ಸಮೂಹ ಹಲವಾರು ದುಶ್ಚಟಗಳಿಗೆ ಬಲಿಯಾಗಿ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ವಿಪರ್ಯಾಸ. ಹೆಣ್ಣನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಹಾಗೆಯೇ ಮಕ್ಕಳನ್ನು ದೇವೆರಂತೆ ಕಾಣುತ್ತೇವೆ. ಆದರೆ ಅಂತಹ ಮಕ್ಕಳ ಮೇಲೆ ಅತ್ಯಾಚಾರ ನಡೆಸುವ ಕ್ರೂರ ಮನಸ್ಥಿತಿಯ ವ್ಯಕ್ತಿಗಳಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

------------------

ತಾಲೂಕುವಾರು ಬಾಲ್ಯವಿವಾಹ ಪ್ರಕರಣಗಳು.

1)ಶಿವಮೊಗ್ಗ - 29.

2)ಭದ್ರಾವತಿ – 24.

3)ಸೊರಬ - 7.

4)ಸಾಗರ - 2.

5)ಹೊಸನಗರ – 1.

6)ತೀರ್ಥಹಳ್ಳಿ – 2.

7)ಶಿಕಾರಿಪುರ - 14.

ಒಟ್ಟು 79 ಬಾಲ್ಯವಿವಾಹ ಪ್ರಕರಣಗಳು ನಡೆದಿದ್ದು ಎಫ್‌ಐಆರ್‌ ದಾಖಲಾಗಿವೆ.

----------------------

ತಾಲೂಕುವಾರು ಪೋಕ್ಸೋ ಪ್ರಕರಣಗಳು

1)ಶಿವಮೊಗ್ಗ - 76.

2)ಭದ್ರಾವತಿ - 48.

3)ಸೊರಬ - 18.

4)ಸಾಗರ - 15.

5)ಹೊಸನಗರ – 12.

6)ತೀರ್ಥಹಳ್ಳಿ - 14.

7)ಶಿಕಾರಿಪುರ - 48.

ಒಟ್ಟು 231 ಪೋಕ್ಸೋ ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಾಗಿದೆ.

------------------

ಕೋಟ್.1

ಇಂತಹ ಪ್ರಕರಣಗಳಿಂದ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಶಿವಮೊಗ್ಗ ಪ್ರಗತಿಪರ ಜಿಲ್ಲೆ. ಅಂತದರಲ್ಲಿ ಈ ರೀತಿಯ ಘಟನೆಗಳು ಇನ್ನು ಮುಂದೆ ನಡೆಯಬಾರದು. ಇದರ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ತಿಳುಳಿಕೆಯನ್ನು ಮೂಡಿಸಬೇಕು. ಗ್ರಾಮದ ಹಿರಿಯರು, ಬುದ್ಧಿ ಜೀವಿಗಳು ಮಕ್ಕಳ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು. ಸರ್ಕಾರದ ಜೊತೆಗೆ ಸಾರ್ವಜನಿಕರೂ ಸಹಕಾರ ನೀಡಿದರೆ ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಬಹುದು.

- ಶಾರದಾ ಪೂರ್ಯಾ ನಾಯ್ಕ್. ಶಾಸಕಿ.

---------------------

ಕೋಟ್. 2.

ಮಕ್ಕಳಿಗೆ ಶಾಲಾ ಹಂತದಲ್ಲಿ ಬಾಲ್ಯವಿವಾಹ ಮತ್ತು ಲೈಂಗಿಕ ದೌರ್ಜನ್ಯದ ಬಗ್ಗೆ ಅರಿವು ಮೂಡಿಸಬಹುದು. ಆದರೆ, ಮೆಟ್ರಿಕ್ ನಂತರ ಶಾಲೆಯಿಂದ ಹೊರಗೆ ಉಳಿಯುವಂತಹ ಮಕ್ಕಳಲ್ಲಿ ಕೆಲವರು ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಕಂಡುಬರುತ್ತಿದೆ. ಈ ರೀತಿ ಶಾಲೆಯಿಂದ ವಂಚಿತರಾದ ಮಕ್ಕಳು ತಂದೆ-ತಾಯಿಯ ಹಿಡಿತಕ್ಕೆ ಸಿಗದೆ ಪ್ರೀತಿ-ಪ್ರೇಮ ಅಂತ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳನ್ನು ಪ್ರೀತಿಸಿ ಮದುವೆಯಾಗುವವರೆಗೂ ಮುಂದುವರಿದಿದ್ದಾರೆ. ಆದ್ದರಿಂದ ಬಾಲ್ಯವಿವಾಹಗಳು ಕಂಡುಬರುತ್ತಿವೆ. ಈ ಬಾಲ್ಯ ವಿವಾಹಗಳೂ ಕೂಡ ಪೋಕ್ಸೋ ಪ್ರಕರಣಗಳಾಗಿವೆ. ಆದ್ದರಿಂದ ಸಮಾಜದಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಅಗತ್ಯತೆ ಹೆಚ್ಚಿದೆ.

- ಆರ್.ಮಂಜುನಾಥ್. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ.ಶಿವಮೊಗ್ಗ.

-----------------

ಕೋಟ್.3.

ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯವಿವಾಹದಂತ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾರಣ ಜನರಲ್ಲಿ ಇದರ ಬಗ್ಗೆ ಅರಿವಿನ ಕೊರತೆ ಇದೆ. ನಮ್ಮ ಠಾಣೆಯ ವ್ಯಾಪ್ತಿಯಲ್ಲಿ ಈ ವರ್ಷ 8 ಪ್ರಕರಣಗಳು ದಾಖಲಾಗಿದ್ದು, ಎಲ್ಲದರಲ್ಲೂ ತಂದೆ ಕುಡಿತಕ್ಕೆ ದಾಸನಾಗಿರುವುದು ಅಥವಾ ಸಿಂಗಲ್ ಪೇರೆಂಟ್ ಮಕ್ಕಳು ಈ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಸಾಮಾನ್ಯವಾಗಿದೆ.

-ಆರ್.ಎಲ್.ಲಕ್ಷ್ಮೀಪತಿ. ಪೊಲೀಸ್ ಇನ್ಸ್‌ಪೆಕ್ಟರ್‌. ಹೊಳೆಹೊನ್ನೂರು ಪೊಲೀಸ್ ಠಾಣೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''